ಆಕಸ್ಮಿಕವಾಗಿ ಗುಂಡು ತಗುಲಿ ವ್ಯಕ್ತಿ ಸಾವು

| Published : Sep 01 2024, 01:55 AM IST

ಸಾರಾಂಶ

ಚಾಲಕ ವೃತ್ತಿ ಮಾಡುತ್ತಿದ್ದ ಮುರಗೋಳಿಯ ಪ್ರಥಮ ಸುಬ್ಬು ನಾಯ್ಕ (೩೨) ಮೃತಪಟ್ಟ ವ್ಯಕ್ತಿ.

ಕುಮಟಾ: ಕೋಳಿ ಶೆಡ್ಡಿಗೆ ಬಂದ ಹೆಬ್ಬಾವನ್ನು ಕೊಲ್ಲಲು ನಾಡಬಂದೂಕಿನಿಂದ ಶೂಟ್ ಮಾಡಿದ ವ್ಯಕ್ತಿಯ ಹಣೆಗೇ ಮರಳಿ ಗುಂಡೇಟು ಬಿದ್ದು ವ್ಯಕ್ತಿ ಮೃತಪಟ್ಟ ವಿಚಿತ್ರ ಘಟನೆ ತಾಲೂಕಿನ ಕತಗಾಲದ ಮುರಗೋಳಿ ಮಜಿರೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಚಾಲಕ ವೃತ್ತಿ ಮಾಡುತ್ತಿದ್ದ ಮುರಗೋಳಿಯ ಪ್ರಥಮ ಸುಬ್ಬು ನಾಯ್ಕ (೩೨) ಮೃತಪಟ್ಟ ವ್ಯಕ್ತಿ. ಈ ಕುರಿತು ಮೃತರ ಪತ್ನಿ ರೇಷ್ಮಾ ಪ್ರಥಮ ನಾಯ್ಕ ನೀಡಿದ ದೂರಿನನ್ವಯ, ಶುಕ್ರವಾರ ತಡರಾತ್ರಿ ಕೋಳಿ ಶೆಡ್ಡಿನಲ್ಲಿ ಹೆಬ್ಬಾವು ಬಂದಿದೆಯೆಂದು ಪ್ರಥಮ ನಾಯ್ಕ, ಮನೆಯಲ್ಲಿದ್ದ ಅನಧಿಕೃತ ನಾಡಬಂದೂಕು ತೆಗೆದುಕೊಂಡು ಹೆಬ್ಬಾವನ್ನು ಹೊಡೆಯಲು ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಬಂದೂಕು ಫೈರ್ ಆಗಿ ಗುಂಡು ಹಣೆಯ ಭಾಗಕ್ಕೆ ಹೊಕ್ಕು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿಸಿದ್ದಾರೆ.

ಪೊಲೀಸರು ಶನಿವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದ ರೇಷ್ಮಾ ಅವರ ಅತ್ತಿಗೆ ರಂಜನಾ ಆನಂದ ಗೋಕಲೆ (೩೫) ನಾಡಬಂದೂಕನ್ನು ತೋಟದಲ್ಲಿ ಬಿಸಾಡಿದ್ದು, ಬಂದೂಕಿನಿಂದ ಸಿಡಿದ ಶೆಲ್ (ಕೇಪ್)ಅನ್ನು ಪರಿಚಯಸ್ಥರಾದ ರಾಮ ಮಾಸ್ತಿ ದೇಶಭಂಡಾರಿ (೫೧) ಅವರೊಡಗೂಡಿ ಸನಿಹದ ಹೊಳೆಗೆ ಬಿಸಾಡಿರುವುದು ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಘಟನೆಯ ಕುರಿತು ನಿಷ್ಕಾಳಜಿಯಿಂದ ಸಾವು ಮತ್ತು ಶಸ್ತ್ರಾಸ್ತ್ರ ಕಾಯಿದೆಯಡಿ ಆರೋಪಿ ರಂಜನಾ ಆನಂದ ಗೋಕಲೆ ಹಾಗೂ ರಾಮ ಮಾಸ್ತಿ ದೇಶಭಂಡಾರಿ ಅವರ ಮೇಲೆ ಪ್ರಕರಣ ದಾಖಲಾಗಿದೆ.

ಲಾರಿಗೆ ಗುದ್ದಿದ ಬೈಕ್ ಸವಾರ ಸಾವು

ಭಟ್ಕಳ: ಬೈಕ್ ಸವಾರನೋರ್ವ ನಿಂತಿದ್ದ ಲಾರಿಯ ಹಿಂಬದಿಗೆ ಗುದ್ದಿ ಗಂಭೀರ ಗಾಯಗೊಂಡು ಸಾವಿಗೀಡಾದ ಘಟನೆ ಮುರುಡೇಶ್ವರದ ಆರೆನ್ನೆಸ್ ಆಸ್ಪತ್ರೆಯ ಎದುರಿನ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.ಮೃತ ಬೈಕ್ ಸವಾರನನ್ನು ಶಿರಾಲಿಯ ನಿವಾಸಿ ನಾರಾಯಣ ಸುಕ್ರಪ್ಪ ನಾಯ್ಕ(42) ಎಂದು ಗುರುತಿಸಲಾಗಿದೆ. ಬೈಕ್ ಹಾಗೂ ಲಾರಿ ಎರಡು ವಾಹನಗಳು ಶಿರಾಲಿ ಕಡೆಯಿಂದ ಹೊನ್ನಾವರ ಕಡೆ ಸಾಗುವಾಗ ಲಾರಿಯ ಎಂಜಿನ್ ನಿಷ್ಕ್ರಿಯಗೊಂಡ ಕಾರಣ ಲಾರಿಯು ಹೆದ್ದಾರಿ ಮೇಲೆ ಹಠಾತ್ ನಿಂತಿತು. ಇದೇ ಸಮಯಕ್ಕೆ ವೇಗವಾಗಿ ಬರುತ್ತಿದ್ದ ಬೈಕ್ ನಿಯಂತ್ರಿಸಲಾಗದೇ ಲಾರಿಯ ಹಿಂಬದಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.