ಸಾರಾಂಶ
ಹೆಣ್ಣು ಭ್ರೂಣದಲ್ಲಿದ್ದರೆ ಹತ್ಯೆ, ಹೊರಗೆ ಬಂದರೆ ಅತ್ಯಾಚಾರ ನಡೆಯುತ್ತಿದೆ. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಂರಕ್ಷಣೆ ಆಗಬೇಕು. ಗಂಡು- ಹೆಣ್ಣಿನ ನಡುವೆ ಸದ್ಭಾವನೆ ಮೂಡಿಸಬೇಕಿದೆ
ಕನ್ನಡಪ್ರಭ ವಾರ್ತೆ ಮೈಸೂರು
ಹೆಣ್ಣು ಮಕ್ಕಳು ಮೊದಲು ಮಾನಸಿಕವಾಗಿ ಗಟ್ಟಿಯಾಗಬೇಕು ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ ತಿಳಿಸಿದರು.ನಗರದ ಮಾನಸಗಂಗೋತ್ರಿ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಅರಿವು ಸಂಶೋಧನಾ ವಿದ್ಯಾರ್ಥಿ ವೇದಿಕೆ ಸಂಯುಕ್ತವಾಗಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳೆಯರು ಮತ್ತು ಹುಡುಗಿಯರಿಗಾಗಿ ಹಕ್ಕುಗಳು: ಸಮಾನತೆ, ಸಬಲೀಕರಣ ಕುರಿತು ವಿಶೇಷ ಉಪನ್ಯಾಸದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳ ಮೇಲೆ ಹಿರಿಯರು, ಕಿರಿಯರು ಎಲ್ಲರಿಂದಲೂ ಅತ್ಯಾಚಾರ ನಡೆಯುತ್ತಿದೆ. ಹೆಣ್ಣು ಭ್ರೂಣದಲ್ಲಿದ್ದರೆ ಹತ್ಯೆ, ಹೊರಗೆ ಬಂದರೆ ಅತ್ಯಾಚಾರ ನಡೆಯುತ್ತಿದೆ. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಂರಕ್ಷಣೆ ಆಗಬೇಕು. ಗಂಡು- ಹೆಣ್ಣಿನ ನಡುವೆ ಸದ್ಭಾವನೆ ಮೂಡಿಸಬೇಕಿದೆ ಎಂದು ಅವರು ಹೇಳಿದರು.ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ಪ್ರಾಧ್ಯಾಪಕಿ ಡಾ. ವಿಜಯಕುಮಾರಿ ಎಸ್. ಕರಿಕಲ್ ಮಾತನಾಡಿ, ಹೆಣ್ಣು- ಗಂಡಿನ ಹುಟ್ಟಿನಲ್ಲಿ ತುಂಬಾ ಅಸಮತೋಲನವಿದೆ. ಇದು ಸಾಮಾಜಿಕ ಸಂಕಷ್ಟಕ್ಕೂ ಕಾರಣ ಆಗಬಹುದು. ಭ್ರೂಣ ಹತ್ಯೆ ನಿಲ್ಲಬೇಕು. ಮಹಿಳೆಯರು ಅನಿಷ್ಠ ಪದ್ಧತಿಗಳಿಂದ ಹೊರ ಬರಬೇಕು ಎಂದರು.
ದೇಶದಲ್ಲಿ ಅತ್ಯಾಚಾರಗಳ ಸಂಖ್ಯೆ ಹೆಚ್ಚಾಗುತ್ತಿದೆ. ದಿನ ನಿತ್ಯ ಹೆಣ್ಣು ಮಕ್ಕಳ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ. ಈ ವಿಷಯಗಳ ಬಗ್ಗೆ ತಿಳಿವಳಿಕೆಯನ್ನು ನೀಡಿ, ಸ್ವಸ್ಥ ಸಮಾಜವನ್ನು ಕಟ್ಟಲು ಹೆಚ್ಚೆಚ್ಚು ಓದಬೇಕಾಗಿದೆ. ಸಂಶೋಧನಾ ವಿದ್ಯಾರ್ಥಿಗಳು ಲೋಕ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಹೆಚ್ಚೆಚ್ಚು ಓದಬೇಕು ಎಂದು ಅವರು ಸಲಹೆ ನೀಡಿದರು.ಹುಡುಗಿಯರಿಗಾಗಿ ಹಕ್ಕುಗಳು, ಸಮಾನತೆ, ಸಬಲೀಕರಣ ಕುರಿತು ಸಂಶೋಧನಾ ವಿದ್ಯಾರ್ಥಿನಿ ಎಂ. ಮಹದೇವಮ್ಮ ಹಾಗೂ ಮಹಿಳೆಯರಿಗಾಗಿ ಹಕ್ಕುಗಳು, ಸಮಾನತೆ, ಸಬಲೀಕರಣ ಕುರಿತು ಸಂಶೋಧನಾ ವಿದ್ಯಾರ್ಥಿ ಡಿ.ಜಿ. ವಜ್ರಮುನಿ ವಿಚಾರ ಮಂಡಿಸಿದರು.
ಸಂಶೋಧನಾ ವಿದ್ಯಾರ್ಥಿ ವೇದಿಕೆಯ ವಿದ್ಯಾರ್ಥಿ ಸಂಚಾಲಕರಾದ ಕೆ.ಎಸ್. ಕುಮಾರ, ಪಿ.ಆರ್. ರಂಜಿತಾ, ಕೆ. ರಂಗನಾಥ ಇದ್ದರು.