ಸಾರಾಂಶ
ದಾಬಸ್‍ಪೇಟೆ: ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಅವ್ವೇರಹಳ್ಳಿ ಕೈಗಾರಿಕಾ ಪ್ರದೇಶದ ಕಾಸಿಯಾ ಕಂಪನಿಯ ಸಮೀಪ ನಡೆದಿದೆ. ಬಿಹಾರ ರಾಜ್ಯದ ಸಹಸ್ರ ಜಿಲ್ಲೆಯ ಮಾರ್ ಹೌರ ಗ್ರಾಮದ ನಿತೀಶ್ ಕುಮಾರ್ (19) ಮೃತಪಟ್ಟ ಯುವಕನಾಗಿದ್ದು, ಈತ ಕಂಪನಿಯೊಂದರಲ್ಲಿ ಹೆಲ್ಪರ್ ಕೆಲಸ ಮಾಡಿಕೊಂಡಿದ್ದನು. ವಿನಯ್ ಎಂಬ ಕಂಪನಿಯೊಂದರ ಎಚ್ ಆರ್ ತನ್ನ ಕಂಪನಿಯ ಹೆಲ್ಪರ್ ಆದ ನಿತೀಶ್ ಕುಮಾರ್ ಜೊತೆ ಮಾರುತಿ ಇಕೋ ಸ್ಟಾರ್ ಕಾರಿನಲ್ಲಿ ಹೊನ್ನೇನಹಳ್ಳಿ ಕಡೆಯಿಂದ ಅವ್ವೇರಹಳ್ಳಿ ಕೈಗಾರಿಕಾ ಪ್ರದೇಶದ ಕಡೆಗೆ ಹೋಗುತ್ತಿದ್ದಾಗ ಕೆಂಗಲ್ ಕೆಂಪೋಹಳ್ಳಿ ಕೈಗಾರಿಕಾ ಪ್ರದೇಶದ ಕಡೆಯಿಂದ ವೇಗವಾಗಿ ಬಂದ ಮಾರುತಿ ಸುಜುಕಿ ಎಕ್ಸ್ ಎಲ್ ಕಾರು ಇಕೋ ಸ್ಟಾರ್ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಕೋ ಸ್ಟಾರ್ ಎರಡು- ಮೂರು ಬಾರಿ ಪಲ್ಟಿ ಹೊಡೆದಿದ್ದು, ಕಾರಿನ ಮಧ್ಯೆ ಕುಳಿತಿದ್ದ ನಿತೀಶ್ ಕುಮಾರ್ ಕಾರಿನಿಂದ ರಸ್ತೆಯಲ್ಲಿದ್ದ ವಿದ್ಯುತ್ ಕಂಬಕ್ಕೆ ಬಿದ್ದಿದ್ದು , ತಲೆಗೆ ತೀವ್ರವಾದ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ದಾಬಸ್‍ಪೇಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಜು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.