ಮಂಡ್ಯ ನಗರ ಪ್ರವೇಶ ನಿರ್ಬಂಧ: ಅಪೆ ಆಟೋ ಚಾಲಕರು, ಮಾಲೀಕರಿಂದ ಪ್ರತಿಭಟನೆ

| Published : Feb 07 2024, 01:47 AM IST

ಮಂಡ್ಯ ನಗರ ಪ್ರವೇಶ ನಿರ್ಬಂಧ: ಅಪೆ ಆಟೋ ಚಾಲಕರು, ಮಾಲೀಕರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ನಗರ ಪ್ರದೇಶದ ಸುತ್ತಳತೆ ಕೇವಲ ಮೂರು ಕಿಲೋ ಮೀಟರ್ ಇದೆ, ಪ್ರಯಾಣಿಕರ ಆಟೋಗೆ ೧೨ ಕಿ.ಮೀ. ಅಪೆ ಆಟೋದವರಿಗೆ ಎಂಟು ಕಿ.ಮೀ ಸಂಚರಿಸಲು ಪರ್ಮಿಟ್ ನೀಡಲಾಗಿದೆ, ಹಳ್ಳಿಗಳಿಂದ ನಗರಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಅಪೆ ಆಟೋಗಳು ಬರುತ್ತಿವೆಯೇ ಹೊರತು ನಗರದಲ್ಲಿ ಬಾಡಿಗೆಗೆ ಸಂಚರಿಸುತ್ತಿಲ್ಲ. ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಆಟೋಗಳು ಪ್ರಯಾಣಿಕರು, ಶಾಲಾ ಮಕ್ಕಳು ಹಾಗೂ ಸರಕು ತುಂಬಿಕೊಂಡು ಹಳ್ಳಿಗಳಿಗೆ ಬರುತ್ತಾರೆ.

ಕನ್ನಡಪ್ರಭ ವಾರ್ತೆ ಮಂಡ್ಯಅಪೆ ಆಟೋಗಳಿಗೆ ಮಂಡ್ಯ ನಗರ ಪ್ರವೇಶ ನಿರ್ಬಂಧ ಮಾಡದೆ ಎಲ್ಲಾ ಮಾದರಿ ಆಟೋದವರಿಗೆ ಒಂದೇ ರೀತಿಯ ನ್ಯಾಯ ದೊರಕಿಸಿಕೊಡಬೇಕು ಎಂದು ಅಪೆ ಆಟೋ ಚಾಲಕರು ಮತ್ತು ಮಾಲೀಕರು ಮಂಗಳವಾರ ಪ್ರತಿಭಟನೆ ನಡೆಸಿದರು.

ಜಯ ಕರ್ನಾಟಕ ಸಂಘಟನೆ ಆಶ್ರಯದಲ್ಲಿ ನಗರದ ಮೈಷುಗರ್ ವೃತದಿಂದ ಅಪೆ ಪ್ರಯಾಣಿಕರ ಆಟೋ ಚಾಲಕರು ಮೆರವಣಿಗೆ ಹೊರಟು ನೀವು ಬದುಕಿ ನಮ್ಮನ್ನು ಬದುಕಲು ಬಿಡಿ ಎಂಬ ಘೋಷಣೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಯೋಗಣ್ಣ ಮಾತನಾಡಿ, ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸಿದ ನಂತರ ಆಟೋ ನಂಬಿ ಬದುಕುತ್ತಿದ್ದ ಚಾಲಕರು ಮತ್ತು ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದಲ್ಲಿ ಸಂಚರಿಸುವ ಪ್ರಯಾಣಿಕರ ಆಟೋದವರು ಅಪೆ ಆಟೋದವರು ನಗರ ಪ್ರದೇಶದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಸಂಚಾರ ಮಾಡುತ್ತಾರೆ ಎಂದು ತಪ್ಪಾಗಿ ಭಾವಿಸಿದ್ದಾರೆ, ಇದು ಸರಿಯಲ್ಲ. ಅಪೆ ಆಟೋಗಳು ಗ್ರಾಮೀಣ ಪ್ರದೇಶದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಮಂಡ್ಯದ ಬಸ್ ನಿಲ್ದಾಣ, ರೈಲು ನಿಲ್ದಾಣ ಹತ್ತಿರ ಇಳಿಸಿ ಮತ್ತೆ ಗ್ರಾಮೀಣ ಪ್ರದೇಶಕ್ಕೆ ಖಾಲಿ ಹೋಗುತ್ತಿವೆ ಎಂದರು.

