ಮಾನವ ಧರ್ಮದ ನೆಲೆಯಲ್ಲಿ ಬದುಕಬೇಕು: ಡಿಸಿಎಂ

| Published : Mar 03 2025, 01:45 AM IST

ಮಾನವ ಧರ್ಮದ ನೆಲೆಯಲ್ಲಿ ಬದುಕಬೇಕು: ಡಿಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‍ಪೇಟೆ: ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆಯೂ ಅಷ್ಟೇ ಮುಖ್ಯ. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೆ, ಪೂಜೆ ಯಾವುದಾದರೂ ಭಕ್ತಿ ಒಂದೆ. ಹಾಗಾಗಿ ನಾವು ಜಾತಿ, ಮತ, ಪಂಥ ಮರೆತು ಮಾನವ ಧರ್ಮದ ನೆಲೆಯಲ್ಲಿ ಮನುಷ್ಯರಾಗಿ ಬದುಕಬೇಕು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು

ದಾಬಸ್‍ಪೇಟೆ: ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆಯೂ ಅಷ್ಟೇ ಮುಖ್ಯ. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೆ, ಪೂಜೆ ಯಾವುದಾದರೂ ಭಕ್ತಿ ಒಂದೆ. ಹಾಗಾಗಿ ನಾವು ಜಾತಿ, ಮತ, ಪಂಥ ಮರೆತು ಮಾನವ ಧರ್ಮದ ನೆಲೆಯಲ್ಲಿ ಮನುಷ್ಯರಾಗಿ ಬದುಕಬೇಕು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.

ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲನಹಳ್ಳಿ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶನೇಶ್ವರಸ್ವಾಮಿ ಮಠದ ಶಿವರಾತ್ರಿ ಜಾತ್ರಾ ಮಹೋತ್ಸವ ಮತ್ತು ಮಹಾ ರುದ್ರಯಾಗ ಹಾಗೂ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾನು ದೇವರಲ್ಲಿ ನಂಬಿಕೆ ಇಟ್ಟವನು. ದೇವರು ಕೊಟ್ಟಿರುವುದು ಒಂದೆ. ಒಂದು ಕೊಟ್ಟು ಹೋಗುವುದು, ಇಲ್ಲಾಂದ್ರೆ ಬಿಟ್ಟು ಹೋಗುವುದು, ತೆಗೆದುಕೊಂಡು ಹೋಗುವುದು ಯಾವುದು ಇಲ್ಲ, ದೇವಾಲಯ ಹಾಗೂ ಮಠಗಳನ್ನು ನಾವೆಲ್ಲಾ ಕಾಪಾಡಬೇಕು. ದೇವರು ವರವನ್ನೂ ಕೊಡದೆ ಶಾಪವನ್ನೂ ಕೊಡದೆ ಅವಕಾಶ ಕೊಡುತ್ತಾನೆ. ಅದನ್ನು ನಾವು ಯಾವ ರೀತಿ ಸದ್ಭಳಕೆ ಮಾಡಿಕೊಳ್ಳಬೇಕೆಂದು ನಾವೇ ನಿರ್ಧರಿಸಬೇಕು. ಇತಿಹಾಸ ಹಾಗೂ ಸಂಪ್ರದಾಯ ನಮ್ಮ ಸಂಸ್ಕತಿಯನ್ನು ನಾವು ಬೆಳೆಸಬೇಕು. ಪಾಲನಹಳ್ಳಿ ಶ್ರೀ ಶನೇಶ್ವರಸ್ವಾಮಿ ಮಠದ ಇತಿಹಾಸ ಹಿರಿದಾಗಿದ್ದು, ಶನೇಶ್ವರನ ಕೃಪೆ ನಮ್ಮ ಮೇಲಿದೆ. ಈ ಸನ್ನಿಧಿಗೆ ಬರುವ ಭಕ್ತರಿಗೆ ದೇವರು ಒಳಿತು ಮಾಡಲಿ ಎಂದು ಹಾರೈಸಿದರು.

ಸರ್ಕಾರದಿಂದ ಅನುದಾನ ನೀಡಿ:

ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ಪಾಲನಹಳ್ಳಿ ಮಠಕ್ಕೂ ನನಗೂ ಅವಿನಾಭಾವ ಸಂಬಂಧ. ನಾನು ಬಹಳ ವರ್ಷದಿಂದ ಮಠದ ಶಿಷ್ಯನಾಗಿ ಇಲ್ಲಿಗೆ ಬರುತ್ತಿದ್ದೇನೆ. ಪಾಲನಹಳ್ಳಿ ಮಠಕ್ಕೆ ಸರ್ಕಾರದಿಂದ ಯಾವುದೇ ಸೌಲಭ್ಯ ಇದುವರೆಗೆ ಸಿಕ್ಕಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಠಕ್ಕೆ ಅನುದಾನ ನೀಡಿ ಅಭಿವೃದ್ಧಿಪಡಿಸಬೇಕು. ರಾಜ್ಯದಲ್ಲಿ ಮಠಗಳು ಶಿಕ್ಷಣ, ದಾಸೋಹ, ಸರ್ವಧರ್ಮ ಏಳಿಗೆಗಾಗಿ ಶ್ರಮಿಸುತ್ತಿವೆ ಎಂದು ಹೇಳಿದರು.

