ಮಂಚಿ ಪ್ರೌಢಶಾಲೆ: ‘ಕಲಾ ನಿಧಿ -25’ ಪ್ರಶಸ್ತಿ ಪ್ರದಾನ

| Published : Oct 22 2025, 01:03 AM IST

ಸಾರಾಂಶ

ದ.ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮಿತಿ, ದ.ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಇವರು ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ‘ಕಲಾ ನಿಧಿ-25’ ಪ್ರಶಸ್ತಿ ಪ್ರದಾನ ಸಮಾರಂಭ ಸಂಪನ್ನಗೊಂಡಿತು.

ಸಾಮಾಜಿಕ ಮೌಲ್ಯ ಉಳಿಯಲು ಸೃಜನಶೀಲ ಕಲಾವಿದರ ಕೊಡುಗೆ ದೊಡ್ಡದು: ಡಾ.ತುಕಾರಾಮ ಪೂಜಾರಿ

ಬಂಟ್ವಾಳ: ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಂಸ್ಕೃತಿ ಮುಂತಾದ ವಿಷಯಗಳಲ್ಲಿ ತೊಡಗಿಸಿಕೊಂಡು ಸೃಜನಶೀಲವಾಗಿ ಆಲೋಚಿಸಬೇಕು. ಸಾಮಾಜಿಕ ಮೌಲ್ಯ ಇಂದಿಗೂ ಉಳಿದಿರುವುದಾದರೆ ಸೃಜನಶೀಲ ಕಲಾವಿದರ ಕೊಡುಗೆಯಿಂದ ಎಂದು ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

ದ.ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮಿತಿ, ದ.ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಇವರು ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ ‘ಕಲಾ ನಿಧಿ-25’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರ ಮಾತನಾಡಿದರು.

ಶಿಕ್ಷಣ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕ ಜಿ.ಎಸ್. ಶಶಿಧರ್ ಮಾತನಾಡಿ, ಸಾವಿರ ಪದಗಳಲ್ಲಿ ಹೇಳುವುದನ್ನು ಒಂದು ಕಲಾಕೃತಿ ಮೂಲಕ ತಿಳಿಸಬಹುದು. ಭಾವನೆಗಳನ್ನು ಪ್ರಸ್ತುತಪಡಿಸಲು ಒಂದು ಚಿತ್ರ ಬಹುದೊಡ್ಡ ಮಾಧ್ಯಮ. ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ಪ್ರತಿಯೊಬ್ಬರು ಮಗ್ನರಾಗಬೇಕು ಎಂದರು. ಸಮಾರಂಭದಲ್ಲಿ 2023ನೇ ಸಾಲಿನ ಕಲಾನಿಧಿ ಪ್ರಶಸ್ತಿಯನ್ನು ಕಲಾವಿದ ವೆಂಕಿ ಪಲಿಮಾರು, 2024ನೇ ಸಾಲಿನ ಕಲಾನಿಧಿ ಪ್ರಶಸ್ತಿಯನ್ನು ವಿ. ಕೆ. ವಿಟ್ಲ ಹಾಗೂ 2025 ನೇ ಸಾಲಿನ ಕಲಾನಿಧಿ ಪ್ರಶಸ್ತಿಯನ್ನು ರಾಜೇಶ್ವರಿ ಕೆ. ಮಂಗಳೂರು ಇವರಿಗೆ ಪ್ರದಾನ ಮಾಡಲಾಯಿತು.

ಶಾಲಾ ಮುಖ್ಯೋಪಾಧ್ಯಾಯಿನಿ ಸುಶೀಲಾ ವಿಟ್ಲ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಶಂಕರ ರಾವ್ ಮಂಚಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಚಿತ್ರಕಲಾವಿದ ಗಣೇಶ ಸೋಮಯಾಜಿ ಮಾತನಾಡಿ, ಕಾಯಕವೇ ಕೈಲಾಸವೆಂದು ಕಲಾ ಸೇವೆಗೈದ ಮಹನೀಯರಿಗೆ ಈ ಪ್ರಶಸ್ತಿ ಲಭಿಸಿದೆ ಎಂದರು.

ಕಲಾವಿದ, ಶಿಕ್ಷಕ ಅರವಿಂದ ಕುಡ್ಲ ಮಕ್ಕಳಿಗೆ ಓರಿಗಾಮಿ ಕಲೆ ತರಬೇತಿ ನೀಡಿದರು. ಗೋಪಾಡ್ಕರ್ ಕ್ರಿಯೇಟಿವ್ ಆರ್ಟ್ ಬಗ್ಗೆ ಮಾಹಿತಿ ನೀಡಿದರು. ವಿಜೇತ ವಿದ್ಯಾರ್ಥಿಗಳಿಗೆ ವಿಭಿನ್ನ ರೀತಿಯ ಪ್ರಶಸ್ತಿಗಳನ್ನು ನೀಡಲಾಯಿತು. ಪ್ರಶಸ್ತಿ ಪುರಸ್ಕೃತರ ಚಿತ್ರಕಲಾ ಪ್ರದರ್ಶನ ನಡೆಯಿತು.

ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮಿತಿ ಸದಸ್ಯ ಮನೋರಂಜಿನಿ ರಾವ್ ಉಪಸ್ಥಿತರಿದ್ದರು. ಕಲಾವಿದ ಮೋಹನ್ ಕುಮಾರ್ ಪೆರ್ಮುದೆ ಸ್ವಾಗತಿಸಿದರು. ಕಲಾ ನಿಧಿ ಗೋಪಾಡ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲಕೃಷ್ಣ ಶೆಟ್ಟಿ ವಂದಿಸಿದರು. ಕಲಾವಿದ ತಾರಾನಾಥ್ ಕೈರಂಗಳ ನಿರೂಪಿಸಿದರು.