ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆಗೆ ಸರ್ಕಾರ ನೀಡಿದ ಅನುದಾನ ಬಳಸುವ ಮೂಲಕ ಕಾಲಮಿತಿಯಲ್ಲಿ ಕ್ರಿಯಾಯೋಜನೆಯಲ್ಲಿ ಇರುವ ಕಾಮಗಾರಿಗಳ ನಿರ್ವಹಣೆ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳೂ ಆದ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಗುರುನಾಥ ಎನ್. ಗೌಡಪ್ಪನೋರ ಹೇಳಿದರು.ನಗರದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆಗೆ ನೀಡಿದ ಅನುದಾನ ದುರ್ಬಳಿಕೆ ಆಗಬಾರದು. ಆರ್ಥಿಕ ವರ್ಷ ಮುಗಿಯಲು ಇನ್ನು ಮೂರು ತಿಂಗಳಿದ್ದು, ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮವಹಿಸುವಂತೆ ತಿಳಿಸಿದರು.ತಾಲೂಕಿನ ಎಲ್ಲ ಶಾಲೆಗಳಿಗೆ ನರೇಗಾ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಟ್ಟಿದ್ದು, ಬಳಕೆ ಮಾಡುವ ಕುರಿತು ಎಲ್ಲ ಶಾಲಾ ಶಿಕ್ಷಕರಿಗೆ ಸೂಚನೆ ನೀಡಿ, ಬಳಕೆ ಮಾಡಿದಾಗ, ಶೌಚಾಲಯ ನಿರ್ಮಾಣದ ಉದ್ದೇಶ ಈಡೇರುತ್ತದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿಬಾ ಜೀಲಿಯನ್ ಸಭೆಯಲ್ಲಿ ತಿಳಿಸಿದರು.
ಬಿಸಿಎಂ, ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಇಲಾಖೆಗಳಡಿ ತಾಲೂಕಿನಲ್ಲಿರುವ ವಸತಿ ನಿಲಯಗಳ ನಿರ್ವಹಣೆ ಕುರಿತು ಪ್ರಗತಿ ಪರಿಶೀಲಿಸಿದ ಅವರು, ಎಲ್ಲ ವಸತಿ ನಿಲಯಗಳಲ್ಲಿ ಮೇನು ಪ್ರಕಾರ ಮಕ್ಕಳಿಗೆ ಆಹಾರ ನೀಡಿ, ಶುದ್ಧ ಕುಡಿಯುವ ನೀರು ಒದಗಿಸಿ, ಸ್ವಚ್ಛತೆ ಕಾಪಾಡಿ ಎಲ್ಲ ವಸತಿ ನಿಲಯಗಳಿಗೂ ಭೇಟಿ ನೀಡಿ ಸ್ವಚ್ಛತೆ ಕುರಿತು ಪರಿಶೀಲಿಸಿ ಎಂದು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ವಸತಿ ನಿಲಯದ ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ಗುಣಮಟ್ಟದ ಆಹಾರ ವಿತರಣೆ, ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಕಾಳಜಿ ವಹಿಸಿ, ಅಗತ್ಯ ಮೂಲ ಸೌಲಭ್ಯಗಳ ಲಭ್ಯತೆ ಹಾಗೂ ಕೊರತೆಗಳ ಕುರಿತು ವಸತಿ ನಿಲಯಗಳಿಗೆ ಭೇಟಿ ನೀಡಿ, ಪರಿಶೀಲನೆ ಮಾಡಬೇಕೆಂದು ತಾಪಂ ಇಒ ಸೋಮಶೇಖರ ಬಿರಾದಾರ್ ಅವರು ಬಿಸಿಎಂ ಮತ್ತು ಅಲ್ಪ ಸಂಖ್ಯಾತರ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೋಬ್ಬರ ಕೊರತೆ ಇಲ್ಲ, ಅಗತ್ಯಕ್ಕೆ ಅನುಸಾರ ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ವರದಿ ಸಲ್ಲಿಸಿದರು. ಅನ್ಯ ಬೆಳೆ ಬೆಳೆಯುವುದರಿಂದ ರೈತರಿಗೆ ಸಿಗುವ ದುಪ್ಪಟ್ಟು ಲಾಭದ ಬಗ್ಗೆ ಗೊತ್ತಿರುವುದಿಲ್ಲ. ಹೀಗಾಗಿ ರೈತರಿಗೆ ಬೇರೆ, ಬೇರೆ ಬೆಳಗಳ ಕುರಿತು ಮಾಹಿತಿ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಾಮಾಜಿಕ ಅರಣ್ಯ, ಮೀನುಗಾರಿಕೆ, ರೇಷ್ಮೆ, ನಿರ್ಮಿತಿ, ಗ್ರಾಮೀಣ ಕುಡಿಯುವ ನೀರು, ಕೆಆರ್‌ಐಡಿಎಲ್, ಅಕ್ಷರ ಧಾಸೋಹ (ಬಿಸಿಯೂಟ), ತೋಟಗಾರಿಕೆ ಸೇರಿ ತಾಳೂಕ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದರು. ಸಹಾಯಕ ನಿರ್ದೇಶಕ ಭೀಮಣ್ಣಗೌಡ ಬಿರಾದಾರ, ತಾಲೂಕಿನ ಆರೋಗ್ಯ ಅಧಿಕಾರಿ ಡಾ. ರಮೇಶ, ಕ್ಷೇತ್ರ ಶಿಕ್ಷಣಾಧಿಕಾರಿ ಶಿಬಾ ಜಿಲಿಯನ್, ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಸೂರ್ಯವಂಶಿ ಸೇರಿದಂತೆ ಇತರರಿದ್ದರು.