ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಬ್ರಾಹ್ಮಣ ಸಭಾ ಆಡಳಿತ ಮಂಡಳಿ 65 ಲಕ್ಷ ರು. ದುರುಪಯೋಗಪಡಿಸಿಕೊಂಡಿರುವುದಾಗಿ ಆರೋಪಿಸಿ, ಇದಕ್ಕೆ ಕಾರಣರಾದ ಸಭಾದ ಅಧ್ಯಕ್ಷ ಹಾಗೂ ನಿರ್ದೇಶಕರು ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಮಂಗಳವಾರ ಬ್ರಾಹ್ಮಣ ಸಭಾದ ಸದಸ್ಯರು ಕಚೇರಿ ಎದುರು ಮಂಗಳವಾರ ಸಾಂಕೇತಿಕ ಧರಣಿ ನಡೆಸಿದರು.ಸಭಾದ ನಿರ್ದೇಶಕ ಹೊಳಲು ರಾಘವೇಂದ್ರ ಮತ್ತು ಅರುಣ್ ಪ್ರಸಾದ್ ಮತ್ತು ಭ್ರಷ್ಟಾಚಾರ ವಿಚಾರಣಾ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ, ಸೋಮಕುಮಾರ್, ಜಿ.ವಿ.ಕುಮಾರ್, ವಿದ್ಯಾಶಂಕರ್, ರಾಮಪ್ರಸಾದ್, ಪ್ರೊ.ನರಸಿಂಹಮೂರ್ತಿ ಮುಂತಾದವರ ನೇತೃತ್ವದಲ್ಲಿ ಸೇರಿದ ಸದಸ್ಯರು ಸಭಾದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ವಿಚಾರಣಾ ಸಮಿತಿಯ ಸದಸ್ಯ ಅರುಣ್ ಪ್ರಸಾದ್, ಸುಮಾರು ವರ್ಷಗಳಿಂದ ಲಕ್ಷಾಂತರ ರು. ಭ್ರಷ್ಟಾಚಾರ ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಸುಮಾರು 65 ಲಕ್ಷಕ್ಕೂ ಮಿಗಿಲಾಗಿ ಹಣ ದುರುಪಯೋಗವಾಗಿದೆ ಎಂಬುದು ದಾಖಲೆಗಳಿಂದ ಧೃಡಪಟ್ಟಿದೆ. ಆದರೆ, ಅದನ್ನು ಸಾಮೂಹಿಕವಾಗಿ ನಿರಾಕರಿಸುತ್ತಿರುವುದು ಖಂಡನಿಯ. ಕೂಡಲೇ ದುರುಪಯೋಗವಾಗಿರುವ ಸುಮಾರು 65 ಲಕ್ಷ ರು. ಹಣವನ್ನು ಸಭಾಕ್ಕೆ ವಾಪಸ್ ಕೊಡಬೇಕು ಮತ್ತು ಸದಸ್ಯರು ರಾಜೀನಾಮೆ ನೀಡಬೇಕು ಎಂದು ಸಭಾದ ಗೌರವ ಅಧ್ಯಕ್ಷ ಬೆಳ್ಳೂರು ಶಿವರಾಮ್ ಅವರು ತಮ್ಮ ಬೆಂಬಲಿತರಿಗೆ ಸೂಚನೆ ನೀಡಿ ಕಾರ್ಯಗತ ಮಾಡಿ ಬ್ರಾಹ್ಮಣ ಸಭಾದ ಗೌರವ ಕಾಪಾಡಬೇಕು ಎಂದು ಒತ್ತಾಯಿಸಿದರು.ಸಭೆಯಲ್ಲಿ ಮಾತನಾಡಿದ ಸದಸ್ಯ ಹೊಳಲು ರಾಘವೇಂದ್ರ, ಸುಮಾರು 1 ಕೋಟಿ ರು.ಗೂ ಹೆಚ್ಚು ಕಂದಾಯದ ಹಣ ಪಾವತಿಸಿಲ್ಲ ಎಂದು ತಿಳಿದು ಬಂದಿದೆ. ಇದನ್ನು ಪ್ರಶ್ನಿಸಿದರೆ ಅಧ್ಯಕ್ಷರು ಉಡಾಫೆಯಿಂದ ವರ್ತಿಸುತ್ತಿದ್ದಾರೆ. ಈ ಭ್ರಷ್ಟಾಚಾರಗಳಿಗೆಲ್ಲ ಅಂತ್ಯ ಹಾಡುವ ಕಾಲ ಬಂದಿದ್ದು, ಜುಲೈ 25 ರಂದು ನಡೆಯಲಿರುವ ಸಾರ್ವಜನಿಕ ಮಹಾಸಭೆಯಲ್ಲಿ ಈ ವಿಷಯ ಇತ್ಯರ್ಥವಾಗಬೇಕು ಇಲ್ಲದಿದ್ದರೆ ಈ ಸಂಬಂಧ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗೆ ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ದೂರು ಸಲ್ಲಿಸಿ ಮುಂದಿನ ಕ್ರಮಕ್ಕಾಗಿ ಒತ್ತಾಯಿಸಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರಭಟನೆಯಲ್ಲಿ ಶ್ರೀಪಾಟಿ, ಬಾಲಾಜಿ ಸತ್ಯಪ್ಪ, ರಂಗನಾಥ, ಬಾಬು, ನಾಗರಾಜು, ಸಂಧ್ಯಾರಾಣಿ, ಭಾರತಿ, ಶ್ರೀನಿವಾಸನ್, ನರಸಿಂಹನ್, ರಮೇಶ್, ವೆಂಕಟೇಶ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.