ಜಡ್ಜ್‌ ಎದುರೇ ಕತ್ತು ಕೊಯ್ದುಕೊಂಡ ವ್ಯಕ್ತಿ!

| Published : Apr 04 2024, 01:02 AM IST / Updated: Apr 04 2024, 06:53 AM IST

High Court

ಸಾರಾಂಶ

ನ್ಯಾಯಾಲಯದ ಕಲಾಪ ನಡೆಯತ್ತಿರುವ ವೇಳೆ ನ್ಯಾಯಮೂರ್ತಿಗಳ ಎದುರೇ ವ್ಯಕ್ತಿಯೊಬ್ಬ ಸರ್ಜಿಕಲ್‌ ಬ್ಲೇಡ್‌ನಿಂದ (ರೇಜರ್‌) ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ ಹೈಕೋರ್ಟ್‌ನಲ್ಲಿ ನಡೆದಿದೆ.

 ಬೆಂಗಳೂರು :  ನ್ಯಾಯಾಲಯದ ಕಲಾಪ ನಡೆಯತ್ತಿರುವ ವೇಳೆ ನ್ಯಾಯಮೂರ್ತಿಗಳ ಎದುರೇ ವ್ಯಕ್ತಿಯೊಬ್ಬ ಸರ್ಜಿಕಲ್‌ ಬ್ಲೇಡ್‌ನಿಂದ (ರೇಜರ್‌) ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ ಹೈಕೋರ್ಟ್‌ನಲ್ಲಿ ನಡೆದಿದೆ.

ಮೈಸೂರಿನ ವಿಜಯನಗರ ನಿವಾಸಿ ಚಿನ್ನಂ ಶ್ರೀನಿವಾಸ್‌ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಶ್ರೀನಿವಾಸ್‌ರನ್ನು ವಶಕ್ಕೆ ಪಡೆದ ಪೊಲೀಸರು ಆ್ಯಂಬುಲೆನ್ಸ್‌ನಲ್ಲಿ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದರು. ಅನ್ನನಾಳದ ಅಕ್ಕಪಕ್ಕದ ರಕ್ತನಾಳಗಳು ಕತ್ತರಿಸಿ ಹೋಗಿರುವುದರಿಂದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದಿಲ್ಲ. ಹೈಕೋರ್ಟ್‌ ಭದ್ರತಾ ವಿಭಾಗದ ಇನ್ಸ್‌ಪೆಕ್ಟರ್‌ ನೀಡಿದ ದೂರಿನ ಮೇಲೆ ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ:

ಹೈಕೋರ್ಟ್‌ ಕೋರ್ಟ್‌ ಹಾಲ್‌ -1ರಲ್ಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಚ್.ಪಿ. ಪ್ರಭಾಕರ ಶಾಸ್ತ್ರಿ ಅವರ ವಿಭಾಗೀಯ ನ್ಯಾಯಪೀಠ ಪ್ರಕರಣಗಳ ವಿಚಾರಣೆ ನಡೆಸುತ್ತಿತ್ತು. ಮಧ್ಯಾಹ್ನ 1.15ರ ಸಮಯದಲ್ಲಿ ವಿಚಾರಣಾ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 26ರ ಪ್ರಕರಣವನ್ನು ವಿಚಾರಣೆಗಾಗಿ ಕೋರ್ಟ್ ಆಫೀಸರ್ ಕೂಗುತ್ತಿದ್ದಂತೆಯೇ ಶ್ರೀನಿವಾಸ್‌ ಒಂದಷ್ಟು ಕಡತಗಳೊಂದಿಗೆ ನ್ಯಾಯಪೀಠದ ಮುಂದೆ ಬಂದು ನಿಂತರು. ಶ್ರೀನಿವಾಸ್‌ ದಾಖಲೆಗಳನ್ನು ನ್ಯಾಯಾಲಯದ ಅಧಿಕಾರಿಗೆ ಸಲ್ಲಿಸಿ, ನನಗೆ ನ್ಯಾಯ ಕೊಡಿಸಬೇಕು ಎಂದು ಕೋರಿ, ತಕ್ಷಣ ತಮ್ಮ ಜೇಬಿನಿಂದ ರೇಜರ್‌ ತೆಗೆದು ಕುತ್ತಿಗೆ ಕೊಯ್ದುಕೊಳ್ಳಲು ಮುಂದಾದರು.

ಅನಿರೀಕ್ಷಿತ ಘಟನೆಯಿಂದ ದಿಗ್ಭ್ರಮೆಗೊಂಡ ಸ್ಥಳದಲ್ಲಿದ್ದ ವಕೀಲರು ಅವರನ್ನು ತಡೆದರು. ಆಗ ನ್ಯಾಯಮೂರ್ತಿಗಳ ಸೂಚನೆ ಮೇರೆಗೆ ಪೊಲೀಸರು ಶ್ರೀನಿವಾಸನನ್ನು ಚಿಕಿತ್ಸೆ ಕಲ್ಪಿಸಲು ಆಸ್ಪತ್ರೆಗೆ ಕರೆದೊಯ್ದರು. 

