ಆಸ್ತಿ ಕಬಳಿಸಲು ವ್ಯಕ್ತಿ ಕೊಲೆ: ಆರೋಪಿಗಳ ಬಂಧನ

| Published : Nov 21 2024, 01:01 AM IST

ಸಾರಾಂಶ

ಗೆನ್ನೆರಹಳ್ಳಿ ಸೋಮಶೇಖರ್ ಮತ್ತು ಸುಧಾ ಕಳೆದ 20 ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಮುಳಬಾಗಿಲುಪಿತ್ರಾರ್ಜಿತ ಆಸ್ತಿ ಕಬಳಿಸಲು ಸ್ವಂತ ಹೆಂಡತಿಯೇ ತನ್ನ ಮಗಳು ಮತ್ತು ಮಗಳ ಪ್ರಿಯಕರ ಮುಖಾಂತರ ಕೊಲೆ ಮಾಡಿಸಿ ಈಗ ಪೊಲೀಸರು ಬಂಧಿಸಿದ್ದು, ಕೊಲೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಸುಧಾ 38 ವರ್ಷ, ಮಗಳು ಶೈಲ, ಆಕೆ ಪ್ರಿಯಕರ ಸುರೇಶ್ ಈ ಮೂವರನ್ನು ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಕೆಜಿಎಫ್ ತಾಲೂಕಿನ ಗೆನ್ನೆರಹಳ್ಳಿ ಸೋಮಶೇಖರ್ ಮತ್ತು ಸುಧಾ ಕಳೆದ 20 ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದರು. ಗಂಡ ಹೆಂಡ್ತಿ ಮಧ್ಯೆ ಮನಸ್ತಾಪ ಉಂಟಾಗಿ ಕಳೆದ ನಾಲ್ಕು ವರ್ಷಗಳ ಹಿಂದೆ ಗಂಡನನ್ನು ತೊರೆದು ಪತ್ನಿ ಮುಳಬಾಗಿಲು ನಗರದ ಶಿವಕೇಶವ ನಗರದ ನಂಜಪ್ಪ ಎಂಬುವರ ಮನೆಯಲ್ಲಿ ಬಾಡಿಗೆ ಮಾಡಿಕೊಂಡು ಇದ್ದರು.ಮೃತನಿಗೆ ಮೂರು ಹೆಣ್ಣು ಒಂದು ಗಂಡು ಮಗು ಇದೆ. ಒಂದನೇ ಮಗಳಾದ ಶೈಲರನ್ನು ತಾಲೂಕಿನ ತಾಯಲೂರು ಬಳಿ ಇರುವ ಗಡ್ಡಂ ಚಿನ್ನೇನಹಳ್ಳಿ ಗ್ರಾಮದ ಶಶಿಕುಮಾರ್‌ರಿಗೆ ಆರು ವರ್ಷಗಳ ಹಿಂದೆ ಮದುವೆ ಮಾಡಿ ಕೊಟ್ಟಿದ್ದರು. ಶೈಲ ಮತ್ತು ಶಶಿಕುಮಾರ್ ಮಧ್ಯೆ ಮನಸ್ತಾಪ ಆಗಿ ಗಂಡನನ್ನು ಬಿಟ್ಟು ಮುಳಬಾಗಿಲಿನ ತಾಯಿ ಮನೆಯಲ್ಲಿ ವಾಸವಾಗಿದ್ದರು. ಸುಧಾ ತನ್ನ ಗಂಡ ಮತ್ತು ಮಾವನ ಆಸ್ತಿ ಲಪಟಾಯಿಸಲು ಮಗಳಿಗೆ ಪ್ರಚೋದನೆ ಮಾಡಿ ತನ್ನ ಗಂಡನನ್ನೇ ಕೊಲೆ ಮಾಡಿಸಲು ಮಾರ್ಗದರ್ಶನ ನೀಡಿದ್ದರು. ನ. 5ರಂದು ಶೈಲ ತನ್ನ ಪ್ರಿಯಕರ ತಾಯಲೂರು ರಸ್ತೆಯ ಕಾದ್ಲಿಪುರದ ಸುರೇಶ್‌ಗೆ ಸೇರಿದ ಆಟೋದಲ್ಲಿ ತಂದೆಗೆ ಮೊಬೈಲ್ ಕರೆ ಮಾಡಿ ಬಂಗಾರ ತಿರುಪತಿಗೆ ಕರೆಸಿಕೊಂಡಿದ್ದರು. ಕೊಲೆಗೀಡಾಗಿರುವ ಸೋಮಶೇಖರ್ ಮೊಬೈಲನ್ನು ಸ್ವಿಚ್ ಆಫ್ ಮಾಡಿ ಆಟೋದಲ್ಲಿ ಮುಳಬಾಗಿಲು ನಗರದ ಗಂಗಾ ಭೈರವೇಶ್ವರ ಬಾರ್‌ನಲ್ಲಿ ಕಂಠಪೂರ್ತಿ ಮದ್ಯವನ್ನು ಕುಡಿಸಿ ಕಾದ್ಲಿಪುರ ಗ್ರಾಮದ ಜಮೀನು ಬಳಿ ಕರೆದುಕೊಂಡು ಹೋಗಿ ಚಾಕುನಿಂದ ಕತ್ತು ಮತ್ತು ದೇಹದ ಇತರೆ ಭಾಗಗಳನ್ನು ಕೊಯ್ದು ಕೊಲೆ ಮಾಡಿ ತೂಕದ ಕಲ್ಲುಗಳನ್ನು ಮೃತ ದೇಹಕ್ಕೆ ಕಟ್ಟಿ ಬಾವಿಯಲ್ಲಿ ಎಸೆದು ಪರಾರಿಯಾಗಿದ್ದರು.ಈ ಸಂಬಂಧ ಡಿವೈಎಸ್ಪಿ ಡಿ.ಸಿ.ನಂದಕುಮಾರ್ ಮಾರ್ಗದರ್ಶನದಲ್ಲಿ ಸಿಪಿಐ ರಾಜಣ್ಣ ಸಿಐ ಕೆ.ಜಿ.ಸತೀಶ್, ಗ್ರಾಮಾಂತರ ಠಾಣೆ ಪಿಎಸ್‌ಐಗಳಾದ ವಿಟ್ಟಲ್, ವೈ.ತಲ್ವಾರ್ ಮಮತಾ, ಸಿಬ್ಬಂದಿಯಾದ ಸುರೇಶ್, ವೆಂಕಟ, ರಾಘವನ್, ಶಂಕರ್ ನ.20ರಂದು ಮೂವರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.