2 ಕೋಟಿ ವೆಚ್ಚದಲ್ಲಿ ಮಠದ ಅಭಿವೃದ್ಧಿ:

ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಮಠಗಳು ನಮ್ಮ ಧಾರ್ಮಿಕ ಕೇಂದ್ರಗಳಾಗಿವೆ. ಮನಸ್ಸಿನ ನೆಮ್ಮದಿಗಾಗಿ ದೇವಾಲಯ, ಮಠಗಳಿಗೆ ಭೇಟಿ ನೀಡುತ್ತೇವೆ. ಸರ್ಕಾರದಿಂದ ಪಾಲನಹಳ್ಳಿ ಮಠದ ದಾಸೋಹ ಭವನಕ್ಕೆ ಈಗಾಗಲೇ 1 ಕೋಟಿ ಬಿಡುಗಡೆಗೊಳಿಸಿದ್ದೇನೆ. ಹೈಮಾಸ್ಕ್ ದೀಪ ಅಳವಡಿಸಲು ಸೂಚಿಸಿದ್ದೇನೆ, ಶ್ರೀಗಳ ಮನವಿಯಂತೆ ಮಠದ ಆವರಣಕ್ಕೆ ರಸ್ತೆ ಹಾಗೂ ಮುಂಭಾಗದಲ್ಲಿ ಕಾಂಕ್ರೀಟ್ ಕಾಮಗಾರಿಗೆ 1 ಕೋಟಿ ರು. ಅನುದಾನದ ಶೀಘ್ರದಲ್ಲೇ ಬಿಡುಗಡೆಗೊಳಿಸುತ್ತೇನೆ. ಮಠದ ಅಭಿವೃದ್ಧಿಗೆ ನಾನು ಹಾಗೂ ನಮ್ಮ ಸರ್ಕಾರ ಸಹಕಾರ ನೀಡುತ್ತೇವೆ ಎಂದರು.

ಕೆ.ಎಚ್. ಮನಿಯಪ್ಪ ಸಿಎಂ ಆಗಲಿ:

ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಡಾ.ಶ್ರೀ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ವಚನದಂತೆ ಇವನಾರವ ಇವನಾರವ ಎನ್ನದೇ ಎಲ್ಲರೂ ನಮ್ಮವರೇ ಎಂಬಂತೆ ಪಾಲನಹಳ್ಳಿ ಶ್ರೀಗಳು ಭಕ್ತರನ್ನು ಸನ್ಮಾರ್ಗದ ಕಡೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಸಚಿವ ಕೆ.ಎಚ್. ಮುನಿಯಪ್ಪ ಆರು ಬಾರಿ ಸಂಸದರಾಗಿ ಹಿರಿಯರಾಗಿದ್ದಾರೆ. ಹಲವು ಬಾರಿ ಸಿಎಂ ಸ್ಥಾನಕ್ಕೆ ಹೆಸರು ಕೇಳಿಬಂದರೂ ಸಿಎಂ ಆಗಲಿಲ್ಲ. ಅವರ ಹಿರಿತನಕ್ಕೆ ಬೆಲೆಕೊಟ್ಟು ಮುಂದಿನ ದಿನಗಳಲ್ಲಿ ಸಿಎಂ ಸ್ಥಾನ ಅಲಂಕರಿಸಲಿ ಎಂದು ಹೇಳಿದರು.

ಎಲ್ಲಾ ಧರ್ಮಕ್ಕೂ ಸಮಾನತೆ:

ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಸರ್ವಧರ್ಮ ಸಮ್ಮೇಳನದಲ್ಲಿ ಉಪದೇಶಾಮೃತ ಅದ್ಭುತವಾದದ್ದು, ಸರ್ವಧರ್ಮ ಸಮ್ಮೇಳನ ಭಾರತದಲ್ಲಿ ಮಾತ್ರ ಇದೆ. 140 ಕೋಟಿ ಅಧಿಕ ಜನಸಂಖ್ಯೆ ಹೊಂದಿರುವ ಭಾರತ ದೇಶ ಎಲ್ಲಾ ಧರ್ಮಕ್ಕೂ ಸಮಾನತೆ ನೀಡಿದೆ. ಪಾಲನಹಳ್ಳಿ ಶ್ರೀಗಳು ಜಾತ್ಯತೀತ ವಾದವನ್ನು ಅನುಸರಿಸಿರುವುದು ಶ್ಲಾಘನಾರ್ಹ ಎಂದರು.

