ಸಾರಾಂಶ
ಹಿರಿಯರಿಗೆ ಬಡಿಸುವ ಕಾರ್ಯಕ್ರಮದಲ್ಲಿ ಭಕ್ಷ್ಯವಾಗಿ ರೂಪಾಂತರಗೊಳ್ಳಬೇಕಾಗಿದ್ದ ಕೋಳಿ ವಿಧಿಯ ಲೀಲೆಗೆ ಸಿಲುಕಿ ತಾನು ಬದುಕಿ ಉಳಿದರೂ ಅನಾಥವಾಗಿದೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಮರ ಬಿದ್ದು ಅದರಡಿ ಸಿಲುಕಿ ದುರಾದೃಷ್ಟವಶಾತ್ ದ್ವಿಚಕ್ರ ವಾಹನ ಸವಾರರೊಬ್ಬರು ಮೃತಪಟ್ಟು, ಅವರು ಒಯ್ಯುತ್ತಿದ್ದ ಕೋಳಿ ಬದುಕುಳಿದು ಅನಾಥವಾಗಿ ಮರದಲ್ಲಿ ಕುಳಿತು ಮೌನವಾಗಿರುವುದು ಕೋಡಿಂಬಾಳ ಪರಿಸರದಲ್ಲಿ ಸುದ್ದಿಗೆ ಗ್ರಾಸವಾಗಿದೆ.ದೀಪಾವಳಿಯಂದು ಹಿರಿಯನ್ನು ನೆನೆಯಲೆಂದು ಶನಿವಾರ, ಕೋಳಿ ಖರೀದಿಸಿ ಮನೆಯತ್ತ ಸಂಚರಿಸುತ್ತಿದ್ದ ವೇಳೆ ಕಡಬ-ಪಂಜ ರಸ್ತೆಯ ಕೋಡಿಂಬಾಳ ಸಮೀಪ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ಧೂಪದ ಮರ ಬಿದ್ದು ಬೈಕ್ ಸವಾರ ಎಡಮಂಗಲ ಗ್ರಾಮದ ದೇವಸ್ಯ ನಿವಾಸಿ ಸೀತಾರಾಮ ಸ್ಥಳದಲ್ಲಿ ಮೃತಪಟ್ಟಿದ್ದರು. ಈ ಸಂದರ್ಭ, ಕೋಳಿ ಅಪಾಯದಿಂದ ಪಾರಾಗಿತ್ತು. ಮನೆಯ ಯಜಮಾನನನ್ನು ಕಳೆದುಕೊಂಡ ಮನೆ ಮಂದಿ ದುಃಖದಿಂದ ಈ ಕೋಳಿಯನ್ನು ಕಡೆಗಣಿಸಿದ್ದು, ಕಳೆದರಡು ದಿನಗಳಿಂದ ಘಟನಾ ಸ್ಥಳದ ಪಕ್ಕದ ಮರದ ಗೆಲ್ಲೊಂದರಲ್ಲಿ ಕೂತು ತನಗೊದಗಿದ ಅದೃಷ್ಟವೋ ನತದೃಷ್ಟವೋ ಯಾವುದರದ್ದೂ ಅರಿವಿಲ್ಲದೆ ಮೌನವಾಗಿದೆ. ಹಿರಿಯರಿಗೆ ಬಡಿಸುವ ಕಾರ್ಯಕ್ರಮದಲ್ಲಿ ಭಕ್ಷ್ಯವಾಗಿ ರೂಪಾಂತರಗೊಳ್ಳಬೇಕಾಗಿದ್ದ ಕೋಳಿ ವಿಧಿಯ ಲೀಲೆಗೆ ಸಿಲುಕಿ ತಾನು ಬದುಕಿ ಉಳಿದರೂ ಅನಾಥವಾಗಿದೆ.