ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಆಧುನಿಕತೆಯ ಬದುಕಿನ ಒತ್ತಡಗಳಿಗೆ ಸಿಲುಕಿ ಮನುಷ್ಯ ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾನೆ ಎಂದು ಸುತ್ತೂರು ಮಠದ ಪೀಠಾಧಿಪತಿ ಶ್ರೀಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.ಪಟ್ಟಣದಲ್ಲಿ ಆರಂಭವಾದ ನ್ಯೂ ಅಪೂರ್ವ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಮನುಷ್ಯ ಎಷ್ಟೇ ಸಾಧನೆ ಮಾಡಿದರೂ ತನ್ನ ಸಾಧನೆಯ ಫಲವನ್ನು ಅನುಭವಿಸಲು ಉತ್ತಮ ಆರೋಗ್ಯವಿರಬೇಕು. ಇದನ್ನು ಮನಗಂಡು ನಮ್ಮ ಹಿರಿಯರು ಆರೋಗ್ಯವೇ ಭಾಗ್ಯ ಎಂದಿದ್ದಾರೆ ಎಂದರು.
ನಾವು ಬೆಳೆಯುವ ಭೂಮಿ ವಿಷಯುಕ್ತವಾಗಿ ತಿನ್ನುವ ಆಹಾರ ಬೆಳೆಯುವ ಮೊಳಕೆಯಲ್ಲಿಯೇ ವಿಷವಾಗುತ್ತಿದೆ. ರಾಸಾಯನಿಕ ಕೃಷಿ ಪದ್ಧತಿಯಿಂದ ನಾವು ಮತ್ತೆ ಪ್ರಾಚೀನ ನೈಸರ್ಗಿಕ ಕೃಷಿ ಪದ್ಧತಿ ಕಡೆ ಹೋಗಬೇಕಾದ ಅಗತ್ಯವನ್ನು ಕೃಷಿ ವಿಜ್ಞಾನಿಗಳು ಪ್ರತಿಪಾದಿಸುತ್ತಿದ್ದಾರೆ. ನಮ್ಮ ಆರೋಗ್ಯ ರಕ್ಷಣೆಗೆ ಆಸ್ಪತ್ರೆಗಳು ರಕ್ಷಾ ಕವಚದಂತೆ ಕೆಲಸ ಮಾಡುತ್ತಿವೆ ಎಂದರು.ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ ಕೆ.ಆರ್.ಪೇಟೆಯ ತಹಸೀಲ್ದಾರ್ ಆಗಿದ್ದ ತಮ್ಮ ಪೂರ್ವಾಶ್ರಮದ ದಿನಗಳನ್ನು ಸ್ಮರಿಸಿದರು. ಕೆ.ಆರ್.ಪೇಟೆ ನನ್ನ ತಾಯಿಯ ಮನೆಯಿದ್ದಂತೆ. ಇಲ್ಲೊಂದು ಸರ್ವ ಸೌಲಭ್ಯಗಳ ಸುಸಜ್ಜಿತ ಆಸ್ಪತ್ರೆ ಆರಂಭವಾಗಬೇಕು ಎನ್ನುವ ಕನಸು ನನಗಿತ್ತು. ಅದು ಇಂದು ಈಡೇರಿದೆ ಎಂದರು.
ಆಸ್ಪತ್ರೆಗಳು ರೋಗಿಗಳ ಪರ, ರೋಗಿಗಳು ಮತ್ತು ಅವರ ಕುಟುಂಬದ ಭಾವನೆಗಳಿಗೆ ಸ್ಪಂದಿಸಬೇಕು. ಶ್ರೀಸಾಮಾನ್ಯನಿಗೆ ಬೇಕಾದ ಎಲ್ಲಾ ಬಗೆಯ ಸೌಲಭ್ಯಗಳು ಆತನ ಪರಿಸರದಲ್ಲಿಯೇ ದೊರಕುವಂತಾಗಬೇಕು ಎಂದರು.ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಅನ್ನ, ಅಕ್ಷರ ಮತ್ತು ಆರೋಗ್ಯದ ಮೇಲೆ ಮನುಷ್ಯನ ಬದುಕು ನಿಂತಿದೆ. ಸನಾತನ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸವನ್ನು ಸುತ್ತೂರು ಶ್ರೀಗಳು ಮಾಡುತ್ತಿದ್ದಾರೆ. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡದರೆ ಮಾತ್ರ ದೇಶದಲ್ಲಿ ಒಳ್ಳೆಯ ಪ್ರಜೆಗಳು ರೂಪುಗೊಳ್ಳಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಚ್.ಟಿ.ಮಂಜು, ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ, ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಪುರಸಭೆ ಅಧ್ಯಕ್ಷೆ ಪಂಕಜ ಮಾತನಾಡಿದರು.ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಪುರಸಭಾ ಸದಸ್ಯರಾದ ಡಿ.ಪ್ರೇಂಕುಮಾರ್, ಕೆ.ಎಸ್.ಪ್ರಮೋದ್ ಕುಮಾರ್, ತಾಲೂಕು ಒಕ್ಕಲಿಗರ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಟನಹಳ್ಳಿ ಗಂಗಾಧರ, ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಸ್ತಿ ರಂಗಪ್ಪ, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಎ.ಬಿ.ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ.ಅಜಿತ್, ಪಟ್ಟಣದ ದುಂಡುಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್, ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ಎಚ್.ಸಿ.ಮಂಜುನಾಥ್ ಸೇರಿದಂತೆ ಹಲವರು ಇದ್ದರು.