ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಮನ ಮನೆಗೆ ಮಾಚಿದೇವ ಕಾರ್ಯಕ್ರಮದ ಸಮಾರೋಪ ಸಮಾರಂಭ ೩೧ ರ ಭಾನುವಾರ ತುಮಕೂರು ನಗರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಮಾಜದ ಬಂಧುಗಳು ಆಗಮಿಸಬೇಕು ಎಂದು ಚಿತ್ರದುರ್ಗ ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಬಸವ ಮಾಚಿದೇವ ಸ್ವಾಮೀಜಿಗಳು ತಿಳಿಸಿದರು. ಅವರು ಈ ಬಗ್ಗೆ ನಗರದ ಶ್ರೀ ವೀರಘಂಟೆ ಮಡಿವಾಳ ಮಾಚಿದೇವ ದೇವಸ್ಥಾನಕ್ಕೆ ಭೇಟಿ ನೀಡಿ ಸಮುದಾಯದ ಮುಖಂಡರೊಂದಿಗೆ ಚರ್ಚೆ ನಡೆಸಿ ಮಾತನಾಡಿದರು. ಮಡಿವಾಳ ಸಮುದಾಯ ಒಂದು ಶೋಷಿದ ಸಮುದಾಯವಾಗಿದ್ದು, ಸಮಾಜವು ಸಾಮಾಜಿಕ ಶೈಕ್ಷಣಿಕವಾಗಿ ಹಿಂದುಳಿದಿದ್ದು ಈ ಹಿನ್ನೆಲೆಯಲ್ಲಿ ಸಮುದಾಯವನ್ನು ಜಾಗೃತಿ ಮೂಡಿಸಲು ಮತ್ತು ಧಾರ್ಮಿಕ ಆಚಾರ ವಿಚಾರಗಳನ್ನು ಎಲ್ಲಾರಿಗೂ ತಿಳಿಸುವ ಉದ್ದೇಶದಿಂದ ಮನ ಮನೆಗೆ ಮಾಚಿದೇವ ಕಾರ್ಯಕ್ರಮ ಹಮ್ಮಿಕೊಂಡು ಬೀದರ್ ನಿಂದ ಚಾಮರಾಜ ನಗರದವರೆಗೆ ಸಂಚರಿಸಿದ್ದೇವೆ. ಈ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. ಮಡಿವಾಳ ಸಮುದಾಯವನ್ನು ಎಸ್ಸಿ ಜಾತಿ ಪಟ್ಟಿಗೆ ಸೇರಿಸುವಂತೆ ೪೦ ವರ್ಷಗಳಿಂದ ಹೋರಾಟ ಮಾಡಿದ್ದೇವೆ. ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಅದು ಸಾಧ್ಯವಾಗಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ಬಗ್ಗೆ ಉಗ್ರ ಹೋರಾಟ ಮಾಡುತ್ತೇವೆ. ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಿ ಮನವಿ ನೀಡುತ್ತೇವೆ ಹಾಗೂ ಡಾ.ಅನ್ನಪೂರ್ಣಮ್ಮ ಆಯೋಗದ ವರದಿಯನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಮನವಿ ಮಾಡುತ್ತೇವೆ ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಸಮುದಾಯದ ಮುಖಂಡರಾದ ಮುದಿಮಡು ರಂಗಶಾಮಯ್ಯ ಮಾತನಾಡಿ, ಶ್ರೀ ಬಸವ ಮಾಚಿದೇವ ಸ್ವಾಮೀಜಿಗಳ ನೇತೃತ್ವದಲ್ಲಿ ಮನ ಮನೆಗೆ ಮಾಚಿದೇವ ಕಾರ್ಯಕ್ರಮದ ಮೂಲಕ ರಾಜ್ಯಾದ್ಯಂತ ಉತ್ತಮ ಸಂಘಟನೆಯಾಗಿದೆ. ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಬೇಕೆಂಬ ಹಕ್ಕೊತ್ತಾಯವನ್ನು ೩೧ರ ಸಮಾರಂಭದಲ್ಲಿ ಮಾಡುತ್ತೇವೆ. ತಮ್ಮ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿ ನಾವೆಲ್ಲರೂ ನಿಮ್ಮ ಜೊತೆ ಇರುತ್ತೇವೆ ಎಂದರು. ಈ ಸಂದರ್ಭದಲ್ಲಿ ಮಡಿವಾಳ ಸಂಘದ ಜಿಲ್ಲಾ ಉಪಾಧ್ಯಕ್ಷ ಎಚ್. ಬಿ.ಜ್ಞಾನೇಶ್, ಶಿರಾ ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಬಿ.ಕೆ. ಈಶ್ವರ್, ಪ್ರಧಾನ ಕಾರ್ಯದರ್ಶಿ ನಟರಾಜ ಡಿ. ನಗರಸಭಾ ಸದಸ್ಯ ಹಾಗೂ ಟ್ರಸ್ಟ್ ಅಧ್ಯಕ್ಷರಾದ ಎಸ್. ಎನ್. ಮಹೇಶ್ ಕುಮಾರ್, ಭೂತೇಶ್, ಪಾಪಣ್ಣ, ಕೆ. ಕುಮಾರ್, ರಂಗನಾಥ್, ಎನ್. ಕರಿಯಣ್ಣ, ದೇವರಾಜಪ್ಪ, ಮಂಜುನಾಥ್, ರಮೇಶ್ ಮತ್ತು ಸಮುದಾಯದ ಮುಖಂಡರುಗಳು ಹಾಜರಿದ್ದರು.