ದೇಶ ರಕ್ಷಣೆ ಮಾಡುವ ಸೈನಿಕರು, ಮಕ್ಕಳು ಬಳಸುವ ಹಾಲಿನ ಪುಡಿ ಕಲಬೆರಕೆ ಮಾಡಿ ನಂದಿನಿ ಹೆಸರಿನಲ್ಲಿ ವಿಷ ಉಣಿಸುತ್ತಿರುವ ಮನ್ಮುಲ್ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು.
ಕನ್ನಡಪ್ರಭ ವಾರ್ತೆ ಮದ್ದೂರು
ಮನ್ಮುಲ್‌ನಲ್ಲಿ ನಡೆದಿರುವ ಹಾಲಿನ ಪುಡಿ ಕಲಬೆರಕೆ ಹಗರಣ ಮತ್ತು ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಬುಧವಾರ ತಾಲೂಕಿನ ಗೆಜ್ಜಲಗೆರೆ ಜಿಲ್ಲಾ ಹಾಲು ಒಕ್ಕೂಟಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಧ್ಯಕ್ಷ ಅಶೋಕ್ ಜಯರಾಮ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಮನ್ಮುಲ್ ಪ್ರವೇಶ ದ್ವಾರದ ಎದುರು ಪ್ರತಿಭಟಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಸಚಿವ ನರೇಂದ್ರಸ್ವಾಮಿ, ಶಾಸಕ ಕೆ.ಎಂ.ಉದಯ್ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆ ವೇಳೆ ಡಾ.ಇಂದ್ರೇಶ್ ಸೇರಿದಂತೆ ನೂರಾರು ಕಾರ್ಯಕರ್ತರ ಗುಂಪು ಪ್ರವೇಶ ದ್ವಾರದ ಗೇಟ್ ಜಖಂಗೊಳಿಸಿ ಆಡಳಿತ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಲು ವಿಫಲ ಯತ್ನ ನಡೆಸಿದರು. ನಂತರ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಮನ್ಮುಲ್ ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರನ್ನು ಕಚೇರಿಗೆ ನುಗ್ಗದಂತೆ ತಡೆದರು. ಕೆಲಕಾಲ ಮನ್ಮುಲ್ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.ಜಿಲ್ಲೆಯ ಜನಪ್ರತಿನಿಧಿಗಳು ಹಾಲಿನ ಪುಡಿ ಹಗರಣದ ಪ್ರಮುಖ ಆರೋಪಿ ಮನ್ಮುಲ್ ಮಾಜಿ ಅಧ್ಯಕ್ಷ ಯು.ಸಿ.ಶಿವಪ್ಪ ಕಾಂಗ್ರೆಸ್ ಪಕ್ಷದವರ ಕಾರಣ ಆತನ ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಡಾ.ಇಂದ್ರೇಶ್ ಸೇರಿದಂತೆ ಕಾರ್ಯಕರ್ತರ ಗುಂಪು ಮನ್ಮುಲ್ ಹಾಲಿನ ಪುಡಿಯನ್ನು ಮೈಮೇಲೆ ಸುರಿದುಕೊಂಡು ಪ್ರಕರಣವನ್ನು ಸಿಬಿಐ ತನಿಖೆ ವಹಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣಗೌಡ, ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಮಳವಳ್ಳಿ ಅಶೋಕ್, ಯುವ ಘಟಕದ ಅಧ್ಯಕ್ಷ ಹಾಗಲಹಳ್ಳಿ ರಘು, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಜಿ.ಸಿ.ಮಹೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜವರೇಗೌಡ, ಬಿಜೆಪಿ ಉಸ್ತುವಾರಿ ನಿಂಗರಾಜು, ತಾಲೂಕು ಘಟಕದ ಸಿ.ಕೆ.ಸತೀಶ್, ಮಹಿಳಾ ಘಟಕದ ಶ್ವೇತಾ, ಮಮತಾ ರಾಂ ಕ, ಮುಖಂಡರಾದ ಕೆ.ಎಸ್. ಮಲ್ಲಿಕಾರ್ಜುನ ಮತ್ತಿತರರು ಭಾಗವಹಿಸಿದ್ದರು.ನಂದಿನಿ ಹೆಸರಿನಲ್ಲಿ ವಿಷ ಉಣಿಸಿದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ: ಸದಾನಂದೌಗಡ
ಮದ್ದೂರು:ದೇಶ ರಕ್ಷಣೆ ಮಾಡುವ ಸೈನಿಕರು, ಮಕ್ಕಳು ಬಳಸುವ ಹಾಲಿನ ಪುಡಿ ಕಲಬೆರಕೆ ಮಾಡಿ ನಂದಿನಿ ಹೆಸರಿನಲ್ಲಿ ವಿಷ ಉಣಿಸುತ್ತಿರುವ ಮನ್ಮುಲ್ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಬುಧವಾರ ಆಗ್ರಹ ಪಡಿಸಿದರು.
