ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಆಧ್ಯಾತ್ಮಿಕ ಪ್ರವಚನಗಳು ಮನುಷ್ಯನ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸಿ ತಪ್ಪುಗಳು ನಡೆದಾಗ ನಿಯಂತ್ರಿಸುವ ಶಕ್ತಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅಭಿಪ್ರಾಯಪಟ್ಟರು.ನಗರದ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ಶರಣ ಸಾಹಿತ್ಯ ಪರಿಷತ್, ವೀರಶೈವ ವಿದ್ಯಾರ್ಥಿ ನಿಲಯ ಟ್ರಸ್ಟ್, ಜಿಲ್ಲಾ ಬಸವ ಸಮಿತಿ, ತಾಲೂಕು ಜಗದ್ಗುರು ಬಸವೇಶ್ವರ ಸಹಕಾರ ಸಂಘ, ಕ್ರಾಂತಿಯೋಗಿ ಶ್ರೀ ಬಸವೇಶ್ವರ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀಸಿದ್ದೇಶ್ವರ ಸ್ವಾಮೀಜಿ ಪ್ರವಚನ ಸಾರ ಸಮಾರೋಪ ಸಮಾರಂಭ ಮತ್ತು ಪ್ರದೀಪ್ ಕುಮಾರ್ ಹೆಬ್ರಿ ಅವರ ಜ್ಞಾನಯೋಗಿ ಮಹಾಕಾವ್ಯ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಮಾಜ ತಿದ್ದಲು, ಬದಲಾಯಿಸಲು ಕಾನೂನುಗಳು ಇದ್ದರೆ ಸಾಲದು. ಕಾನೂನುಗಳು ಶಿಕ್ಷೆಯ ಭಯ ಹುಟ್ಟಿಸಿ ಮನುಷ್ಯ ತಪ್ಪು ಮಾಡದಂತೆ ನಿಯಂತ್ರಿಸಬಹುದು. ಆದರೆ, ಆಧ್ಯಾತ್ಮಿಕ ಪ್ರವಚನಗಳು ಮನುಷ್ಯನನ್ನು ಮೃದುಗೊಳಿಸಿ ಯಾವುದೇ ತಪ್ಪುಗಳು ನಡೆಯದ ಹಾಗೆ ನಿಯಂತ್ರಿಸಲಿದೆ ಎಂದರು.ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ಕಳೆದ ಒಂದು ವರ್ಷದಿಂದ ಪ್ರತಿ ಸೋಮವಾರ ವಿದ್ಯಾರ್ಥಿ ನಿಲಯದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರ ಪ್ರವಚನ ಸಾರದ ಉಪನ್ಯಾಸ ನೀಡುತ್ತಾ ಅದರ ಅಂಶಗಳನ್ನು ‘ಜ್ಞಾನಯೋಗಿ’ ಎಂಬ ಮಹಾ ಕಾವ್ಯವಾಗಿ ರಚಿಸಿರುವುದು ಶ್ಲಾಘನೀಯ ಎಂದರು.
