ವ್ಯಕ್ತಿಗೆ ಚಾಕುವಿನಿಂದ ಇರಿದು, ಕೊಲೆ ಯತ್ನ ಅಪರಾಧಿಗೆ ಜೈಲು

| Published : Sep 15 2024, 02:06 AM IST

ಸಾರಾಂಶ

ಕೊಟ್ಟಿದ್ದ ಸಾಲ ವಾಪಸ್‌ ಕೇಳಿದ್ದಕ್ಕೆಜಾತಿ ನಿಂದನೆ ಮಾಡಿ, ಅವಾಚ್ಯವಾಗಿ ನಿಂದಿಸಿ, ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಅಪರಾಧಿಗೆ 2 ವರ್ಷ 6 ತಿಂಗಳು ಕಾರಾಗೃಹ ಶಿಕ್ಷೆ ಹಾಗೂ ₹12 ಸಾವಿರ ದಂಡ ವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

- ಅಣ್ಣಪ್ಪಗೆ 2.6 ವರ್ಷ ಜೈಲು, ₹12 ಸಾವಿರ ದಂಡ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕೊಟ್ಟಿದ್ದ ಸಾಲ ವಾಪಸ್‌ ಕೇಳಿದ್ದಕ್ಕೆಜಾತಿ ನಿಂದನೆ ಮಾಡಿ, ಅವಾಚ್ಯವಾಗಿ ನಿಂದಿಸಿ, ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಅಪರಾಧಿಗೆ 2 ವರ್ಷ 6 ತಿಂಗಳು ಕಾರಾಗೃಹ ಶಿಕ್ಷೆ ಹಾಗೂ ₹12 ಸಾವಿರ ದಂಡ ವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ನಗರದ ಡಿಸಿಎಂ ಟೌನ್‌ಶಿಪ್‌ ವಾಸಿ ಅಣ್ಣಪ್ಪ ಅಲಿಯಾಸ್‌ ಅಣ್ಣಪ್ಪ ಸಿಎಂ ಅಪರಾಧಿ. ಇಲ್ಲಿನ ಹಳೆ ಚಿಕ್ಕನಹಳ್ಳಿಯ 1ನೇ ಕ್ರಾಸ್‌ನ ಗಾಳಿ ದುರ್ಗಮ್ಮ ದೇವಸ್ಥಾನ ಸಮೀಪದ ವಾಸಿ, ಎಚ್.ಕೆ.ಮಂಜುನಾಥ ಎಂಬವರ ತಮ್ಮ ಸಂತೋಷಕುಮಾರ, ಜಯರಾಜ ಎಂಬವರಿಂದ ಅಣ್ಣಪ್ಪ ಅಲಿಯಾಸ್‌ ಅಣ್ಣಪ್ಪ ಸಿಎಂ ₹1 ಲಕ್ಷ ಸಾಲ ಪಡೆದಿದ್ದನು.

13.4.2018ರಂದು ಸಂತೋಷ, ಜಯರಾಜ, ಕೇಶವ ಮೂವರು ಸಂಜೆ 5.20ರ ವೇಳೆ ಅಣ್ಣಪ್ಪನ ಮನೆ ಬಳಿಗೆ ಹೋಗಿ ತಾವು ಕೊಟ್ಟ ಹಣ ಮರಳಿಸುವಂತೆ ಕೇಳಿದ್ದಾರೆ. ಆಗ ಅಣ್ಣಪ್ಪ ಈಗ ಹಣ ಇಲ್ಲ, 6 ತಿಂಗಳು ಬಿಟ್ಟು ಕೊಡುವುದಾಗಿ ಹೇಳಿದ್ದಾನೆ. ಆದರೆ, ಸಂತೋಷ, ಜಯರಾಜ ಈಗಲೇ ಹಣ ಬೇಕೆಂದು ಒತ್ತಾಯಿಸಿದ್ದಾರೆ. ಈ ವೇಳೆ ಅಣ್ಣಪ್ಪ ಸೈರಣೆ ಕಳೆದುಕೊಂಡು ಸಂತೋಷ್‌ಗೆ ಜಾತಿ ನಂದನೆ ಮಾಡಿ, ಚಾಕುವಿನಿಂದ ಜಯರಾಜ ಎದೆಗೆ, ಹೊಟ್ಟೆಗೆ ಚಾಕುವಿನಿಂದ ಚುಚ್ಚಿ ಮಾರಣಾಂತಿಕ ಹಲ್ಲೆ ಮಾಡಿದ್ದನು. ಈ ಬಗ್ಗೆ ಎಚ್.ಕೆ. ಮಂಜುನಾಥ ಕೆ.ಟಿ.ಜೆ. ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿದ್ದ ತನಿಖಾಧಿಕಾರಿ ಎಂ.ಕೆ. ಗಂಗಲ್‌, ಪ್ರಭಾರ ನಗರ ಡಿವೈಎಸ್‌ಪಿ ಮೊಹಮ್ಮದ್ ಬಾಬು ಆರೋಪಿ ಅಣ್ಣಪ್ಪನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಆರ್.ಎನ್‌. ಪ್ರವೀಣಕುಮಾರ ಪ್ರಕರಣದ ವಿಚಾರಣೆ ನಡೆಸಿದರು. ಅಣ್ಣಪ್ಪನ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿ ಎಂದು ತೀರ್ಮಾನಿಸಿ, ತೀರ್ಪು ನೀಡಿದರು.

ಪ್ರಕರಣದಲ್ಲಿ ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಜಯಪ್ಪ ವಾದ ಮಂಡಿಸಿದ್ದರು. ಅಪರಾಧಿಗೆ ಶಿಕ್ಷೆ ಕೊಡಿಸುವಲ್ಲಿ ಶ್ರಮಿಸಿದ ಅಧಿಕಾರಿ, ಸಿಬ್ಬಂದಿ ಹಾಗೂ ಸರ್ಕಾರಿ ವಕೀಲರ ಕಾರ್ಯಕ್ಕೆ ಎಸ್‌ಪಿ ಉಮಾ ಪ್ರಶಾಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- - - (ಸಾಂದರ್ಭಿಕ ಚಿತ್ರ)