ಮೂಲಗಳ ಪ್ರಕಾರ, ಶ್ರೀನಿವಾಸ್ ಅಪಾರ್ಟ್‌ಮೆಂಟ್ ನಿರ್ಮಿಸಿ ಲಾಭ ಹಂಚಿಕೊಳ್ಳುವ ವಿಚಾರವಾಗಿ ಶ್ರೀಧರ್‌ರಾವ್ ಮತ್ತಿತರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಒಪ್ಪಂದ ಪಾಲಿಸದೆ 93 ಲಕ್ಷ ರು. ಪಡೆದು ವಂಚನೆ ಮಾಡಿದ್ದಾರೆ. ಜೊತೆಗೆ ತಮ್ಮ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ಶ್ರೀನಿವಾಸ್ 2021ರಲ್ಲಿ ವಿಜಯನಗರ ಠಾಣೆಗೆ ದೂರು ದಾಖಲಿಸಿದ್ದರು. ಆ ಕುರಿತು ಎಫ್‌ಐಆರ್ ಕೂಡ ದಾಖಲಾಗಿತ್ತು. ಎಫ್‌ಐಆರ್ ಪ್ರಶ್ನಿಸಿ ಶ್ರೀಧರ್‌ರಾವ್ ಮತ್ತಿತರೆ ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದು ಸಿವಿಲ್ ವ್ಯಾಜ್ಯವಾಗಿರುವುದರಿಂದ ಎಫ್‌ಐಆರ್‌ ರದ್ದುಪಡಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ, ಪ್ರಕರಣವನ್ನು ಸಿವಿಲ್ ಕೋರ್ಟ್‌ನಲ್ಲಿ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಲು 2023ರ ಜೂ.2ರಂದು ಆದೇಶಿಸಿತ್ತು. ಈ ಕುರಿತು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ದೂರು ನೀಡಲು ಪತ್ನಿ ಜತೆ ಬಂದಿದ್ದ ಶ್ರೀನಿವಾಸ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. 

ಘಟನೆಗೆ ಕಾರಣ ತಿಳಿದಿಲ್ಲ. ಚಿಕಿತ್ಸೆ ನೀಡಲಾಗುತ್ತಿದೆ. ಚೇತರಿಕೊಂಡ ನಂತರ ಹೆಚ್ಚಿನ ವಿಚಾರ ನಡೆಸಲಾಗುವುದು. ಶ್ರೀನಿವಾಸ್ ವಿರುದ್ಧದ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಚ್‌.ಟಿ. ಶೇಖರ್‌ ತಿಳಿಸಿದ್ದಾರೆ.ಈ ನಡುವೆ ನ್ಯಾಯಮೂರ್ತಿ ಶಾಸ್ತ್ರಿ ಅವರು, ರೇಜರ್ ಹಿಡಿದು ಕೋರ್ಟ್ ಹಾಲ್‌ಗೆ ಬರಲು ನಮ್ಮ ಭದ್ರತಾ ಸಿಬ್ಬಂದಿ ಹೇಗೆ ಅನುಮತಿಸಿದರು? ನಮ್ಮಲ್ಲಿ ಭದ್ರತೆ ಅಪಾರವಾಗಿದೆ. ಆದರೂ ಹೇಗೆ ಅವರು ನುಸುಳಿದರು, ಹೈಕೋರ್ಟ್ ಪೊಲೀಸರು ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು.ನಂತರ ಕೋರ್ಟ್ ಆಫೀಸರ್‌ ಉದ್ದೇಶಿಸಿ, ಆ ವ್ಯಕ್ತಿ (ಶ್ರೀನಿವಾಸ್‌) ನೀಡಿದ ಕಡತವನ್ನು ನೀವು ಏಕೆ ಪಡೆದುಕೊಂಡಿರಿ. ಹೀಗಾಗಿ, ನಿಮ್ಮ ಬೆರಳಚ್ಚನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ನ್ಯಾಯಾಲಯದ ಅನುಮತಿಯಿಲ್ಲದೆ ನೀವು ಯಾವುದೇ ದಾಖಲೆ ಸ್ವೀಕರಿಸುವಂತಿಲ್ಲ. ವಕೀಲರು ಕಡತ ನೀಡಿದ್ದರೆ ನೋಡಬಹುದಿತ್ತು ಎಂದು ನುಡಿದರು.ಸ್ಥಳದಲ್ಲಿದ್ದ ಸರ್ಕಾರದ ಪರ ವಕೀಲರು, ಪೊಲೀಸರಿಗೆ (ಪ್ರಕರಣವನ್ನು ವ್ಯಾಪ್ತಿ ಹೊಂದಿದ) ತಿಳಿಸುವುದು ಸೂಕ್ತ ಎಂದು ತಿಳಿಸಿದರು. ಅದಕ್ಕೆ ಒಪ್ಪಿದ ನ್ಯಾಯಪೀಠ, ಸ್ಥಳಕ್ಕೆ ಆಗಮಿಸಿದ ರಿಜಿಸ್ಟ್ರಾರ್ ಜನರಲ್ ಅವರಿಗೆ ಮಾಹಿತಿ ನೀಡಿ, ಕಲಾಪ ಮುಕ್ತಾಯಗೊಳಿಸಿತು.