ಜೆಡಿಎಸ್‌ಗೆ ಕಗ್ಗಂಟಾಗಿರುವ ಮಂಡ್ಯ ಕ್ಷೇತ್ರ

| Published : Feb 25 2024, 01:51 AM IST

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ. ಸುಲಭವಾಗಿ ಸಿಗಬಹುದಾದ ತುತ್ತೆಂದು ಭಾವಿಸಿದ್ದ ದಳಪತಿಗಳಿಗೆ ಮುಂದೆ ಕಬ್ಬಿಣದ ಕಡಲೆಯಾಗಬಹುದೆಂದು ಅವರು ನಿರೀಕ್ಷಿಸಿರಲಿಲ್ಲ. ಬಿಜೆಪಿ ಜೊತೆಗೆ ಮಾಡಿಕೊಂಡಿರುವ ಚುನಾವಣಾ ಮೈತ್ರಿಯಿಂದ ಸೀಟು ಹಂಚಿಕೆ ಸಮಯದಲ್ಲಿ ಮಂಡ್ಯ ಕ್ಷೇತ್ರಕ್ಕಾಗಿ ಕಮಲ ನಾಯಕರೆದುರು ಹರಸಾಹಸ ನಡೆಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ. ಸುಲಭವಾಗಿ ಸಿಗಬಹುದಾದ ತುತ್ತೆಂದು ಭಾವಿಸಿದ್ದ ದಳಪತಿಗಳಿಗೆ ಮುಂದೆ ಕಬ್ಬಿಣದ ಕಡಲೆಯಾಗಬಹುದೆಂದು ಅವರು ನಿರೀಕ್ಷಿಸಿರಲಿಲ್ಲ. ಬಿಜೆಪಿ ಜೊತೆಗೆ ಮಾಡಿಕೊಂಡಿರುವ ಚುನಾವಣಾ ಮೈತ್ರಿಯಿಂದ ಸೀಟು ಹಂಚಿಕೆ ಸಮಯದಲ್ಲಿ ಮಂಡ್ಯ ಕ್ಷೇತ್ರಕ್ಕಾಗಿ ಕಮಲ ನಾಯಕರೆದುರು ಹರಸಾಹಸ ನಡೆಸುವಂತಾಗಿದೆ.

ಬಿಜೆಪಿ ಪ್ರವರ್ಧಮಾನಕ್ಕೆ:

೨೦೧೮ರ ಚುನಾವಣೆಗೂ ಮುಂಚೆ ಬಿಜೆಪಿ ಮಂಡ್ಯ ನೆಲದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿತ್ತು. ಐದು ವರ್ಷಗಳಲ್ಲಿ ದಶಕಗಳಿಂದ ಪ್ರಾಬಲ್ಯ ಮೆರೆಯುತ್ತಾ ಬಂದಿದ್ದ ಜೆಡಿಎಸ್‌ನ್ನು ಉಸಿರುಗಟ್ಟಿಸುವ ವಾತಾವರಣಕ್ಕೆ ತಂದು ನಿಲ್ಲಿಸಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಒಂದೆಡೆ ಕಾಂಗ್ರೆಸ್ ೨೦೨೩ರ ಚುನಾವಣೆಯಲ್ಲಿ ಜೆಡಿಎಸ್‌ಗೆ ಮರ್ಮಾಘಾತ ನೀಡಿದ್ದರೆ, ಮತ್ತೊಂದೆಡೆ ಮೈತ್ರಿ ಪರಿಣಾಮದಿಂದ ದಳಪತಿಗಳು ಕಮಲ ನಾಯಕರ ಕೈಗೊಂಬೆಯಾಗಿ ಮಾಡಿಕೊಂಡಿರುವುದು ಜೆಡಿಎಸ್‌ನ ಶೋಚನೀಯ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

ಕಾಂಗ್ರೆಸ್-ಜೆಡಿಎಸ್ ನಡುವಿನ ಜಿದ್ದಾಜಿದ್ದಿನ ಕ್ಷೇತ್ರವಾಗಿದ್ದ ಮಂಡ್ಯ ನೆಲದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರಲಾರಂಭಿಸಿದೆ. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಗೆಲುವಿಗೆ ನೀಡಿದ ಸಹಕಾರ, ಕೆ.ಆರ್.ಪೇಟೆ ಉಪ ಚುನಾವಣೆ ಗೆಲುವು, ೨೦೨೪ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆಲುವಿಗೆ ಬಿಜೆಪಿ ಅಡ್ಡಗಾಲಾಗಿದ್ದು ಇವೆಲ್ಲವೂ ಬಿಜೆಪಿ ಚುನಾವಣೆಯಿಂದ ಚುನಾವಣೆಗೆ ಜಿಲ್ಲೆಯೊಳಗೆ ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ತೋರಿಸುತ್ತಿರುವ ದಿಕ್ಸೂಚಿಯಾಗಿದೆ. ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳಕ್ಕೆ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದ್ದನ್ನು ಹೊರತುಪಡಿಸಿದರೆ ೨೦೨೪ರ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದಿದ್ದೇ ದೊಡ್ಡ ಸಾಧನೆಯಾಗಿದೆ.

