ಪ್ರವಾಹ ಪರಿಸ್ಥಿತಿ ಸಮರ್ಪಕ ನಿರ್ವಹಿಸಿ

| Published : Aug 21 2025, 02:00 AM IST

ಸಾರಾಂಶ

ಪ್ರಸ್ತುತ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಬೆಳಗಾವಿ ಕಂದಾಯ ವಿಭಾಗದ ಜಿಲ್ಲಾಧಿಕಾರಿಗಳಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಜಾನಕಿ.ಕೆ.ಎಂ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರಸ್ತುತ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಬೆಳಗಾವಿ ಕಂದಾಯ ವಿಭಾಗದ ಜಿಲ್ಲಾಧಿಕಾರಿಗಳಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಜಾನಕಿ.ಕೆ.ಎಂ ಸೂಚಿಸಿದರು.

ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಬುಧವಾರ ಜರುಗಿದ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕ ನಿರ್ವಹಣೆ ಕುರಿತಂತೆ ಜರುಗಿದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅತಿಯಾದ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮ ಪಂಚಾಯತಿಗಳಲ್ಲಿನ ವಿಪತ್ತು ನಿರ್ವಹಣಾ ಸಮಿತಿಗಳನ್ನು ಜರುಗಿಸಿ ಪ್ರವಾಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ತಿಳಿಸಿದರು. ಮನೆ ಹಾನಿ, ಬೆಳೆಹಾನಿ ಪ್ರದೇಶಗಳಲ್ಲಿನ ಸಮೀಕ್ಷಾ ಕಾರ್ಯವನ್ನು ತ್ವರಿತವಾಗಿ ನಡೆಸಿ ಪರಿಹಾರ ವಿತರಣೆಗೆ ಕ್ರಮವಹಿಸಬೇಕು. ರಸ್ತೆ, ಸೇತುವೆ ಮತ್ತು ಇತರ ಮೂಲಭೂತಗಳ ಸೌಕರ್ಯಗಳಿಗೆ ಹಾನಿಯಾಗಿರುವ ಬಗ್ಗೆ ಸಮೀಕ್ಷೆ ಜರುಗಿಸಿ ಸರ್ಕಾರಕ್ಕೆ ವರದಿ ನೀಡಲು ಕ್ರಮ ವಹಿಸಬೇಕು ಎಂದರು.ಎಲ್ಲ ಹಂತದ ಅಧಿಕಾರಿಗಳು ತುರ್ತು ಸಂದರ್ಭ ಹೊರತು ಪಡಿಸಿ ರಜೆ ಮೇಲೆ ತೆರಳತಕ್ಕದ್ದಲ್ಲ ಮತ್ತು ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ. ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ಥರಿಗೆ ಅಗತ್ಯವಾದ ಸೌಲಭ್ಯವನ್ನು ನೀಡಲು ಸೂಕ್ತ ವ್ಯವಸ್ಥೆ ಮಾಡುವುದು ಹಾಗೂ ಪ್ರತಿಯೊಂದು ಜಿಲ್ಲಾಧಿಕಾರಿ ಕಚೇರಿ, ಸಹಾಯಕ ಆಯುಕ್ತರು, ತಹಸೀಲ್ದಾರ್‌ ಕಚೇರಿಯಲ್ಲಿ ಸಹಾಯ ವಾಣಿ ಕೇಂದ್ರಗಳನ್ನು ಸ್ಥಾಪಿಸಿ ೨೪x೭ ರಂತೆ ತಂಡಗಳನ್ನು ರಚಿಸಿ ಕಾರ್ಯನಿರ್ವಹಿಸಲು ತಿಳಿಸಿದರು. ಜಿಲ್ಲಾಧಿಕಾರಿಗಳು ಮಳೆ, ಪ್ರವಾಹ ಸಂದರ್ಭಾನುಸಾರ ಜಿಲ್ಲಾ ವಿಪತ್ತು ನಿರ್ವಹಣ ಸಭೆಗಳನ್ನು ಜರುಗಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು. ಬೆಳಗಾವಿ ವಿಭಾಗದ ಪ್ರತಿಯೊಂದು ಜಿಲ್ಲೆಯಲ್ಲಿ ತಾಲೂಕುಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೊಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಅವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಆಯಾ ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಪ್ರಾರಂಭವಾಗುವ ಮುಂಚೆ ಗುರುತಿಸಲಾದ ಶಿಥಿಲಗೊಂಡ ಶಾಲಾ ಕೊಠಡಿಗಳು/ಅಂಗನವಾಡಿ ಕೇಂದ್ರಗಳಲ್ಲಿನ ಶಾಲಾ ಮಕ್ಕಳನ್ನು ತಾತ್ಕಾಲಿಕವಾಗಿ ಬೇರೆ ಸುಸಜ್ಜಿತ ಕೊಠಡಿಗಳಿಗೆ ಸ್ಥಳಾಂತರಿಸಬೇಕು ಎಂದರು. ಮಳೆ/ಪ್ರವಾಹ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಅಗ್ನಿಶಾಮಕ ತಂಡಗಳ ಕಾರ್ಯನಿರ್ವಹಣೆಗೆ ಸಾರ್ವಜನಿಕರ ತಿಳಿವಳಿಕೆಗಾಗಿ ತಂಡಗಳ ವಿವರಗಳನ್ನು ಸಾರ್ವಜನಿಕ ಸ್ಥಳಗಳಾದ ಗ್ರಾಮ ಪಂಚಾಯತಿ /ಗ್ರಾಮ ಚಾವಡಿಗಳ ಸೂಚನಾ ಫಲಕಗಳಲ್ಲಿ ಪ್ರಚುರ ಪಡಿಸಬೇಕು. ಮಳೆ ಪ್ರವಾಹದಿಂದ ಹಾನಿಯಾದ ಮನೆ/ಗೃಹೋಪಯೋಗಿ ಸಾಮಗ್ರಿಗಳು ಮತ್ತು ಜನ-ಜಾನುವಾರುಗಳ ವಿವರಗಳನ್ನು RGRHCL PORTAL ದಲ್ಲಿ ದಾಖಲಿಸುವುದು ಹಾಗೂ ಸರ್ಕಾರದ ನಿಯಮಾವಳಿನುಸಾರ ಸಂಬಂಧಿತ ಕುಟುಂಬಗಳಿಗೆ ತ್ವರಿತವಾಗಿ ಪರಿಹಾರ ಧನ ಮಂಜೂರು ಮಾಡುವುದು. ಮಳೆ/ಪ್ರವಾಹಕ್ಕೆ ಸಂಬಂಧಿಸಿದಂತೆ ಕಂದಾಯ, ಆರೋಗ್ಯ, ಕೃಷಿ, ತೋಟಗಾರಿಕೆ, ನೀರಾವರಿ, ಪೊಲೀಸ್, ಗೃಹ ರಕ್ಷಕ ದಳ ಇಲಾಖಾಧಿಕಾರಿಗಳು ಸಹಭಾಗಿತ್ವದಲ್ಲಿ ಮಳೆ/ಪ್ರವಾಹ ಸಂದರ್ಭದಲ್ಲಿ ಜವಾಬ್ದಾರಿಯಿಂದ ಹಾಗೂ ಸಮನ್ವಯದೊಂದಿಗೆ ಕಾರ್ಯ ನಿರ್ವಹುಸಲು ತಿಳಿಸಿದರು. ಸಹಾಯವಾಣಿ ಕೇಂದ್ರಗಳು

