ಸಾರಾಂಶ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಮಾನವ ಸರಪಳಿ ಯಶಸ್ಸಿಗಾಗಿ ರಚಿಸಲಾಗಿರುವ ವಿವಿಧ ಉಪಸಮಿತಿಗಳು ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಜಿಪಂ ಸಿಇಒ ಹಾಗೂ ಪ್ರಭಾರ ಜಿಲ್ಲಾಧಿಕಾರಿ ಮೋನಾ ರೋತ್ ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಮಾನವ ಸರಪಳಿ ಯಶಸ್ಸಿಗಾಗಿ ರಚಿಸಲಾಗಿರುವ ವಿವಿಧ ಉಪಸಮಿತಿಗಳು ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಜಿಪಂ ಸಿಇಒ ಹಾಗೂ ಪ್ರಭಾರ ಜಿಲ್ಲಾಧಿಕಾರಿ ಮೋನಾ ರೋತ್ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಪಂ ಸಿಇಒ ಕಚೇರಿ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆ. 15ರಂದು ಹಮ್ಮಿಕೊಂಡಿರುವ ಮಾನವ ಸರಪಳಿ ಕಾರ್ಯಕ್ರಮ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಭಾರತ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯುವ ಮಹತ್ತರ ಕಾರ್ಯಕ್ರಮ ಇದಾಗಿದೆ. ಸೆ. 15ರಂದು ಬೀದರ್‌ನ ಬಸವಕಲ್ಯಾಣದಿಂದ ದಕ್ಷಿಣದ ಗಡಿಜಿಲ್ಲೆ ಚಾಮರಾಜನಗರದವರೆಗೆ ಮಾನವ ಸರಪಳಿ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಆಯೋಜಿಸಲಾಗಿದೆ. ಮಾನವ ಸರಪಳಿಯಲ್ಲಿ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಎಲ್ಲಾ ಸರ್ಕಾರಿ ಅಧಿಕಾರಿ, ಸಿಬ್ಬಂದಿ, ವಿವಿಧ ಸಂಘ, ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬರ ಭಾಗವಹಿಸುವಿಕೆ ಅಗತ್ಯವಾಗಿದೆ ಎಂದರು.
ಚಾಮರಾಜನಗರ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ವತಿಯಿಂದ ಜಿಲ್ಲೆಯ ಸರಹದ್ದು ಮೂಗೂರು ಕ್ರಾಸ್‌ನಿಂದ ನಗರದ ಪಚ್ಚಪ್ಪ ವೃತ್ತದವರೆಗೆ 24 ಕಿ.ಮೀ. ಅಂತರದ ಮಾನವ ಸರಪಳಿ ಏರ್ಪಡಿಸಲಾಗಿದೆ. ಕಾರ್ಯಕ್ರಮ ನಿರ್ವಹಣೆಗಾಗಿ ಶಿಷ್ಠಾಚಾರ ಸಮಿತಿ, ಶುಚಿತ್ವ ಸಮಿತಿ, ಧ್ವಜ ಸಮಿತಿ, ರಂಗೋಲಿ ಸಮಿತಿ, ವೇಷಭೂಷಣ ಸಮಿತಿ, ಆರೋಗ್ಯ ಸಮಿತಿ, ಸಾಂಸ್ಕೃತಿಕ ಸಮಿತಿ, ಸ್ಕೂಲ್ ಬ್ಯಾಂಡ್ ಸಮಿತಿ ಇತರೆ ಉಪಸಮಿತಿಗಳನ್ನು ರಚಿಸಿ ಕಾರ್ಯಕ್ರಮ ನಿರ್ವಹಣೆಗಾಗಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಿ ಕಾರ್ಯಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಶಿಷ್ಠಾಚಾರ ಪ್ರಕಾರ ಸುಗಮವಾಗಿ ನಿರ್ವಹಿಸಲು ಈಗಾಗಲೇ ರಚಿಸಲಾಗಿರುವ ಉಪಸಮಿತಿಗಳು ತಮಗೆ ವಹಿಸಿರುವ ಜಬಾವ್ದಾರಿಗಳಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಆಂಗನವಾಡಿ, ಅಶಾ ಕಾರ್ಯಕರ್ತೆಯರು, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿನಿಲಯದ ಮಕ್ಕಳು ಮತ್ತು ವಿವಿಧ ಇಲಾಖೆಯ ಫಲಾನುಭವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿ ಕರೆತರುವ ವ್ಯವಸ್ಥೆಯಾಗಬೇಕು. ಎಲ್ಲಾ ಪುರುಷ ಹಾಗೂ ಮಹಿಳಾ ಅಧಿಕಾರಿ, ಸಿಬ್ಬಂದಿ ಸಾಂಪ್ರದಾಯಿಕ ಉಡುಪು ಧರಿಸಬೇಕು ಎಂದು ನಿರ್ದೇಶನ ನೀಡಿದರು. ನಗರದ ಪಚ್ಚಪ್ಪ ವೃತ್ತದಿಂದ ವರ್ತಕರ ಭವನದವರೆಗೆ ತ್ರಿವರ್ಣ ಧ್ವಜವನ್ನು ಶಿಷ್ಠಾಚಾರ ಪಾಲನೆಯನ್ವಯ ನಿರ್ವಹಿಸಬೇಕು. ಮಾನವ ಸರಪಳಿಯ ಪ್ರಾರಂಭದಿಂದ ಅಂತಿಮ ಸ್ಥಳದವರೆಗೆ ರಂಗೋಲಿ ಬಿಡಿಸಿ ಮೆರುಗು ಹೆಚ್ಚಿಸಬೇಕು. ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಬೇಕು. ಪ್ರತಿ ಕಿ.ಮೀ. ಅಂತರದಲ್ಲಿ ವಿವಿಧ ರಾಜ್ಯಗಳ ಸಾಂಪ್ರಾದಾಯಿಕ ವೇಷಭೂಷಣ ಹಾಗೂ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವೇಷ ಧರಿಸಿದ ಮಕ್ಕಳನ್ನು ಪ್ರದರ್ಶಿಸಬೇಕು. ಜಿಲ್ಲೆಯ 24 ಕಿ.ಮೀ. ನಲ್ಲಿ ನಡೆಯುವ ಮಾನವ ಸರಪಳಿ ಕಾರ್ಯಕ್ರಮದುದ್ದಕ್ಕೂ ಶುಚಿತ್ವ ಕಾಪಾಡಬೇಕು. ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರಬೇಕು. ಪ್ರತಿ ಕಿ.ಮೀ.ಗೆ ಒಂದರಂತೆ ಮೊಬೈಲ್ ಶೌಚಾಲಯ, ಪ್ರತಿ 5 ಕಿ.ಮೀ.ಗೆ ಒಂದು ಆಂಬುಲೆನ್ಸ್ ಸೇವೆ ಒದಗಿಸಬೇಕು ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಪಂ ಉಪ ಕಾರ್ಯದರ್ಶಿ ಪಿ. ಲಕ್ಷ್ಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಬಿಂದ್ಯಾ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.