ಏ.26ರ ಮತದಾನಕ್ಕೆ ಮಂಡ್ಯ ಜಿಲ್ಲಾಡಳಿತ ಸಂಪೂರ್ಣ ಸಜ್ಜು: ಜಿಲ್ಲಾಧಿಕಾರಿ ಡಾ.ಕುಮಾರ

| Published : Apr 25 2024, 01:01 AM IST

ಏ.26ರ ಮತದಾನಕ್ಕೆ ಮಂಡ್ಯ ಜಿಲ್ಲಾಡಳಿತ ಸಂಪೂರ್ಣ ಸಜ್ಜು: ಜಿಲ್ಲಾಧಿಕಾರಿ ಡಾ.ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೧೭,೭೯,೨೪೩ ಮಂದಿ ಮತದಾರರಿದ್ದು, ಈ ಪೈಕಿ ೮,೭೬,೧೧೨ ಮಂದಿ ಪುರುಷರು, ೯,೦೨,೦೬೩ ಮಂದಿ ಮಹಿಳೆಯರು ಹಾಗೂ ೧೬೮ ಇತರೆ ಮತದಾರರಿದ್ದಾರೆ. ಜಿಲ್ಲೆಯ ೧೮೨೪ ಮತಗಟ್ಟೆಗಳಿಗೆ ಆರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಿಆರ್‌ಪಿಎಫ್ ೭೨ ಜನರ ತಂಡ, ಎಸ್‌ಎಪಿ ಗುಜರಾತ್ ೨೧೬ ಜನರ ತಂಡ, ಒಟ್ಟು ನಾಲ್ಕು ಕಂಪನಿಗಳು ಭದ್ರತೆಯಲ್ಲಿ ತೊಡಗಿಸಿಕೊಳ್ಳಲಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಏ. ೨೬ರಂದು ನಡೆಯಲಿರುವ ಲೋಕಸಭಾ ಚುನಾವಣಾ ಮತದಾನಕ್ಕೆ ಜಿಲ್ಲಾಡಳಿತ ಸರ್ವ ರೀತಿಯಲ್ಲೂ ಸಜ್ಜಾಗಿದೆ ಎಂದು ಜಿಲ್ಲಾಕಾರಿ ಡಾ.ಕುಮಾರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೧೭,೭೯,೨೪೩ ಮಂದಿ ಮತದಾರರಿದ್ದು, ಈ ಪೈಕಿ ೮,೭೬,೧೧೨ ಮಂದಿ ಪುರುಷರು, ೯,೦೨,೦೬೩ ಮಂದಿ ಮಹಿಳೆಯರು ಹಾಗೂ ೧೬೮ ಇತರೆ ಮತದಾರರಿದ್ದಾರೆ ಎಂದು ಹೇಳಿದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೬೯೩ ಕ್ರಿಟಿಕಲ್ ಮತಕೇಂದ್ರಗಳು ಹಾಗೂ ೩೩ ದುರ್ಬಲ ಮತಕೇಂದ್ರಗಳನ್ನು ಗುರುತಿಸಲಾಗಿದೆ. ೪೦ ಪಿಂಕ್ ಮತಗಟ್ಟೆಗಳು, ೮ ವಿಕಲಚೇತನರು, ೧೬ ಸಾಂಪ್ರದಾಯಿಕ, ೧೬ ಯುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.

ಮೊಬೈಲ್ ನಿಷೇಧ:

ಮತಗಟ್ಟೆಯ ೧೦೦ ಮೀಟರ್ ಅಂತರದೊಳಗೆ ಮೊಬೈಲ್ ಬಳಕೆ ನಿಷೇಧವಿದೆ. ಎಲ್ಲಾ ರೀತಿಯ ಪ್ರಚಾರ ನಿರ್ಬಂಧಿಸಲಾಗಿದೆ. ೨೦೦ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ಟೆಂಟ್‌ಗಳನ್ನು ತೆರೆಯುವಂತಿಲ್ಲ. ಪ್ರತೀ ಮತಗಟ್ಟೆಗೆ ಒಬ್ಬ ಪೋಲಿಂಗ್ ಏಜೆಂಟ್, ಇಬ್ಬರು ರಿಲೀಫ್ ಏಜೆಂಟರನ್ನು ನೇಮಕ ಮಾಡಲು ಅವಕಾಶವಿರುತ್ತದೆ ಎಂದರು.

