ಬಡಾವಣೆಗಳಿಗೆ ಫಾರಂ 3 ಕೊಡಿಸಲು ಒತ್ತಾಯ

| Published : Jun 28 2024, 12:53 AM IST

ಸಾರಾಂಶ

ಕಟ್ಟಡ ನಿರ್ಮಾಣ ಪರವಾನಗಿ ಕೊಡಿಸಬೇಕು ಎಂದು ಶಿವಜ್ಯೋತಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಗುರುವಾರ ಶಾಸಕ ಎಚ್.ಆರ್. ಗವಿಯಪ್ಪಗೆ ಮನವಿ ಸಲ್ಲಿಸಿದರು.

ಹೊಸಪೇಟೆ: ನಗರದ ಶಿವಜ್ಯೋತಿ ಬಡಾವಣೆ, ಕಿರಣ್‌ಕೃಷ್ಣ ಬಡಾವಣೆಯ ನಿವೇಶನಗಳ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು ಫಾರಂ-3, ಕಟ್ಟಡ ನಿರ್ಮಾಣ ಪರವಾನಗಿ ಕೊಡಿಸಬೇಕು ಎಂದು ಶಿವಜ್ಯೋತಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಗುರುವಾರ ಶಾಸಕ ಎಚ್.ಆರ್. ಗವಿಯಪ್ಪಗೆ ಮನವಿ ಸಲ್ಲಿಸಿದರು.ನಗರದ ಶಿವಜ್ಯೋತಿ ಬಡಾವಣೆ ಮತ್ತು ಕಿರಣ್‌ಕೃಷ್ಣ ಬಡಾವಣೆಗಳಲ್ಲಿ 2000 ನಿವೇಶನ ಇವೆ. ಈ ಜಮೀನಿಗೆ ಈ ಹಿಂದೆ ಬಳ್ಳಾರಿ ಡಿಸಿ 2004ರಿಂದ 2007ರಲ್ಲಿ ಎನ್.ಎ. ಆದೇಶ ಮಾಡಿದ್ದರು. ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರ ಲೇಔಟ್‌ಗಳ ವಸತಿ ವಿನ್ಯಾಸಕ್ಕೆ ಅನುಮೋದನೆ ನೀಡಿತ್ತು. ಲೇಔಟ್ ಮಾಲೀಕರು ಲೇಔಟ್‌ ನಿಗದಿತ ಅವಧಿಯಲ್ಲಿ ಅಭಿವೃದ್ಧಿ ಪಡಿಸದಿದ್ದರೂ ನಗರಾಭಿವೃದ್ಧಿ ಪ್ರಾಧಿಕಾರ ಹೊಸಪೇಟೆ ಮಾರಾಟಕ್ಕೆ ಬಿಡುಗಡೆ ಪ್ರಮಾಣಪತ್ರ ನೀಡಿದ್ದರು. ನಗರಸಭೆ ನೀಡಿದ ಫಾರಂ-3 ಆಧಾರದಲ್ಲಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನಿವೇಶನಗಳು ನೋಂದಣಿ ಆಗಿವೆ. 2020ರವರೆಗೆ ನಗರಸಭೆಯಲ್ಲಿ ಫಾರಂ-3 ನೀಡಿದ್ದಾರೆ. ಉಪನೋಂದಣಿ ಕಚೇರಿಯಲ್ಲೂ ನೋಂದಣಿಯಾಗಿದೆ. ನಗರಸಭೆಯಲ್ಲಿ ಈಗಲೂ ಆಸ್ತಿ ತೆರಿಗೆ ಕಟ್ಟುತ್ತಿದ್ದೇವೆ. 2013ರಿಂದ 2015ರ ಮಧ್ಯ ಅವಧಿಯಲ್ಲಿ ಸುಮಾರು 100-150 ಜನರಿಂದ ಹಂಪಿ ನಗರಾಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು ಮನೆ ಕಟ್ಟಲು ಪರವಾನಗಿ ನೀಡಿದ್ದರು. 2020ರಲ್ಲಿ ನಗರಸಭೆ ಯಾವುದೇ ಸರ್ಕಾರಿ ಆದೇಶ ಇಲ್ಲದಿದ್ದರೂ ಫಾರಂ-3 ನೀಡುವುದು ನಿಲ್ಲಿಸಿದ್ದಾರೆ ಎಂದು ದೂರಿದರು.

ಈ ಕುರಿತು 2022ರ ಫೆ.8ರಂದು ಫಾರಂ-3 ನೀಡಲು ಆದೇಶ ನೀಡುವಂತೆ ವಿಜಯನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆವು. ಜಿಲ್ಲಾಧಿಕಾರಿ ಮಾರ್ಚ್ 2022ರಲ್ಲಿ ಅಧಿಕಾರಿಗಳ ಸಭೆ ಕರೆದು ಸಭೆಯಲ್ಲಿ ಅಭಿವೃದ್ಧಿಪಡಿಸದೇ ಇರುವ ಲೇಔಟ್‌ಗಳ ಫಾರಂ-3 ಮತ್ತು ನೋಂದಣಿ ಮಾಡದಂತೆ ಆದೇಶ ಮಾಡಿ ತಡೆ ಹಿಡಿದಿದ್ದರು. ನಂತರ ಜಿಲ್ಲಾಧಿಕಾರಿ 2023ರ ಮಾರ್ಚ್ 20ರಂದು ಸಮಿತಿ ರಚಿಸಿ ಹೊಸಪೇಟೆ ತಾಲೂಕು ಸಂಕ್ಲಾಪುರ ಗ್ರಾಮದ ಸರ್ವೆ ನಂ.3/4ರಲ್ಲಿ ನಿವೇಶನದಾರರಿಂದ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು ಆರು ತಿಂಗಳೊಳಗೆ ಅಭಿವೃದ್ಧಿ ಪಡಿಸುವಂತೆ ಸೂಚಿಸಿದ್ದರು. ಜತೆಗೆ 2024ರ ಜೂ.21ರಂದು ಅದೇ ಸಮಿತಿಗೆ ಪುನಃ ಒಂದು ತಿಂಗಳೊಳಗೆ ಲೇಔಟ್ ಅಭಿವೃದ್ಧಿ ಕೈಗೊಂಡು ವರದಿ ಸಲ್ಲಿಸಲು, ಆರು ತಿಂಗಳೊಳಗೆ ಲೇಔಟ್ ಅಭಿವೃದ್ಧಿ ಮಾಡದೇ ಇದ್ದಲ್ಲಿ ಭೂ ಪರಿವರ್ತನಾ ಆದೇಶ ತಾನಾಗಿಯೇ ರದ್ದಾಗುತ್ತದೆ ಎಂದು ಆದೇಶಿಸಿದ್ದರು. ಆದರೂ ಈ ಸಮಿತಿ ಜಿಲ್ಲಾಧಿಕಾರಿ ಆದೇಶ ಪಾಲಿಸಿಲ್ಲ ಎಂದು ದೂರಿದರು.

ಶಿವಜ್ಯೋತಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಯು.ಆಂಜನೇಯಲು, ಮುಖಂಡರಾದ ಎಚ್‌.ತಿಪ್ಪೇಸ್ವಾಮಿ, ನಾರಾಯಣರಾವ್‌, ಕನಕೇರಿ, ಎಸ್‌.ಎಂ. ಬಾಷಾ ಇದ್ದರು.