ಮಂಡ್ಯ ನಗರ ಪ್ರದೇಶದ ಸುತ್ತಳತೆ ಕೇವಲ ಮೂರು ಕಿಲೋ ಮೀಟರ್ ಇದೆ, ಪ್ರಯಾಣಿಕರ ಆಟೋಗೆ ೧೨ ಕಿ.ಮೀ. ಆಫೆ ಆಟೋದವರಿಗೆ ಎಂಟು ಕಿ.ಮೀ ಸಂಚರಿಸಲು ಪರ್ಮಿಟ್ ನೀಡಲಾಗಿದೆ, ಹಳ್ಳಿಗಳಿಂದ ನಗರಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಅಪೆ ಆಟೋಗಳು ಬರುತ್ತಿವೆಯೇ ಹೊರತು ನಗರದಲ್ಲಿ ಬಾಡಿಗೆಗೆ ಸಂಚರಿಸುತ್ತಿಲ್ಲ. ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಆಟೋಗಳು ಪ್ರಯಾಣಿಕರು, ಶಾಲಾ ಮಕ್ಕಳು ಹಾಗೂ ಸರಕು ತುಂಬಿಕೊಂಡು ಹಳ್ಳಿಗಳಿಗೆ ಬರುತ್ತಾರೆ. ಮತ್ತೆ ಅಲ್ಲಿಂದ ಪ್ರಯಾಣಿಕರನ್ನು ತುಂಬಿಕೊಂಡು ನಗರಕ್ಕೆ ಬರುತ್ತಾರೆ ನಾವು ಕಂಡರೂ ಸಹ ಪ್ರಶ್ನಿಸಿಲ್ಲ ಎಂದರು.

ಎಲ್ಲರೂ ಸಹ ಸಾಲ ಮಾಡಿ ಆಟೋ ಖರೀದಿ ಮಾಡಿರುತ್ತಾರೆ. ಯಾರ ಆದಾಯಕ್ಕೂ ಕತ್ತರಿ ಬೀಳಬಾರದು ಎಂಬ ಮನೋಭಾವ ನಮ್ಮದು. ನಾವೆಲ್ಲರೂ ಒಗ್ಗೂಡಿ ಸಹಜೀವನ ನಡೆಸಬೇಕು, ನಮ್ಮ ಜೀವನಕ್ಕೆ ನಾವೇ ಕಲ್ಲು ಹಾಕಿಕೊಳ್ಳಬಾರದು, ಈಗಾಗಲೇ ಸಾಲ ತೀರಿಸಲು ಸಾಧ್ಯವಾಗದೆ ಅಪೆ ಆಟೋದ ಏಳು ಚಾಲಕರು ನೇಣಿಗೆ ಕೊರಳೊಡ್ಡಿದ್ದಾರೆ, ನಮ್ಮ ಪರಿಸ್ಥಿತಿಯನ್ನು ಕೂಡ ಅರಿತುಕೊಂಡು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ನಗರ ಪ್ರದೇಶದಲ್ಲಿ ಅಪೆ ಆಟೋ ಗಳಿಗೆ ದಂಡ ಹಾಕುತ್ತಿರುವುದನ್ನು ನಿಲ್ಲಿಸಬೇಕು, ಎಲ್ಲಾ ಮಾದರಿ ಆಟೋಗಳಿಗೆ ಒಂದೇ ರೀತಿಯ ನ್ಯಾಯ ದೊರಕಿಸಿಕೊಡಿ ಇಲ್ಲದಿದ್ದರೆ ದಯಾಮರಣ ಕಲ್ಪಿಸಿ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಮುಖಂಡ ವಿಶ್ವನಾಥ್, ಆಟೋ ಚಾಲಕರ ಮುಖಂಡರಾದ ಪುನೀತ್, ಕಾಂತರಾಜ್, ಮಧುಕುಮಾರ್ ಉಮ್ಮಡಹಳ್ಳಿ, ಕಾಶಿ ಹೆಗಡೆ, ವೆಂಕಟೇಶ್, ಚೇತನ್, ಪ್ರದೀಪ್, ಅಭಿ ನೇತೃತ್ವ ವಹಿಸಿದ್ದರು.