ಸಾರಾಂಶ
ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಆಟೋ ಡಿಕ್ಕಿ ಹೊಡೆದು 2021ರಲ್ಲಿ ಮೃತಪಟ್ಟಿದ್ದ ಪ್ರಾಧ್ಯಾಪಕನ ಕುಟುಂಬಕ್ಕೆ ₹1.41 ಕೋಟಿ ಪರಿಹಾರ ನೀಡಬೇಕೆಂದು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ರಮೇಶ ಗಾಣಿಗೇರ ಆದೇಶ
ಗಂಗಾವತಿ : ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಆಟೋ ಡಿಕ್ಕಿ ಹೊಡೆದು 2021ರಲ್ಲಿ ಮೃತಪಟ್ಟಿದ್ದ ಪ್ರಾಧ್ಯಾಪಕನ ಕುಟುಂಬಕ್ಕೆ ₹1.41 ಕೋಟಿ ಪರಿಹಾರ ನೀಡಬೇಕೆಂದು ವಾಹನದ ಮಾಲಿಕನಿಗೆ ಗಂಗಾವತಿಯ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ರಮೇಶ ಗಾಣಿಗೇರ ಆದೇಶಿಸಿದ್ದಾರೆ.
ಯಲಬುರ್ಗಾದಲ್ಲಿ ಮಾ.10, 2021ರಂದು ಸಹಾಯಕ ಪ್ರಾಧ್ಯಾಪಕ ರಾಜಶೇಖರ ಅಯ್ಯನಗೌಡ ಪಾಟೀಲ್ ರಸ್ತೆ ಬದಿ ಬೈಕ್ ನಿಲ್ಲಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಅತಿ ವೇಗವಾಗಿ ಬಂದ ಆಟೋ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದರು.
ಆಗ ಅಪ್ರಾಪ್ತನಾಗಿದ್ದ (17) ಮಹಾಂತೇಶ ಕುದರಿಕೋಟಿ ಆಟೋ ಚಲಾಯಿಸಿದ್ದ. ಈ ಕುರಿತು ಮೃತರ ಪತ್ನಿ ಚನ್ನಮ್ಮ ಗಂಗಾವತಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರಿ, ಅಪ್ರಾಪ್ತನಿಗೆ ವಾಹನ ಚಲಾಯಿಸಲು ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿ ವಾಹನದ ಮಾಲೀಕ ಶಿವಪ್ಪ ಬಾವಿಮನಿ ಹಾಗೂ ವಿಮಾ ಕಂಪನಿ ಮೃತ ರಾಜಶೇಖರ ಕುಟುಂಬಕ್ಕೆ ₹1.41 ಕೋಟಿ ಪರಿಹಾರ ನೀಡುವಂತೆ ಏ.9ರಂದು ಆದೇಶಿಸಿದೆ. ಕಕ್ಷಿದಾರರ ಪೈಕಿ ಕಾಶಿನಾಥಸ್ವಾಮಿ ಹಿರೇಮಠ ವಾದ ಮಂಡಿಸಿದ್ದರು.