ಸಾರಾಂಶ
ಮಾತನಾಡಿ, ಸರ್ಕಾರದಿಂದ ಬರುವ ಅನುದಾನವನ್ನು ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುತ್ತೇನೆ.ಗ್ರಾಮೀಣ ಭಾಗದ ರೈತರಿಗೆ ಸಾಲ ಸೌಲಭ್ಯವನ್ನು ಕೊಡಿಸುತ್ತೇನೆ. ಪ್ರತಿಯೊಬ್ಬ ರೈತನೂ ಸಾಲ ಪಡೆದು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಂಡು ಸಕಾಲಕ್ಕೆ ಮರುಪಾವತಿ ಮಾಡಬೇಕು.
ಶಾಸಕ ಎಸ್.ಆರ್.ಶ್ರೀನಿವಾಸ್ ಗೆ ತೀವ್ರ ಮುಖಭಂಗ । ಅಧ್ಯಕ್ಷರಾಗಿ ಕೆಂಪಯ್ಯ, ಉಪಾಧ್ಯಕ್ಷರಾಗಿ ಕರಿದ್ಯಾಮಯ್ಯ ಆಯ್ಕೆ
ಕನ್ನಡಪ್ರಭ ವಾರ್ತೆ ಗುಬ್ಬಿತೀವ್ರ ಕುತೂಹಲ ಮೂಡಿಸಿದ್ದ ಮಂಚಲದೊರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಬಳಗ ಭರ್ಜರಿ ಜಯ ಗಳಿಸಿದರು, ಈ ಮೂಲಕ ಶಾಸಕ ಎಸ್.ಆರ್.ಶ್ರೀನಿವಾಸ್ ಬಳಗಕ್ಕೆ ತೀವ್ರ ಮುಖಭಂಗ ಉಂಟಾಯಿತು.
ತಾಲೂಕಿನ ಮಂಚಲದೊರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಂ.ಆರ್. ಕೆಂಪಯ್ಯ 08 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. 5 ಮತಗಳನ್ನು ಪಡೆದ ಯರಬಳ್ಳಿ ಪುಟ್ಟಸಿದ್ದಪ್ಪನವರು ಪರಾಜಿತಗೊಂಡರು. ಉಪಾಧ್ಯಕ್ಷರಾಗಿ ಕರಿದ್ಯಾಮಯ್ಯನವರು ಅವಿರೋಧವಾಗಿ ಆಯ್ಕೆಯಾದರು.ಕೆ.ಎನ್. ರಾಜಣ್ಣ ಬಳಗದ ಕೈ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ನೂತನ ಅಧ್ಯಕ್ಷ ಕೆಂಪಯ್ಯ ಮಾತನಾಡಿ, ಸರ್ಕಾರದಿಂದ ಬರುವ ಅನುದಾನವನ್ನು ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುತ್ತೇನೆ.ಗ್ರಾಮೀಣ ಭಾಗದ ರೈತರಿಗೆ ಸಾಲ ಸೌಲಭ್ಯವನ್ನು ಕೊಡಿಸುತ್ತೇನೆ. ಪ್ರತಿಯೊಬ್ಬ ರೈತನೂ ಸಾಲ ಪಡೆದು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಂಡು ಸಕಾಲಕ್ಕೆ ಮರುಪಾವತಿ ಮಾಡಬೇಕು ಎಂದು ಹೇಳಿದರು.ಸಹಕಾರ ಸಚಿವ ಕೆ.ಎನ್.ರಾಜಣ್ಣನವರ ಸಹಕಾರ ಪಡೆದು ಹೆಚ್ಚು ಅನುದಾನ ತಂದು ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ, ಎಲ್ಲ ರೈತರಿಗೂ ಸಾಲ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.
ಸಂಘದ ಉಪಾಧ್ಯಕ್ಷ ಕರಿದ್ಯಾಮಯ್ಯ , ನಿರ್ದೇಶಕರಾದ ದೇವರಾಜು, ನಾಗರಾಜು, ಗೌರಮ್ಮ, ಶಿವಕುಮಾರ್, ಶಿವಣ್ಣ , ಮೇಲ್ವಿಚಾರಕ ನಿಜಾನಂದಮೂರ್ತಿ, ಸಂಘದ ಕಾರ್ಯದರ್ಶಿ ರಂಗನಾಥ್, ಮುಖಂಡರಾದ ನಲ್ಲೂರು ಸೋಮಣ್ಣ, ತಮ್ಮಯ್ಯ, ನಾಗರಾಜು, ಸೌಭಾಗ್ಯಮ್ಮ, ಪುಟ್ಟರಾಜು ಸೇರಿ ಕಾರ್ಯಕರ್ತರು ಭಾಗವಹಿಸಿದ್ದರು.