ಸಾರಾಂಶ
ಹುಬ್ಬಳ್ಳಿ: ಅನಾದಿಕಾಲದಿಂದ ಬಂದ ಅಧ್ಯಾತ್ಮ ಮತ್ತು ವಿಪರೀತವಾಗಿ ಬೆಳೆಯುತ್ತಿರುವ ವಿಜ್ಞಾನ, ತಂತ್ರಜ್ಞಾನದ ಮಧ್ಯೆ ಮನುಷ್ಯ ಯಾವುದನ್ನು ನಂಬಬೇಕು ಎನ್ನುವ ಗೊಂದಲದಲ್ಲಿದ್ದಾನೆ. ಆತನಿಗೆ ಸೂಕ್ತ ಮಾರ್ಗದರ್ಶನ ಸಿಗುತ್ತಿಲ್ಲ. ಇದು ಅವನ ತೊಳಲಾಟಕ್ಕೆ ಕಾರಣವಾಗಿದೆ ಎಂದು ಬೈಲೂರು ನಿಷ್ಕಲಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಹೇಳಿದರು.
ಬುಧವಾರ ಉಣಕಲ್ ಸಿದ್ದಪ್ಪಜ್ಜನ ಜಾತ್ರಾಮಹೋತ್ಸವದ 4ನೇ ದಿನದ ಪ್ರವಚನ ನೀಡಿದ ಅವರು, ಯಾವುದು ದೇವರನ್ನು ಅರಿಯುವ ಪರಿ ಎನ್ನುವುದಕ್ಕೆ ವಿವಿಧ ಧರ್ಮಗಳಲ್ಲಿ ವಿಭಿನ್ನ ವ್ಯಾಖ್ಯಾನಗಳಿವೆ. ಅದೇ ಕಾಲಕ್ಕೆ ವಿಜ್ಞಾನ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತ ಆತನ ಬದುಕಿಗೆ ನೆರವಾಗಿದೆ. ವಿಜ್ಞಾನ ಕೂಡ ಸತ್ಯವನ್ನೇ ಹೇಳಿದರೂ ದೇವರ ಅಸ್ಥಿತ್ವದ ಬಗ್ಗೆ ಸ್ಪಷ್ಟತೆ ನೀಡುತ್ತಿಲ್ಲ ಎಂದರು.ಆಧ್ಯಾತ್ಮವಾದ ಮತ್ತು ವಿಜ್ಞಾನವಾದ ಎರಡೂ ಈ ಜಗತ್ತಿನ ಆಧಾರಸ್ಥಂಬಗಳು ಎನ್ನುವುದು ನಿರ್ವಿವಾದ. ಮನುಷ್ಯನ ಮೂಲದೃವ್ಯವೇ ಅಧ್ಯಾತ್ಮ. ವಿಜ್ಞಾನ ಈ ಸೃಷ್ಟಿಯ ರಹಸ್ಯಗಳನ್ನು ಅರಸುತ್ತ ಹೊರಟಿದೆ. ಜತೆಗೆ ಮನುಷ್ಯನ ಜೀವನ ಶೈಲಿಯನ್ನೇ ಬದಲಿಸುವಷ್ಟು ಬೆಳೆದು, ಅಪಾರವಾದ ಭೌತಿಕ ಸುಖ ನೀಡುತ್ತಿದೆ. ಸಹಜ ಹೆರಿಗೆ ಸೃಷ್ಟಿ ನಿಯಮ, ಇದುವೇ ಅಧ್ಯಾತ್ಮವಾದ. ಸಿಜೆರಿನ್ ವೈಜ್ಞಾನಿಕ ಕೊಡುಗೆ. ಅನಿವಾರ್ಯವಾಗಿ ಇದನ್ನೂ ಮನುಷ್ಯ ಒಪ್ಪಿಕೊಂಡಿದ್ದಾನೆ. ಈ ಗೊಂದಲಕ್ಕೆ ಉತ್ತರ ಕಂಡುಕೊಳ್ಳಬೇಕಿದೆ ಎಂದರು.
