ಸಾರಾಂಶ
ಕನ್ನಡಪ್ರಭ ವಾರ್ತೆ ಔರಾದ್
ಶುಕ್ರವಾರ ರಾತ್ರಿ ಬಿದ್ದ ಅಕಾಲಿಕ ಮಳೆಯ ಮಧ್ಯ ಸಿಡಿಲು ಬಡಿದು ತಾಲೂಕಿನ ರಾಯಪಳ್ಳಿ ಗ್ರಾಮದಲ್ಲಿ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದರೆ ಧೂಪತಮಹಾಗಾಂವ್‌ದಲ್ಲಿ ಎತ್ತು ಹಾಗೂ ಆಕಳು ಮೃತಪಟ್ಟ ಘಟನೆ ಜರುಗಿದೆ.ಧೂಪತಮಹಾಗಾಂವ್ ಗ್ರಾಮದ ರಾಮ ಪ್ರಭು ಅವರಿಗೆ ಸೇರಿದ ಒಂದು ಎತ್ತು (50ಸಾವಿರ ರು. ಮೌಲ್ಯ ) ಮತ್ತು ಅದೇ ಗ್ರಾಮದ ಸಂಜು ಭೋಜೆಪ್ಪ ಯನಗುಂದೆ ಅವರಿಗೆ ಸೇರಿದ ಒಂದು ಆಕಳು ಕರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮನೆಯ ಹೊರಗಡೆ ಕಟ್ಟಿರುವ ಎತ್ತುಗಳ ಗುಡಿಸಿಲಿನ ಮೇಲೆ ಸಿಡಿಲು ಬಿದ್ದು ಒಂದು ಎತ್ತು, ಒಂದು ಆಕಳು ಕರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಒಂದು ಎತ್ತಿಗೆ ಸಿಡಿಲಿನಿಂದ ಸುಟ್ಟ ಗಾಯಗಳಾಗಿವೆ.ಅದೇ ರೀತಿ ತಾಲೂಕಿನ ರಾಯಪಳ್ಳಿ ಗ್ರಾಮದಲ್ಲಿ ಮನೆಯ ಮಾಳಿಗೆ ಮೇಲೆ ತೊಗರಿ ಬೆಳೆ ಇರುವ ಚೀಲ ತರಲು ಹೋದಾಗ ಸಿಡಿಲು ಬಡಿದು ಗಾಳಿಯ ರಭಸಕ್ಕೆ ಕೆಳಗೆ ಬಿದ್ದು ಶೈಲೂ ರಾಮಲು (36) ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಔರಾದ್ ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾಹಿತಿ ನೀಡಿದ್ದಾರೆ.
ಕಮಲನಗರದಲ್ಲಿ ಒಂದು ಗಂಟೆ ಮಳೆ: ಬೀದರ್ ಹಾಗೂ ಬಸವಕಲ್ಯಾಣ ನಗರದಲ್ಲಿ ತುಂತುರು ಮಳೆಯಾದರೆ ಔರಾದ್ ಹಾಗೂ ಕಮಲನಗರದಲ್ಲಿ ಕಳೆದ ಶುಕ್ರವಾರ ರಾತ್ರಿ ಅರ್ಧ ಗಂಟೆಯ ವರೆಗೆ ಬಿರುಗಾಳಿ ಸಹಿತ ಮಳೆಯಾಗಿದೆ.ಕಮಲನಗರ ಭಾಗದಲ್ಲಿ ಭಾರಿ ಮಳೆ, ಬಿರುಗಾಳಿ ಹೊಡೆತಕ್ಕೆ ಮರ ಗಿಡಗಳು ಧರೆಗುರುಳಿದಿದ್ದು ಬಸ್ ಸಂಚಾರ ಸ್ಥಗಿತವಾಗಿದೆ, ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಅಕಾಲಿಕ ಮಳೆಯಿಂದ ಮಾವಿನ ಗಿಡದಲ್ಲಿ ಬಿಟ್ಟಂತಹ ಮಾವಿನ ಕಾಯಿ ನೆಲಕ್ಕುರುಳಿ ರೈತರಿಗೆ ಅಪಾರ ಪ್ರಮಾಣದ ಹಾನಿಯುಂಟಾಗಿದೆ.
ಮರಗಿಡಗಳು ಬಿದ್ದು ಮದನೂರ -ಕಮಲನಗರ, ಮದನೂರ -ಖತಗಾಂವ್ ಸಂಪರ್ಕ ಕಡಿತವಾಗಿತ್ತು. ರಸ್ತೆ ಮಧ್ಯದಲ್ಲಿ ಮರ ಗಿಡಗಳು ಬಿದ್ದುದ್ದರಿಂದ ಕಮಲನಗರ – ಮುರ್ಕಿ ಮದನೂರ ಮಾರ್ಗವಾಗಿ ಚಲಿಸುವ ಬಸ್ ಮಧ್ಯ ರಸ್ತೆಯಲ್ಲಿ ಸ್ಥಗಿತಗೊಂಡಿವೆ. ಬಸ್ ಸಂಚಾರಕ್ಕೆ ಮಾರ್ಗವಿಲ್ಲದೆ ಮದನೂರು ಗ್ರಾಮದ ಪ್ರಯಾಣಿಕರಿಗೆ ರಸ್ತೆ ಮಧ್ಯದಲ್ಲಿ ಬಿಟ್ಟು ಕಮಲನಗರ ಪಟ್ಟಣಕ್ಕೆ ಬಸ್ ಹಿಂತಿರುಗಿದೆ ಎಂದು ಪ್ರಯಾಣಿಕರು ಗೋಳು ತೋಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಇದಲ್ಲದೆ ರಸ್ತೆ ಮಧ್ಯದಲ್ಲಿ ಮರ ಗಿಡಗಳು ಬಿದ್ದು ವಿದ್ಯುತ್ ಮತ್ತು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಕಮಲನಗರ ತಾಲೂಕಿನ ಮದನೂರ ಗ್ರಾಮದಲ್ಲಿ ವಿದ್ಯುತ್ ಕಂಬಗಳ ಮೇಲೆ ಮನೆಯ ಮಾಳಿಗೆಯ ಶೀಟುಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿ ಗ್ರಾಮದ ತುಂಬಾ ಕತ್ತಲೆ ಆವರಿಸಿಕೊಂಡು ವಿದ್ಯುತ್ ಸ್ಥಗಿತಗೊಂಡಿದೆ. ಹತ್ತಾರು ಮನೆಗಳ ಮೇಲಿನ ಶೀಟು ಕಳೆದುಕೊಂಡ ಕುಟುಂಬಗಳು ಸಂಕಟದಲ್ಲಿ ಸಿಲುಕಿದ್ದಾರೆ. ರಾತ್ರಿಯಿಡೀ ಜಿಟಿ ಜಿಟಿ ಮಳೆ ಮುಂದುವರಿದಿತ್ತು. ಶನಿವಾರವೂ ಮೋಡ ಕವಿದ ವಾತಾವರಣ ಮುಂದುವರಿದಿತ್ತು.