ದುಬೈನ ಶಾರ್ಜಾದಲ್ಲಿ ಉದ್ಯೋಗಿಯಾಗಿದ್ದ ಉಡುಪಿ ಜಿಲ್ಲೆಯ ಕುಂದಾಪುರದ ಪ್ರಕಾಶ್ ಕುಂದರ್ (47) ಎಂಬವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ, ಶವವನ್ನು 9 ತುಂಡುಗಳಾಗಿ ಕತ್ತರಿಸಿ ಕಾರಿನ ಡಿಕ್ಕಿಯಲ್ಲಿ ಅಡಗಿಸಿಟ್ಟಿದ್ದ ಭೀಕರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಉಡುಪಿ : ದುಬೈನ ಶಾರ್ಜಾದಲ್ಲಿ ಉದ್ಯೋಗಿಯಾಗಿದ್ದ ಉಡುಪಿ ಜಿಲ್ಲೆಯ ಕುಂದಾಪುರದ ಪ್ರಕಾಶ್ ಕುಂದರ್ (47) ಎಂಬವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ, ಶವವನ್ನು 9 ತುಂಡುಗಳಾಗಿ ಕತ್ತರಿಸಿ ಕಾರಿನ ಡಿಕ್ಕಿಯಲ್ಲಿ ಅಡಗಿಸಿಟ್ಟಿದ್ದ ಭೀಕರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪ್ರಕಾಶ್ ಕುಂದರ್ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಉದ್ಯೋಗಿಯಾಗಿದ್ದರು. ಶಿಕ್ಷಕಿಯಾಗಿರುವ ಪತ್ನಿ ಟೀನಾ ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗನೊಂದಿಗೆ ಕಳೆದ 20 ವರ್ಷಗಳಿಂದ ಶಾರ್ಜಾದಲ್ಲಿ ವಾಸವಾಗಿದ್ದರು.

ಜು. 20 ರಂದು ಸಹೋದರ ಪ್ರಶಾಂತ್ ಕುಂದರ್ ಅವರು ಪ್ರಕಾಶ್ ಗೆ ಕರೆ ಮಾಡಿದ್ದರು, ಸಾಮಾನ್ಯವಾಗಿ ಕರೆ ಸ್ವೀಕರಿಸಿ ಮಾತನಾಡುತಿದ್ದ ಪ್ರಕಾಶ್ ಅಂದು ಕರೆ ಸ್ವೀಕರಿಸದೇ ಕೇವಲ ಟೆಕ್ಸ್ಟ್ ಮೆಸೇಜ್ ಮಾಡಿದ್ದರು. ನಂತರ ಮೊಬೈಲ್ ಸಂಪರ್ಕ ಸಾಧ್ಯವಾಗಿರಲಿಲ್ಲ

ಇದರಿಂದ ಆತಂಕಗೊಂಡ ಕುಟುಂಬಸ್ಥರು ಶಾರ್ಜಾ ವಿಮಾನ ನಿಲ್ದಾಣವನ್ನು ಸಂಪರ್ಕಿಸಿದಾಗ, ಪ್ರಕಾಶ್ ಭಾರತಕ್ಕೆ ತೆರಳಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಪ್ರಕಾಶ್ ಊರಿಗೆ ಬಾರದಿದ್ದರಿಂದ, ಸಂಪರ್ಕಕ್ಕೂ ಸಿಕ್ಕದಿದ್ದಾಗ, ಸಹೋದರ ಪ್ರಶಾಂತ್ ಶಾರ್ಜಾದ ಪೊಲೀಸರಿಗೆ ದೂರು ನೀಡಿದ್ದಾರೆ.

ಶಾರ್ಜಾ ಪೊಲೀಸರು ತನಿಖೆ ನಡೆಸಿದಾಗ ಪ್ರಕಾಶ್ ಅವರ ಕಾರಿನ ಡಿಕ್ಕಿಯಲ್ಲಿ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿ, ನಂತರ ಶವವನ್ನು 9 ತುಂಡುಗಳಾಗಿ ಮಾಡಿ, ಚೀಲದಲ್ಲಿ ಕಟ್ಟಿ ಅಡಗಿಸಿಟ್ಟಿದ್ದ ಪತ್ತೆಯಾಯಿತು. ಡಿಎನ್‌ಎ ಪರೀಕ್ಷೆ ಮಾಡಿದಾಗ ಶವವು ಪ್ರಕಾಶ್ ಅವರದ್ದೇ ಎಂದು ದೃಢಪಟ್ಟಿತು.

ಅವರು ವಾಸವಿದ್ದ ಕಟ್ಟಡದ ಸಿಸಿಕ್ಯಾಮರದಲ್ಲಿ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಭಾರೀ ಚೀಲವೊಂದನ್ನು ಸಾಗಿಸುತ್ತಿರುವ ದೃಶ್ಯ ಸೆರೆಯಾಗಿದ್ದು, ಇದೀಗ ಕೊಲೆ ಆರೋಪ ಪ್ರಕಾಶ್ ಅವರ ಪತ್ನಿ ಟೀನಾ ಅವರ ಮೇಲೆ ವ್ಯಕ್ತವಾಗಿದೆ. ಅಲ್ಲದೇ ಪತ್ನಿ ಟೀನಾ ಹಾಗೂ ಅಪ್ರಾಪ್ತ ಪುತ್ರ ನಾಪತ್ತೆಯಾಗಿದ್ದು, ಇದು ಅವರ ಮೇಲಿನ ಆರೋಪಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ. ಅವರು ಕೊಲೆಯ ನಂತರ ಶಾರ್ಜಾದಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪ್ರಕಾಶ್ ಅವರ ಕೊನೆಯ ಬಗ್ಗೆ ಅಲ್ಲಿನ ಪೊಲೀಸರಿಂದ ತನಿಖೆ ತೀವ್ರಗೊಂಡಿದ್ದು, ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬಸ್ಥರು ಕಾಯುತ್ತಿದ್ದಾರೆ.