ಆಧ್ಯಾತ್ಮದಿಂದ ಮೋಕ್ಷ ಲಭಿಸುವುದಿಲ್ಲ, ಅದನ್ನು ಅನುಭವಿಸಬೇಕು ಅಷ್ಟೇ ಎನ್ನುವ ಹೊಸ ವಾದವನ್ನು ಮಂಡಿಸಿದ ಶ್ರೀಗಳು, ಈ ನೆಲದ ಧರ್ಮಗಳಾದ ಬೌದ್ಧ ಮತ್ತು ಜೈನ ಧರ್ಮಗಳ ದೃಷ್ಟಾರರಾದ ಬುದ್ಧ, ಮಹಾವೀರರು ನಿರೀಶ್ವರ ವಾದಿಗಳಾಗಿದ್ದರು. ಹೀಗಿರುವಾಗ ಮುಕ್ತಿ, ಮೋಕ್ಷಕ್ಕೆ ಆಸ್ಪದವೆಲ್ಲಿ? ಸನಾತನ ಧರ್ಮ ಜಗತ್ತಿನ ಚರಾಚರಗಳಲ್ಲಿ ದೇವರಿದ್ದಾನೆ ಎಂದು ಹೇಳಿದರೆ, ಮುಂದೆ ಬಂದ ಶಂಕರಾಚಾರ್ಯರು ನೀನೇ ದೇವರು ಎಂದರು. ಕೆಲವರು ದೇವರು ಬೇರೆ-ಮನುಷ್ಯ ಬೇರೆ ಎಂದು ವಿಂಗಡಿಸಿದರು. ಇಸ್ಲಾಂ, ಕ್ರೈಸ್ತ ಧರ್ಮಗಳು ದೇವರೊಬ್ಬನೇ ಆತ ಸ್ವರ್ಗದಲ್ಲಿದ್ದಾನೆ ಎನ್ನುತ್ತಿವೆ. ಈ ಮಧ್ಯೆ ವಿಜ್ಞಾನ ಜಗತ್ತನ್ನು ವ್ಯಾಪಿಸಿ ದೈವತ್ವ, ಅಧ್ಯಾತ್ಮದ ಚಿಂತನೆಯನ್ನೇ ಮಸಕು ಮಸಕಾಗಿಸಿದೆ. ಈ ವಿಜ್ಞಾನ ಯುಗದಲ್ಲಿ ಧರ್ಮದ ಅಗತ್ಯವಿದೆಯೇ ಎನ್ನುವ ದೊಡ್ಡ ಪ್ರಶ್ನೆ ಎದುರಾಗಿದೆ ಎಂದರು ಶ್ರೀಗಳು.ಈ ವಾದ-ವಿವಾದ ಏನೇ ಇದ್ದರೂ ಮನುಷ್ಯ ಶ್ರೇಷ್ಟ ಎನ್ನುವುದನ್ನು ಈ ಎರಡೂ ಒಪ್ಪಿಕೊಂಡಿವೆ. ಮನುಷ್ಯನ ಸೃಷ್ಟಿಯೆ ಅದ್ಬುತ. ವಿಜ್ಞಾನ ಎಷ್ಟೇ ಬೆಳೆದಿದ್ದರೂ ಈತನಿಗೆ ಏನೇ ಸೌಲಭ್ಯ ಕಲ್ಪಿಸುವ ಮುನ್ನ ಅದನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡುತ್ತಿದೆ. ಮನುಷ್ಯನ ಮೇಲೆ ನೇರವಾಗಿ ಪ್ರಯೋಗ ಮಾಡುವುದು ಆಧ್ಯಾತ್ಮವೊಂದೇ. ಮತ್ತು ಮನುಷ್ಯನಿಗಾಗಿ ಮಾತ್ರ ಆಧ್ಯಾತ್ಮ, ಧರ್ಮ, ದೇವರು ಇವೆ. ತನ್ನಲ್ಲಿನ ಅಪಾರ ಶಕ್ತಿ ಮರೆತಿರುವ ಮನುಷ್ಯ ವಿಜ್ಞಾನವೇ ದೊಡ್ಡದು ಎಂದು ನಂಬಿದ್ದಾನೆ. ಈ ಪ್ರಕೃತಿಯನ್ನು ದೇವರಾಗಿ ಅನುಭವಿಸಿದರೆ ಆತನ ಆನಂದಕ್ಕೆ ಪಾರವೇ ಇಲ್ಲ ಎನ್ನುವ ಉಪಾಯವನ್ನು ಒತ್ತಿಹೇಳಿದ ಶ್ರೀಗಳು, ಇಂಥ ಸರಳ ಸೂತ್ರವನ್ನು ಜಗತ್ತಿಗೆ ಕೊಟ್ಟದ್ದು ನಮ್ಮ ಭಾರತ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಜಗತ್ತಿನ ಬೇರೆ ರಾಷ್ಟ್ರಗಳಲ್ಲಿ ಕೆಲವೇ ಕೆಲವು ದಾರ್ಶನಿಕರು, ಪ್ರವಾದಿಗಳು ಜನಿಸಿದ್ದರೆ, ಭಾರತದಲ್ಲಿ ಮಾತ್ರ ಲೆಕ್ಕವಿಲ್ಲದಷ್ಟು ಮಹಾಪುರುಷರು, ಸಂತರು, ಶರಣರು, ತತ್ವಜ್ಞಾನಿಗಳು, ಮಾನವೀಯ ಅಂತಃಕ್ಕರಣ ಉಳ್ಳುವರು ಜನಿಸಿದ್ದಾರೆ, ಈಗಲೂ ಇದ್ದಾರೆ. ಹಾಗಾಗಿ ಇದು ಪುಣ್ಯಭೂಮಿ. ಬರೀ ಭಾರತ ಮಾತಾಕೀ ಜೈ ಎಂದು ಕೂಗಿದರೆ ಸಾಲದು, ಈ ರಾಷ್ಟ್ರವನ್ನು ಅರಿಯಬೇಕು. ಇಲ್ಲಿನ ಬುದ್ಧ, ಬಸವ, ಶಂಕರಾಚಾರ್ಯರು, ಸಿದ್ಧಾರೂಢರು, ಸಿದ್ದಪ್ಪಜ್ಜ, ಶರೀಫರನ್ನು ಅರಿಯಬೇಕು. ಅದುವೇ ನಿಜವಾದ ರಾಷ್ಟ್ರಭಕ್ತಿ ಎಂದು ನೆರೆದಿದ್ದ ಜನಸಮೂಹಕ್ಕೆ ನಿಜಗುಣಾನಂದ ಶ್ರೀಗಳು ಕಿವಿಮಾತು ಹೇಳಿದರು.ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಉದ್ಯಮಿ ರತ್ನಾಕರ ಶೆಟ್ಟಿ ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))