ಬೆಳಗಾವಿ-೦೮೩೧-೨೪೦೭೨೯೦, ವಿಜಯಪುರ-೦೮೩೫೨-೨೨೧೨೬೧, ಬಾಗಲಕೋಟೆ-೦೮೩೫೪-೨೩೬೨೪೦, ಧಾರವಾಡ-೦೮೩೬-೨೪೪೫೫೦೮, ಗದಗ-೦೮೩೭೨-೨೩೯೧೭೭, ಹಾವೇರಿ-೦೮೩೭೫-೨೪೯೧೦೨, ಉತ್ತರ ಕನ್ನಡ (ಕಾರವಾರ)- ೦೮೩೮೨-೨೨೯೮೫೭ ಜಿಲ್ಲಾಮಟ್ಟದಲ್ಲಿ ತೆರೆದಿರುವ ಕಂಟ್ರೋಲ್ ರೂಂನ್ನು ಕಾರ್ಯಪ್ರವೃತ್ತರನ್ನಾಗಿಸಿ ಸಾರ್ವಜನಿಕರಿಗೆ ೨೪X೭ ಸೇವೆಯನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವುದು. ತುರ್ತು ಸಂದರ್ಭದಲ್ಲಿ ಸಹಾಯ ಸೌಲಭ್ಯ ಮತ್ತು ದೂರು ಸಲ್ಲಿಸುವ ಕುರಿತು ಸಾರ್ವಜನಿಕರಿಗೆ ತಿಳಿಸಲು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ.ಕೆ.ಎಂ ಅವರು ತಿಳಿಸಿದರು. ಸಭೆಯಲ್ಲಿ ಬೆಳಗಾವಿ ಕಂದಾಯ ವಿಭಾಗದ ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು.