ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ತಾಲೂಕಿನ ಹೊನ್ನಿಹಾಳ ಗ್ರಾಮದ ಹೊರವಲಯದ ಜಮೀನಿನಲ್ಲಿ ಅಪರಿಚಿತ ವ್ಯಕ್ತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪ್ರಕರಣ ಭೇದಿಸಿರುವ ಮಾರಿಹಾಳ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಮಾರಿಹಾಳ ಗ್ರಾಮದ ಶಿವಾನಂದ ನಿಂಗಪ್ಪ ಕರವಿನಕೊಪ್ಪ (28) ಹಾಗೂ ಆಕಾಶ ಗಂಗಪ್ಪ ಮ್ಯಾಗೋಟಿ (21) ಬಂಧಿತ ಆರೋಪಿಗಳು. ಹತ್ಯೆಗೀಡಾದ ವ್ಯಕ್ತಿಯನ್ನು ನಿಂಗನಗೌಡ ಸನಗೌಡರ ಎಂದು ಗುರುತಿಸಲಾಗಿದೆ. ಹತ್ಯೆಯಾದ ನಿಂಗನಗೌಡನನ್ನು ನ.17ರಂದು ರಾತ್ರಿ 8.30 ಗಂಟೆಗೆ ಯರಗಟ್ಟಿಯಿಂದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಬಂದು ಇಳಿದಿದ್ದ. ಮಾರಿಹಾಳ ಗ್ರಾಮದ ಹತ್ತಿರ ಇಳಿದು ಬೆಳಗಾವಿ-ಬಾಗಲಕೋಟೆ ರಸ್ತೆಯಲ್ಲಿ ಬೆಳಗಾವಿಗೆ ತೆರಳಲು ವಾಹನದ ದಾರಿ ಕಾಯುತ್ತ ನಿಂತಿದ್ದ. ಈ ವೇಳೆ ಅಲ್ಲಿಗೆ ಬಂದ ಆರೋಪಿಗಳು ಯಾಕೆ ನಿಂತಿದ್ದಿಯಾ ಎಂದು ಪ್ರಶ್ನಿಸಿದ್ದಾರೆ.ಬೆಳಗಾವಿಯ ಶ್ರೀನಗರವರೆಗೆ ಡ್ರಾಪ್ ಮಾಡಿ ಸಾರಾಯಿ ಕುಡಿಯಲು ಹಣ ನೀಡುತ್ತೇನೆ ಎಂದು ಹೇಳಿದ್ದಾನೆ. ಆರೋಪಿಗಳು ತಮ್ಮ ಬೈಕ್ ಮೇಲೆ ಕರೆದುಕೊಂಡು ಶ್ರೀನಗರಕ್ಕೆ ಬಂದು ಬಿಟ್ಟು, ಸಾರಾಯಿ ಕುಡಿದಿದ್ದಾರೆ. ನಂತರ ಬಿಲ್ ಕೊಡಲು ಹೇಳಿದಾಗ ತನ್ನ ಬಳಿ ಹಣವಿಲ್ಲ ಎಂದು ಹೇಳಿದ್ದರಿಂದ ಕುಪಿತಗೊಂಡ ಆರೋಪಿಗಳು ಮದ್ಯದ ಅಮಲಿನಲ್ಲಿ ಆತನನ್ನು ಬೈಕ್ ಮೇಲೆ ಎತ್ತಿಕೊಂಡು ಅಣ್ಣಪ್ಪ ಹೊರಕೇರಿ ಎಂಬುವವರ ಜಮೀನಿಗೆ ಕರೆದುಕೊಂಡು ಹೋಗಿ ಕೈಯಿಂದ ಹೊಡೆದು ನೆಲಕ್ಕೆ ಬೀಳಿಸಿ ಬಳಿಕ ಸಿಮೆಂಟ್ ಇಟ್ಟಂಗಿಯನ್ನು ತಲೆಯ ಮೇಲೆ ಎತ್ತಿ ಹಾಕಿ ಕೊಲೆ ಮಾಡಲಾಗಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ ಮಾರಿಹಾಳ ಠಾಣೆ ಪೊಲೀಸ್ ಇನ್ಸಪೆಕ್ಟರ್ ಗುರುರಾಜ ಕಲ್ಯಾಣಶೆಟ್ಟಿ ಎರಡು ತನಿಖಾ ತಂಡಗಳನ್ನು ರಚಿಸಿ, ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.