ಜೆಡಿಎಸ್‌ಗೆ ಸುಮಲತಾ ಕಂಟಕ:

ಮಂಡ್ಯ ಜಿಲ್ಲಾ ರಾಜಕಾರಣಕ್ಕೆ ಸುಮಲತಾ ಅಂಬರೀಶ್ ಪ್ರವೇಶವಾದ ನಂತರದಲ್ಲಿ ಜೆಡಿಎಸ್‌ಗೆ ದೊಡ್ಡ ಕಂಟಕವಾಗಿ ಪರಿಣಮಿಸಿದ್ದಾರೆ. ಸಂಸತ್ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದರೂ ಸುಮಲತಾ ವಾಕ್ಚಾತುರ್ಯ, ಎದುರಾಳಿಗಳಿಗೆ ಸಮರ್ಥ ಉತ್ತರ ನೀಡುವ ಆತ್ಮಸ್ಥೈರ್ಯ, ವಿವಾದಗಳಿಲ್ಲದೆ ಕಾರ್ಯನಿರ್ವಹಿಸಿದ ರೀತಿ ಇವೆಲ್ಲವೂ ಸಹಜವಾಗಿಯೇ ಎಲ್ಲರಲ್ಲೂ ಬೆರಗು ಹುಟ್ಟಿಸಿದ್ದವು. ಸುಮಲತಾ ಕಾರ್ಯಶೈಲಿ, ರಾಜಕೀಯ ಪ್ರೌಢಿಮೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ ಬಿಜೆಪಿ, ಜಿಲ್ಲೆಯೊಳಗೆ ಜೆಡಿಎಸ್ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳುತ್ತಾ ಬರುತ್ತಿದೆ.

ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗುವುದಿಲ್ಲ. ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ ಎಂದು ಸುಮಲತಾ ಹೇಳುತ್ತಲೇ ಜೆಡಿಎಸ್‌ಗೆ ಠಕ್ಕರ್ ನೀಡುತ್ತಲೇ ಬರುತ್ತಿದ್ದಾರೆ. ಬಿಜೆಪಿ ಕೂಡ ಸುಮಲತಾರನ್ನು ಮುಂದಿಟ್ಟುಕೊಂಡೇ ಮಂಡ್ಯ ಕ್ಷೇತ್ರವನ್ನು ದಳಕ್ಕೆ ಬಿಟ್ಟುಕೊಡದೆ ಸತಾಯಿಸುತ್ತಿದೆ. ಮಂಡ್ಯ ಕ್ಷೇತ್ರಕ್ಕಾಗಿ ಸುಮಲತಾ ಹಿಡಿದಿರುವ ಪಟ್ಟು ದಳಪತಿಗಳಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ.

ಜೆಡಿಎಸ್‌ನೊಳಗೆ ಆತಂಕ:

