ಸಾರಾಂಶ
- 1ನೇ ಸಲ 8 ತಾಸು ವಿಚಾರಣೆ ನಡೆಸಿದ ಎಸ್ಐಟಿ
- ಸತತ 8 ಗಂಟೆ ಕಾಲ ವಿಚಾರಣೆ ನಡೆಸಿದ ಎಸ್ಐಟಿಕನ್ನಡಪ್ರಭ ವಾರ್ತೆ ಮಂಗಳೂರು
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹಗಳನ್ನು ಹೂತಿದ್ದಾಗಿ ಹೇಳಿಕೊಂಡ ಅನಾಮಧೇಯ ವ್ಯಕ್ತಿ ಇದೇ ಮೊದಲ ಬಾರಿಗೆ ಎಸ್‌ಐಟಿ ತಂಡದ ಎದುರು ಹಾಜರಾಗಿದ್ದು, ಶನಿವಾರ ಸುದೀರ್ಘ 8 ತಾಸು ಆತನನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.ತಾನು ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ್ದಾಗಿ ಹೇಳಿಕೊಂಡ ಈ ಅನಾಮಧೇಯ ವ್ಯಕ್ತಿ, ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದಲ್ಲಿ ಜು.4ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ (ಅಪರಾಧ ಕ್ರಮಾಂಕ: 39/2025, ಕಲಂ: 211(ಎ) ಬಿಎನ್‌ಎಸ್ ಕಾಯ್ದೆಯಡಿ) ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿಯನ್ನು ನೇಮಕ ಮಾಡಿದೆ. ಈಗ ಮಂಗಳೂರಿಗೆ ಆಗಮಿಸಿ ತನಿಖೆ ಆರಂಭಿಸಿರುವ ಎಸ್‌ಐಟಿ ಅಧಿಕಾರಿಗಳು, ಮೊದಲ ಹಂತದಲ್ಲೇ ಈ ಅನಾಮಧೇಯ ವ್ಯಕ್ತಿಯ ವಿಚಾರಣೆ ನಡೆಸಿದ್ದಾರೆ.ಕದ್ರಿ ಮಲ್ಲಿಕಟ್ಟೆಯಲ್ಲಿರುವ ಐಬಿಗೆ ಶನಿವಾರ ಬೆಳಗ್ಗೆ 11 ಗಂಟೆಗೆ ದೂರುದಾರ ವ್ಯಕ್ತಿ ವಕೀಲರ ಜತೆ ಆಗಮಿಸಿದ. ಅಲ್ಲಿ ಡಿಐಜಿ ಎಂ.ಎನ್. ಅನುಚೇತ್ ಸಮ್ಮುಖದಲ್ಲಿ ಸಂಜೆ 7.20ರವರೆಗೂ ವಿಚಾರಣೆ ನಡೆಯಿತು. ಅನಾಮಧೇಯ ವ್ಯಕ್ತಿ ಎಸ್‌ಐಟಿ ವಿಚಾರಣೆಗೆ ಮುಸುಕುಧಾರಿಯಾಗಿ ಕಾರಿನಲ್ಲಿ ಆಗಮಿಸಿದ್ದ.
ಈ ವಿಚಾರಣೆಗೂ ಮೊದಲು ಐಬಿ ಕಚೇರಿಯಲ್ಲಿ ಡಿಐಜಿ ಎಂ.ಎನ್. ಅನುಚೇತ್, ತನಿಖಾಧಿಕಾರಿ ಜಿತೇಂದ್ರ ದಯಾಮ ಹಾಗೂ ಎಸ್‌ಐಟಿ ತಂಡಕ್ಕೆ ನೇಮಿಸಲ್ಪಟ್ಟ ಅಧಿಕಾರಿಗಳು ಮಹತ್ವದ ಸಭೆ ನಡೆಸಿದರು. ತನಿಖಾಧಿಕಾರಿ ಜಿತೇಂದ್ರ ದಯಾಮ ಅವರು ಶುಕ್ರವಾರ ರಾತ್ರಿಯೇ ಧರ್ಮಸ್ಥಳ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.