ಜಿಲ್ಲೆಯ ೧೮೨೪ ಮತಗಟ್ಟೆಗಳಿಗೆ ಆರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಿಆರ್‌ಪಿಎಫ್ ೭೨ ಜನರ ತಂಡ, ಎಸ್‌ಎಪಿ ಗುಜರಾತ್ ೨೧೬ ಜನರ ತಂಡ, ಒಟ್ಟು ನಾಲ್ಕು ಕಂಪನಿಗಳು ಭದ್ರತೆಯಲ್ಲಿ ತೊಡಗಿಸಿಕೊಳ್ಳಲಿವೆ ಎಂದು ತಿಳಿಸಿದರು.

ವಿಕಲಚೇತನರು, ಹಿರಿಯ ನಾಗರೀಕರು ಸುಗಮವಾಗಿ ಮತ ಚಲಾಯಿಸಲು ಪ್ರತಿ ಮತಗಟ್ಟೆಯಲ್ಲೂ ಇಳಿಜಾರು ವ್ಯವಸ್ಥೆ, ವ್ಲೀಲ್‌ಚೇರ್, ದೃಷ್ಠಿದೋಷವುಳ್ಳವರಿಗೆ ಮತದಾನ ಮಾಡಲು ಅವಶ್ಯವಾಗುವಂತೆ ಬ್ರೈಲ್ ಲಿಪಿಯುಳ್ಳ ವಿದ್ಯುನ್ಮಾನ ಮತಯಂತ್ರ ವ್ಯವಸ್ಥೆ ಹಾಗೂ ಡಮ್ಮಿ ಬ್ರೈಲ್ ಬ್ಯಾಲೆಟ್ ಪೇಪರ್ ವ್ಯವಸ್ಥೆ ಕಲ್ಪಿಸಲಾಗಿದೆ. ಮತದಾರರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ವೇತನ ಸಹಿತ ರಜಾದಿನ:

ಏ.೨೬ರ ಸಾರ್ವತ್ರಿಕ ಚುನಾವಣಾ ದಿನದಂದು ಸರ್ಕಾರಿ, ಅರೆ ಸರ್ಕಾರಿ ಸೇರಿದಂತೆ ಎಲ್ಲ ವ್ಯವಹಾರಿಕ ಸಂಸ್ಥೆಗಳು, ಔಧ್ಯಮಿಕ ಸಂಸ್ಥೆಗಳು ಮತ್ತು ಇತರೆ ಸಂಸ್ಥೆಏಗಲಲ್ಲಿ ಖಾಯಂ ಆಗಿ ಅಥವಾ ದಿನಗೂಲಿಯಾಗಿ ಕೆಲಸ ಮಾಡುವ ಎಲ್ಲರಿಗೂ ವೇತನ ಸಹಿತ ರಜಾದಿನ ನೀಡಬೇಕು. ಉಲ್ಲಂಘಿಸಿದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

