ಕವಿಯ ಪೂರ್ವಪರ ಗೊತ್ತಿದ್ದರೆ ವಿಮರ್ಶೆ ಸುಲಭ

| Published : Jan 24 2025, 12:45 AM IST

ಸಾರಾಂಶ

ಪಂಪ, ಪೊನ್ನ, ಕುಮಾರವ್ಯಾಸ ಸೇರಿದಂತೆ ಎಲ್ಲಾ ಹಳಗನ್ನಡ ಕವಿಗಳನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರುಕವಿ, ಆತನ ಸ್ಥಳ, ರಾಜಾಶ್ರಯದ ಮಾಹಿತಿ, ಇತಿಹಾಸ ಗೊತ್ತಿದ್ದರೆ ಕಾವ್ಯ ವಿಮರ್ಶೆ ಸುಲಭ ಎಂದು ವಿಮರ್ಶಕ ಪ್ರೊ. ಕೃಷ್ಣಮೂರ್ತಿ ಹನೂರು ಅಭಿಪ್ರಾಯಪಟ್ಟರು.ಮಾನಸಗಂಗೋತ್ರಿ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದಲ್ಲಿ ಗುರುವಾರ ಆರಂಭವಾದ ಕನ್ನಡ ಜೈನ ಮಹಾಕಾವ್ಯಗಳ ತಾತ್ವಿಕ ಜಿಜ್ಞಾಸೆ ಕುರಿತ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಪಂಪ, ಪೊನ್ನ, ಕುಮಾರವ್ಯಾಸ ಸೇರಿದಂತೆ ಎಲ್ಲಾ ಹಳಗನ್ನಡ ಕವಿಗಳನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಕನ್ನಡ ಸಾಹಿತ್ಯ ವಿದ್ಯಾರ್ಥಿಗೆ ಜಾನಪದ, ಹಳಗನ್ನಡ ಸೇರಿದಂತೆ ಎಲ್ಲವೂ ಗೊತ್ತಿರಬೇಕು. ಆಗ ಮಾತ್ರ ಭಾಷೆಗೆ ಏನಾದರೂ ಕಾಣಿಕೆ ನೀಡಲು ಸಾಧ್ಯ ಎಂದರು.ರಾಜ ಅರಿಕೇಸರಿಯನ್ನು ಹೊಗಳುವ ವೇಳೆ ಬಂದಾಗ ಪಂಪ ಹೆಚ್ಚೇ ಪದ್ಯ ಬರೆಯುತ್ತಾನೆ. ಹಸ್ತಿನಾವತಿ ಹೇಗಿತ್ತು ಎಂಬುದಕ್ಕೆ ಚಿಕ್ಕ ವಾಕ್ಯದಲ್ಲಿ ಹೇಳಿರುವ ಅವನ ಪ್ರತಿಭೆ ದೊಡ್ಡದು ಎಂದು ಅವರು ಉದಾಹರಿಸಿದರು. ಕುಮಾರವ್ಯಾಸ ಅಗತ್ಯವಿರುವ ಕಡೆ ನಾಲ್ಕಾರು ಸಾಲಿನಲ್ಲಿ ಮುಗಿಸಿದರೆ, ಅಗತ್ಯವಿಲ್ಲದ ಕಡೆ ಆರೇಳು ಪಂದ್ಯ ಬರೆಯುತ್ತಾನೆ. ಕೃಷ್ಣನ ಪ್ರಾರ್ಥನೆ ಮಾಡುವಾಗ ಹತ್ತು ಪದ್ಯ ಹೆಚ್ಚೇ ಬರೆಯುತ್ತಾನೆ. ಕವಿಗಳ ಇಷ್ಟ, ಇಷ್ಟವಾಗದ ಸಂಗತಿಗಳನ್ನೂ ವಿಶ್ಲೇಷಿಸಿಕೊಳ್ಳಬೇಕು ಎಂದು ಅವರು ವಿವರಿಸಿದರು.ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಜೈನ ಕವಿ ಹೊರತುಪಡಿಸಿ ಎಲ್ಲಾ ಕವಿಗಳೂ ಸ್ವಂತ ವಿಷಯಗಳನ್ನು ಉತ್ಪ್ರೇಕ್ಷೆಯಿಂದಲೇ ಹೇಳಿಕೊಂಡಿದ್ದಾರೆ. ಬಸವಣ್ಣ, ಅಕ್ಕಮಹಾದೇವಿ, ಕುಮಾರವ್ಯಾಸ ಸೇರಿ ಇತರ ಕವಿಗಳ ಸಂಗತಿಗಳನ್ನು ಅವರ ಬರಹದಲ್ಲಿ ನೋಡಲಾಗದು ಎಂದು ಅವರು ತಿಳಿಸಿದರು.ಪಂಪ, ರನ್ನರ ಯಾವುದಾದರೂ ಒಂದು ಹಳಗನ್ನಡ ಕಾವ್ಯವನ್ನು ಶ್ರದ್ಧೆಯಿಂದ ಓದಿದರೆ, ಉಳಿದೆಲ್ಲವೂ ಸುಲಭವಾಗುತ್ತದೆ ಎಂದು ಅವರು ಹೇಳಿದರು. ವಿಭಾಗದ ಮುಖ್ಯಸ್ಥೆ ಪ್ರೊ.ಎಸ್.ಡಿ. ಶಶಿಕಲಾ ಇದ್ದರು.