ಸಿದ್ದೇಶ್ವರ ಸ್ವಾಮೀಜಿ ಯಾವುದೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ, ಕಿಚ್ಚು ಹಚ್ಚದೆ, ವ್ಯಕ್ತಿಯೊಬ್ಬ ಪರಿಪೂರ್ಣತೆಯ ಹಾದಿಯಲ್ಲಿ ಸಾಗಿ, ಕುಟುಂಬ, ಸಮಾಜ, ರಾಷ್ಟ್ರ ವಿಶ್ವ ನಿರ್ಮಾಣವಾಗಬೇಕಾದರೆ ಏನು ಬೇಕೋ ಅದೆಲ್ಲವನ್ನು ತಮ್ಮ ಪ್ರವಚನಗಳ, ಚಿಂತನೆಗಳ, ಬರಹದ ಮೂಲಕ ಕೊಟ್ಟಿದ್ದಾರೆ. ಅವರೊಬ್ಬ ಆಧ್ಯಾತ್ಮಿಕ ಚಿಕಿತ್ಸಕ, ವೈದ್ಯರಾಗಿದ್ದರು. ಅಂತಹವರನ್ನು ಕಳೆದುಕೊಂಡಿದ್ದೇವೆ ಎಂದು ವಿಷಾದಿಸಿದರು.ಧಾರ್ಮಿಕ ಜಾತಿ, ಪಂಥ, ಪಂಗಡ, ಸಿದ್ಧಾಂತ ಪ್ರಜ್ಞೆಗಳು ಮನಷ್ಯನ ಮನಸ್ಸಿನಲ್ಲಿ ಗೋಡೆಗಳನ್ನು ಕಟ್ಟುತ್ತಾ ಹೋಗುತ್ತದೆ. ಈ ಪ್ರಜ್ಞೆಯಿಂದ ಆಚೆಗೆ ಯೋಚನೆ ಮಾಡಿದರೆ ಅದು ಜಗಜ್ಯೋತಿ ಬಸವೇಶ್ವರ, ಮಹಾ ಮಾನವತಾವಾದಿಯ ಪ್ರಜ್ಞೆ ಅವರಿಂದ ಪ್ರೇರೇಪಿತಗೊಂಡ ರಾಷ್ಟ್ರಕವಿ ಕುವೆಂಪು ಪ್ರಜ್ಞೆಯನ್ನು ಬಿಟ್ಟು ಹೋಗಿದ್ದಾರೆ ಎಂದರು.
ಅದ್ಭುತವಾದ ಆಲೋಚನಾ ಶಕ್ತಿ, ಚಿಂತನೆಗಳನ್ನು ಇಟ್ಟುಕೊಂಡ ಪರಮಪೂಜ್ಯರು. ಈ ನೆಲದಲ್ಲಿ ಹುಟ್ಟಿ ಆಧ್ಯಾತ್ಮಿಕ ಶಿಖರದಲ್ಲಿ ಮಹಾತ್ಮ ಎನಿಸಿಕೊಂಡಿದ್ದಾರೆ. ಅದ್ಭುತ ಸಾಧನೆ ಮಾಡಿದ ಇಂತಹವರ ಸಂತತಿ ಹೆಚ್ಚಬೇಕು. ಎಲ್ಲರ ಮನಸ್ಥಿತಿಯನ್ನು ಸುಧಾರಿಸಲು ಆ ಮೂಲಕ ಪರಿಸ್ಥಿತಿಯನ್ನು ಶಾಂತಿಯುತವಾಗಿ ಕಟ್ಟಲು ಅವರ ಪ್ರವಚನಗಳು ಚಿಂತನೆಗಳು ಈ ಕಾಲಕ್ಕೆ ಅಗತ್ಯ ಇದೆ ಎಂದರು.ಕಾರ್ಯಕ್ರಮಕ್ಕೂ ಮುನ್ನ ಶ್ರೀಬಸವೇಶ್ವರ, ಶ್ರೀಶಿವಕುಮಾರ ಸ್ವಾಮೀಜಿ ಹಾಗೂ ಶ್ರೀಸಿದ್ದೇಶ್ವರ ಸ್ವಾಮೀಜಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಮಂಡ್ಯ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮವನ್ನು ಹಿರಿಯ ವಕೀಲರು ಹಾಗೂ ವೀರಶೈವ ವಿದ್ಯಾರ್ಥಿ ನಿಲಯ ಅಧ್ಯಕ್ಷ ಎಂ.ಬಿ. ರಾಜಶೇಖರ್ ಉದ್ಘಾಟಿಸಿದರು. ಮಹಾಕಾವ್ಯದ ಕರ್ತೃ ಡಾ.ಹೆಬ್ರಿ, ಮೈಷುಗರ್ ನಿವೃತ್ತ ಎಂಜಿನಿಯರ್, ಎಚ್.ಕೆ.ಕೆಂಪಯ್ಯ, ಪದ್ಮ ಭಾಗವಹಿಸಿದ್ದರು.