೮ ವಿಧಾನಸಭಾ ಕ್ಷೇತ್ರಗಳಲ್ಲೂ ೨೫ ಚೆಕ್‌ಪೋಸ್ಟ್‌ಗಳಲ್ಲಿ ಸ್ಪಷ್ಟ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಅಕ್ರಮ ಮದ್ಯ ಹಾಗೂ ನಗದನ್ನು ಜಪ್ತಿಗೊಳಿಸಲಾಗಿದ್ದು, ಒಟ್ಟು ೧.೦೬,೦೮,೯೯೦ ಕೋಟಿ ರೂ. ನಗದು, ೧,೫೦,೨೭,೮೭೧.೩೯ ರೂ. ಮೌಲ್ಯದ ೫೨,೮೬೧,೬೨ ಲೀಟರ್ ಮದ್ಯಘಿ, ೨,೧೭,೦೪೦ ರೂ. ಮೌಲ್ಯದ ೫.೭೦೪ ಕೆ.ಜಿ ಡ್ರಗ್, ೪೦ ಸಾವಿರ ರೂ. ಮೌಲ್ಯದ ೨ ಸಾವಿರ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಚುನಾವಣಾ ಸಂಬಂಧ ಈವರೆಗೆ ೬೫ ದೂರುಗಳು ದಾಖಲಾಗಿದ್ದು, ಇದರಲ್ಲಿ ೫೫ ಪ್ರಕರಣಗಳನ್ನು ಬಗೆಹರಿಸಲಾಗಿದೆ. ೧೧ ಪ್ರಕರಣಗಳು ಬಾಕಿ ಉಳಿದಿವೆ. ಚುನಾವಣಾ ಸಂಬಂಧಿತ ೨೦೪ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಮಂಡ್ಯ ಲೋಕಸಭಾ ವ್ಯಾಪ್ತಿಯ ೧೫,೬೦,೪೫೭ ಮಂದಿ ಮತದಾರರಿಗೆ ವೋಟರ್ ಸ್ಲಿಪ್‌ಗಳನ್ನು ವಿತರಿಸಲಾಗಿದೆ. ಮತದಾರರು ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಲು ಸಿ-ವಿಜಿಲ್ ಆ್ಯಪ್ ಮೂಲಕ ದೂರನ್ನೂ ದಾಖಲಿಸಬಹುದು ಎಂದು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಎಲ್ಲ ಮತದಾರರಿಗೆ ಮತದಾನದ ದಿನಾಂಕ, ವೇಳಾಪಟ್ಟಿ ನೀಡಿ ಮತಗಟ್ಟೆಗೆ ಆಗಮಿಸಿ ಮತದಾರರು ಚಲಾಯಿಸಲು ಪ್ರಜಾಪ್ರಭುತ್ವದ ಮತದಾನದ ಹಬ್ಬಕ್ಕೆ ಆಮಂತ್ರಣ ಎಂಬ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಪ್ರತೀ ಕುಟುಂಬಕ್ಕೆ ವಿತರಿಸಲಾಗಿದೆ. ಮತದಾನ ಕಾರ‌್ಯಕ್ಕಾಗಿ ೮೩೯೬ ಮಂದಿ ಅಧಿಕಾರಿ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದರು.

ಶುಷ್ಕ ದಿನ ಘೋಷಣೆ:

ಏ. ೨೪ರ ಸಂಜೆ ೬ ಗಂಟೆಯಿಂದ ೨೭ರ ಬೆಳಗ್ಗೆ ೬ ಗಂಟೆವರೆಗೆ ಜಿಲ್ಲಾಧ್ಯಂತ ಹಾಗೂ ಮತ ಎಣಿಕೆ ಹಿನ್ನೆಲೆಯಲ್ಲಿ ಜೂ. ೩ರ ಸಂಜೆ ೫ ಗಂಟೆಯಿಂದ ಜೂ. ೫ರ ಬೆಳಗ್ಗೆ ೬ ಗಂಟೆಯವರೆಗೆ ಮಂಡ್ಯ ನಗರ ವ್ಯಾಪ್ತಿ ಹಾಗೂ ನಗರ ವ್ಯಾಪ್ತಿಯ ೫ ಕಿ.ಮೀ. ಸುತ್ತಳತೆ ವ್ಯಾಪ್ತಿಯಲ್ಲಿ ಶುಷ್ಕ ದಿನ ಘೋಷಿಸಲಾಗಿದೆ ಎಂದು ತಿಳಿಸಿದರು.

ಮತದಾನದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಯನ್ನು ಕರೆದೊಯ್ಯಲು ೨೭೪ ಬಸ್ಸುಗಳು, ೨೭ ಮಿನಿ ಬಸ್, ೩೪ ಮ್ಯಾಕ್ಸಿಕ್ಯಾಬ್, ೩೮ ಜೀಪ್ ಸೇರಿದಂತೆ ಒಟ್ಟು ೩೭೩ ವಾಹನಗಳನ್ನು ಪಡೆಯಲಾಗಿದೆ. ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಏ.೨೫ರ ರಾತ್ರಿ ಮತ್ತು ೨೬ರ ಬೆಳಗ್ಗೆ ಮಧ್ಯಾಹ್ನ ಹಾಗೂ ಸಂಜೆಯ ಊಟೋಪಚಾರದ ವ್ಯವಸ್ಥೆಯನ್ನು ಪೂರೈಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಇತರೆ ಅಧಿಕಾರಿಗಳು ಗೋಷ್ಠಿಯಲ್ಲಿದ್ದರು.