ಭಕ್ತಗಣ ಎಲ್ಲದಕ್ಕಿಂತ ದೊಡ್ಡದ್ದು:

ಪಾಲನಹಳ್ಳಿ ಮಠದ ಡಾ.ಶ್ರೀ.ಸಿದ್ದರಾಜು ಸ್ವಾಮೀಜಿ ಮಾತನಾಡಿ, ಜಗತ್ತು ಪರೋಪಕಾರದಿಂದ ಬದುಕಿದವರನ್ನು ಮಾತ್ರ ಉಳಿಸಿಕೊಳ್ಳುತ್ತದೆ. ಸನಾತನ ಶಾಸ್ತ್ರ ದೊಡ್ಡದು, ಭಕ್ತ ಗಣ ಎಲ್ಲದಕ್ಕಿಂತ ದೊಡ್ಡದು. ಮುಂದಿನ ದಿನಗಳಲ್ಲಿ ಕೆ.ಎಚ್.ಮುನಿಯಪ್ಪ ಮುಖ್ಯಮಂತ್ರಿಗಳಾಗುತ್ತಾರೆ ಎಂದರು.

ರಜತಾ ಕಿರೀಟ ಧಾರಣೆ:

ಇದೇ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಶ್ರೀ ಮಠದಿಂದ ರಜತ ಕಿರೀಟಧಾರಣೆ ಮಾಡಿ ಸನ್ಮಾನಿಸಲಾಯಿತು. ಇದೇ ವೇಳೆ ಡಿಸಿಎಂ ತಮಗೆ ನೀಡಿದ ಕಿರೀಟವನ್ನು ಪೂಜ್ಯರಿಗೆ ಧಾರಣೆ ಮಾಡಿದರು.

ಧ್ರುವಸರ್ಜಾಗೆ ಬೆಳ್ಳಿಆಂಜನೇಯ ವಿಗ್ರಹ: ಚಲನಚಿತ್ರ ನಟ ಧ್ರುವಸರ್ಜಾಗೆ ಶ್ರೀ ಮಠದ ಭಕ್ತಾಧಿಗಳು ಬೆಳ್ಳಿ ಆಂಜನೇಯ ವಿಗ್ರಹ ಕೊಡುಗೆ ನೀಡಿ ಗೌರವಿಸಿದರು.

ಮುಂದಿನ ಸಿಎಂ ಡಿಕೆಶಿ ಜೈಕಾರ:

ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಆಗಮಿಸುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರದಿದ್ದ ಅಭಿಮಾನಿಗಳು ಭಕ್ತ ಸಮೂಹ ಮುಂದಿನ ಸಿಎಂ ಡಿ.ಕೆ.ಶಿವಕುಮಾರ್‌ಗೆ ಜೈ ಅಂತ ಘೋಷಣೆ ಕೂಗಿದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಧ್ರುವಸರ್ಜಾ, ಗೌರಿಶಂಕರ್ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಅಂಕನಹಳ್ಳಿ ಶ್ರೀ, ಆರ್ಮಿ ಕಮಿಷನ್ ಆಫೀಸರ್ ಭವ್ಯಾ ನರಸಿಂಹಮೂರ್ತಿ, ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ.ಮೂರ್ತಿ, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಎನ್‌ಡಿಎ ಅಧ್ಯಕ್ಷ ನಾರಾಯಣಗೌಡ, ನೆಲಮಂಗಲ ಪುರಸಭೆ ಅಧ್ಯಕ್ಷ ಗಣೇಶ್, ವಜ್ರಗಟ್ಟೆಪಾಳ್ಯ ನಾಗರಾಜು, ಎಂ.ಕೆ.ನಾಗರಾಜು, ಸೋಲೂರು ರಂಗಸ್ವಾಮಿ ಸೇರಿದಂತೆ 15ಕ್ಕೂ ಅಧಿಕ ಮಠಾಧೀಶರು ಉಪಸ್ಥಿತರಿದ್ದರು.

(ಪೋಟೋ ಕ್ಯಾಪ್ಷನ್‌)

ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲನಹಳ್ಳಿ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶನೇಶ್ವರಸ್ವಾಮಿ ಮಠದ ಶಿವರಾತ್ರಿ ಜಾತ್ರಾ ಉತ್ಸವ ಮತ್ತು ಮಹಾ ರುದ್ರಯಾಗ ಹಾಗೂ ಧಾರ್ಮಿಕ ಸಮಾರಂಭವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ಶ್ರೀನಿವಾಸ್, ಹರಗುರು ಚರಮೂರ್ತಿಗಳು ಉದ್ಘಾಟಿಸಿದರು.

(ಈ ಫೋಟೋ ಪ್ಯಾನಲ್‌ನಲ್ಲಿ ಬಳಸಿ)

ಪೋಟೋ 5 :

ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲನಹಳ್ಳಿ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶನೇಶ್ವರಸ್ವಾಮಿ ಮಠದ ಶಿವರಾತ್ರಿ ಜಾತ್ರಾ ಉತ್ಸವ ಮತ್ತು ಮಹಾ ರುದ್ರಯಾಗ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ರಜತ ಕಿರೀಟ ಧಾರಣೆ ಮಾಡಿ ಸನ್ಮಾನಿಸಲಾಯಿತು.