ಗಯಾನಾದಲ್ಲಿ ಕೊಡಗಿನ ವ್ಯಕ್ತಿಗೆ ಬ್ರೈನ್ ಸ್ಟ್ರೋಕ್: ಭಾರತಕ್ಕೆ ಕರೆತರಲು ಕುಟುಂಬಸ್ಥರ ಪರದಾಟ

| Published : Jul 06 2025, 11:48 PM IST

ಸಾರಾಂಶ

ಗಿರೀಶ್ ಅವರನ್ನು ಭಾರತಕ್ಕೆ ಕರೆಸಿಕೊಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ತಾಯಿ, ಪತ್ನಿ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ದಕ್ಷಿಣ ಅಮೆರಿಕ ಖಂಡದ ಗಯಾನಾದಲ್ಲಿ ಕೊಡಗಿನ ವ್ಯಕ್ತಿಗೆ ಬ್ರೈನ್ ಸ್ಟ್ರೋಕ್ ಆಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಊರಿಗೆ ಕರೆ ತರಲು ಕುಟುಂಬಸ್ಥರು ಪರದಾಟ ನಡೆಸುತ್ತಿದ್ದಾರೆ.

ಮಡಿಕೇರಿ ತಾಲೂಕಿನ ಮದೆನಾಡು ನಿವಾಸಿ ಗಿರೀಶ್‌ ಪನಾಮಾ ಸಿಟಿ ಶೆರಿಫ್ ಜನರಲ್ ಆಸ್ಪತ್ರೆಯಲ್ಲಿ ನರ್ಸಿಂಗ್ ಆಫೀಸರ್ ಆಗಿದ್ದಾರೆ, ದಿಢೀರ್‌ ಬ್ರೈನ್‌ ಸ್ಟ್ರೋಕ್‌ ಸಂಭವಿಸಿ ಮೂರು ದಿನಗಳಿಂದ‌ ಕೋಮಾದಲ್ಲಿದ್ದಾರೆ. ಗಿರೀಶ್ ವಿಚಾರದಲ್ಲಿ ದಾರಿ ಕಾಣದೆ ಪತ್ನಿ, ಕುಟುಂಬಸ್ಥರು ತೀವ್ರ ಪರದಾಟ ನಡೆಸುವಂತಾಗಿದೆ.

ಗಿರೀಶ್ ಅವರನ್ನು ಭಾರತಕ್ಕೆ ಕರೆಸಿಕೊಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ತಾಯಿ, ಪತ್ನಿ ಮನವಿ ಮಾಡಿದ್ದಾರೆ.

ನಾಲ್ಕು ದಿನಗಳ ಹಿಂದೆ ಬ್ರೈನ್ ಸ್ಟ್ರೋಕ್ ಆದ ಕಾರಣ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಕೋಮಾಸ್ಥಿತಿಯಲ್ಲಿ ಇದ್ದಾರೆ. ಗಿರೀಶ್ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕುಟುಂಬಸ್ಥರು, ಅಲ್ಲಿನ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಗಿರೀಶ್‌ನನ್ನು ಭಾರತಕ್ಕೆ ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ. ಆದರೆ ಆಸ್ಪತ್ರೆಯವರು, ಗಿರೀಶ್ ಕೋಮಾಸ್ಥಿತಿಯಲ್ಲಿ ಇರುವುದರಿಂದ ಕುಟುಂಬದವರು ಯಾರಾದರೂ ಬಂದರೆ ಮಾತ್ರವೇ ಕಳುಹಿಸಿಕೊಡಲು ಸಾಧ್ಯ ಎನ್ನುತ್ತಿದ್ದಾರೆ. ಗಿರೀಶ್ ಕರೆಸಿಕೊಳ್ಳಲು ಲಕ್ಷಾಂತರ ರು. ವೆಚ್ಚ ತಗಲುತಿದ್ದು, ಅಷ್ಟು ವೆಚ್ಚ ಭರಿಸಲಾಗದೆ ಕುಟುಂಬ ಪರದಾಡುತ್ತಿದೆ.