ಬಿಜೆಪಿ ರೈತ ಮೋರ್ಚಾ ಹಮ್ಮಿಕೊಂಡಿದ್ದ ಮನ್ಮುಲ್ ಮುತ್ತಿಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಆಹಾರ ಸಚಿವ ಯು.ಟಿ. ಖಾದರ್ ಬೇಕರಿ, ಹೋಟೆಲ್ ಗಳ ಮೇಲೆ ದಾಳಿ ನಡೆಸುವ ಬದಲು ಮನ್ಮುಲ್ ಕಾರ್ಖಾನೆಗೆ ಭೇಟಿ ನೀಡಿ ಕಲಬೆರಕೆ ಹಾಲಿನ ಪುಡಿಯನ್ನು ಪರಿಶೀಲನೆ ನಡೆಸಲಿ. ಪೊಲೀಸರು ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.ಯಾವ್ಯಾವ ಸಚಿವರು ಡೀಲ್ ಮಾಡುತ್ತಿದ್ದಾರೆ ಎಂದು ಸಿಎಂಗೆ ಗೊತ್ತಿದೆ: ನಾರಾಯಣಗೌಡ
ಮದ್ದೂರು:ಯಾವ್ಯಾವ ಸಚಿವರು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂಬುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಿದೆ. ಹೀಗಾಗಿ ಸ್ಟಿಂಗ್ ಬಗ್ಗೆ ಸಚಿವರಿಗೆ ಸಿಎಂ ಎಚ್ಚರಿಕೆ ನೀಡಿದ್ದಾರೆ ಎಂದು ಮಾಜಿ ಸಚಿವ ನಾರಾಯಣಗೌಡ ದೂರಿದರು.
ಪ್ರತಿಭಟನೆ ವೇಳೆ ಮಾತನಾಡಿದ ಅವರು, ಭ್ರಷ್ಟಾಚಾರ ಮಾಡುತ್ತಿರುವ ಸಚಿವರನ್ನು ಎಚ್ಚರಿಸಿ ಕೊಡೋದು ತಗೋಳದ್ರಲ್ಲಿ ಹುಷಾರಾಗಿರಿ ಎಂದು ಸಿಎಂ ಹೇಳಿದ್ದಾರೆ. ಯಾರ ಮೇಲೆ ಆರೋಪ ಬರಬಹುದು ಎಂದು ಸಿಎಂಗೆ ಗೊತ್ತಿದೆ. ಅದಕ್ಕಾಗಿ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಕಿಡಿಕಾರಿದರು.ಬಿಜೆಪಿ ಸರ್ಕಾರವಿದ್ದಾಗ ಆಧಾರವಿಲ್ಲದೇ ಕಾಂಗ್ರೆಸ್ಸಿನವರು ನಮ್ಮ ಮೇಲೆ ಶೇ.40 ಕಮಿಷನ್ ಆರೋಪ ಮಾಡಿದರು. ನಾವು ಆಗ ಕಾಂಗ್ರೆಸ್ಸಿಗರಿಗೆ ಸರಿಯಾಗಿ ಕೌಂಟರ್ ಮಾಡ್ಲಿಲ್ಲ. ಪರ್ಸಂಟೇಜ್ ಅಂತು ನಿಂತಿಲ್ಲ. ಕಮಿಷನ್ ನಿಲ್ಲಿಸಲು ಎಂದಿಗೂ ಸಾಧ್ಯವಿಲ್ಲ. ಸರ್ಕಾರದಲ್ಲಿ ನಾನಂತೂ ಕಮಿಷನ್ ಪಡೆದಿಲ್ಲ. ನಾನು ಇಸ್ಕೊಂಡಿದ್ರೆ ಮಂಡ್ಯದಲ್ಲಿ ಗೊತ್ತಾಗ್ತ ಇರಲಿಲ್ವ? ಎಲ್ಲಾ ಸರ್ಕಾರಗಳಲ್ಲಿ ಕಮಿಷನ್ ಇದೆ ಅನ್ನೋದನ್ನು ಪರೋಕ್ಷವಾಗಿ ಒಪ್ಪಿಕೊಂಡರು.