ಮಂಡ್ಯ ಕ್ಷೇತ್ರ ದಳಪತಿಗಳಿಗೆ ಸುಲಭ ತುತ್ತಾಗದಿರುವ ಸಮಯದಲ್ಲೇ ದೇವೇಗೌಡರಾದಿಯಾಗಿ ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರಿಗೆ ಸ್ಥಳೀಯ ಜೆಡಿಎಸ್ ನಾಯಕರು ಸ್ಪರ್ಧೆಗೆ ಆಹ್ವಾನ ನೀಡಿ ಬಂದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಚುನಾವಣಾ ಕಾರ್ಯಚಟುವಟಿಕೆಗಳನ್ನು ಸದ್ದಿಲ್ಲದೆ ಚುರುಕುಗೊಳಿಸುತ್ತಾ ಮುನ್ನಡೆದಿದ್ದಾರೆ. ಇದೀಗ ಮಂಡ್ಯ ಕ್ಷೇತ್ರ ಬಿಜೆಪಿ ಪಾಲಾಗಬಹುದೆಂಬ ಮಾತುಗಳು ಮುನ್ನೆಲೆಗೆ ಬರಲಾರಂಭಿಸಿದ್ದು ಇದರಿಂದ ಜೆಡಿಎಸ್‌ನೊಳಗೆ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಮಂಡ್ಯ ಜಿಲ್ಲೆಯೊಳಗೆ ನೆಲಕಚ್ಚಿರುವ ಜೆಡಿಎಸ್‌ಗೆ ಮತ್ತೆ ಪುನಶ್ಚೇತನ ನೀಡಬೇಕಾದರೆ ಮಂಡ್ಯ ಕ್ಷೇತ್ರವನ್ನು ಪಡೆಯುವುದು ಜೆಡಿಎಸ್‌ಗೆ ಅನಿವಾರ್ಯವಾಗಿದೆ. ಆದರೆ, ಬಿಜೆಪಿ ಜೊತೆಗಿನ ಮೈತ್ರಿ ಜೆಡಿಎಸ್ ಮುಖಂಡರು-ಕಾರ್ಯಕರ್ತರಿಗೇ ಇಷ್ಟವಿಲ್ಲದಿರುವಂತೆ ಕಂಡುಬರುತ್ತಿದೆ. ಬಲವಂತದ ಮೈತ್ರಿ ನಡುವೆಯೂ ಮಂಡ್ಯ ಕ್ಷೇತ್ರಕ್ಕಾಗಿ ಬಿಜೆಪಿಯವರು ಜೆಡಿಎಸ್‌ನವರನ್ನು ಗೊಂಬೆಯಂತೆ ಆಡಿಸುತ್ತಿರುವುದರ ಬಗ್ಗೆಯೂ ಜೆಡಿಎಸ್ ಪಾಳಯದೊಳಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಇವೆಲ್ಲದರ ನಡುವೆ ದಳಪತಿಗಳು ಮಂಡ್ಯ ಕ್ಷೇತ್ರವನ್ನು ಪಡೆದುಕೊಳ್ಳುವರೋ ಅಥವಾ ಬಿಜೆಪಿಗೇ ಬಿಟ್ಟುಕೊಡುವರೋ ಎನ್ನುವುದನ್ನು ಕಾದುನೋಡಬೇಕಿದೆ. ಇಂದು ಬೆಂಗಳೂರಿನ ಸುಮಲತಾ ನಿವಾಸದಲ್ಲಿ ಮಹತ್ವದ ಸಭೆ-೮ ವಿಧಾನಸಭಾ ಕ್ಷೇತ್ರದ ಮುಖಂಡರು, ಬೆಂಬಲಿಗರೊಟ್ಟಿಗೆ ಸಮಾಲೋಚನೆಮಂಡ್ಯ: ಲೋಕಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಮೂಲಕ ಮಂಡ್ಯ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿರುವಂತೆ ಕಂಡುಬರುತ್ತಿರುವ ಸಂಸದೆ ಸುಮಲತಾ ಅಂಬರೀಶ್ ಭಾನುವಾರ (ಫೆ.೨೫) ಸಂಜೆ ೪ ಗಂಟೆಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಹತ್ವದ ಸಭೆ ಕರೆದಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಿಂದಲೂ ಮುಖಂಡರು ಹಾಗೂ ಬೆಎಂಬಲಿಗರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಗಳಿದ್ದು, ಚುನಾವಣೆ ಸಿದ್ಧತೆಗಳ ಕುರಿತು ಸುದೀರ್ಘ ಚರ್ಚೆ ನಡೆಸುವ ಸಂಭವವಿದೆ ಎನ್ನಲಾಗಿದೆ.

ಪಕ್ಷೇತರ ಸಂಸದೆಯಾಗಿಯೇ ಉಳಿದುಕೊಂಡಿರುವ ಸುಮಲತಾ ಅವರು ಇನ್ನೂ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿಲ್ಲ. ಮಂಡ್ಯ ಕ್ಷೇತ್ರದ ಟಿಕೆಟ್ ಖಚಿತಪಡಿಸಿಕೊಂಡೇ ಪಕ್ಷ ಸೇರುವರೋ ಅಥವಾ ಟಿಕೆಟ್ ಕೈತಪ್ಪಿದಲ್ಲಿ ಪಕ್ಷೇತರವಾಗಿ ಕಣಕ್ಕಿಳಿಯುವ ನಿರ್ಧಾರ ಮಾಡುವ ಬಗ್ಗೆ ಮುಖಂಡರ ಅಭಿಪ್ರಾಯ ಸಂಗ್ರಹಿಸುವ ಸಾಧ್ಯತೆಗಳಿವೆ. ಜೊತೆಗೆ ಸ್ಪರ್ಧೆಯಿಂದ ಉಂಟಾಗಬಹುದಾದ ಸಾಧಕ-ಬಾಧಕಗಳ ಬಗ್ಗೆಯೂ ಸಮಾಲೋಚನೆ ನಡೆಸಬಹುದೆಂದು ಹೇಳಲಾಗಿದೆ.

ಸುಮಲತಾ ತಮ್ಮ ಸ್ಪರ್ಧೆಯ ಬಗ್ಗೆ ಗೌಪ್ಯತೆಯನ್ನು ಕಾಯ್ದುಕೊಂಡೇ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಅವರ ಮಾತುಗಳಲ್ಲಿ ಮಂಡ್ಯವನ್ನು ನಾನು ಬಿಟ್ಟು ಹೋಗುವುದಿಲ್ಲ, ನನ್ನ ಸ್ಪರ್ಧೆ ಖಚಿತ ಎನ್ನುತ್ತಲೇ ನನಗಾಗಿ ನಾನು ಮಂಡ್ಯವನ್ನು ಕೇಳುತ್ತಿಲ್ಲ ಎಂಬ ಗೂಢಾರ್ಥವನ್ನಿಡುತ್ತಿದ್ದಾರೆ. ಈ ಮಾತಿನ ಹಿಂದಿರುವ ರಾಜಕೀಯ ತಂತ್ರಗಾರಿಕೆ ಸುಲಭಕ್ಕೆ ಅರ್ಥವಾಗುತ್ತಿಲ್ಲ. ಒಟ್ಟಾರೆ ಸುಮಲತಾ ಕರೆದಿರುವ ಸಭೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.