ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದ ವ್ಯಕ್ತಿಯೊಬ್ಬ ಮೊಬೈಲ್ ಟವರ್ ಮೇಲೇರಿ ಹುಚ್ಚಾಟ ನಡೆಸಿದ ಘಟನೆ ಭಾನುವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದ ವ್ಯಕ್ತಿಯೊಬ್ಬ ಮೊಬೈಲ್ ಟವರ್ ಮೇಲೇರಿ ಹುಚ್ಚಾಟ ನಡೆಸಿದ ಘಟನೆ ಭಾನುವಾರ ನಡೆದಿದೆ. ಗ್ರಾಮದ ಅರ್ಜುನ್ ನಾಟಿಕಾರ್ ಎಂಬಾತ ಎರಡನೇ ಬಾರಿಗೆ ಮೊಬೈಲ್ ಟವರ್ ಏರಿ ಹುಚ್ಚಾಟ ನಡೆಸಿದ್ದಾನೆ. ಕುಡಿದ ಮತ್ತಿನಲ್ಲಿ ಮೊಬೈಲ್ ಟವರ್ ಏರಿ, ಸುಮಾರು ಅರ್ಧ ಗಂಟೆಗಳ ಕಾಲ ಟವರ್ ತುದಿಯಲ್ಲಿ ನಿಂತು ಆತಂಕ ಸೃಷ್ಟಿಸಿದ್ದ. ಟವರ್ ಮೇಲ್ಭಾಗದಲ್ಲಿ ನಿಂತು ಕೈ ಮುಗಿದು, ಮೊಬೈಲ್ ಫೋನ್ ಹಿಡಿದು ಪೋಸ್ ನೀಡುತ್ತ, ಕೆಳಗಿದ್ದ ಗ್ರಾಮಸ್ಥರಿಗೆ ಫೋನ್ ಕರೆ ಮಾಡಿ ಮಾತನಾಡುವ ದೃಶ್ಯ ಆತಂಕ ಸೃಷ್ಟಿಸಿತ್ತು. ಗ್ರಾಮಸ್ಥರು ಆತನನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರ್ಜುನ್ ನಾಟಿಕಾರ್ ಫೋನ್ ಮೂಲಕ ಮಾತನಾಡುತ್ತಲೇ ಟವರ್‌ನಿಂದ ಸುರಕ್ಷಿತವಾಗಿ ಕೆಳಗೆ ಇಳಿದಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಘಟನೆ ಸಂಬಂಧಿಸಿದಂತೆ ಸ್ಥಳೀಯರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.