ವಿಪಕ್ಷಗಳನ್ನು ಟೀಕೆ ಮಾಡುವುದೇ ನನ್ನ ಗುರಿಯಲ್ಲ. ಪಕ್ಷ ಸಂಘಟನೆಗೆ ನನ್ನ ಮೊದಲ ಆದ್ಯತೆ. ಕಾಂಗ್ರೆಸ್ ಸಮಿತಿಯ ಎಲ್ಲಾ ವಿಭಾಗಗಳಿಗೂ ಪದಾಧಿಕಾರಿಗಳನ್ನು ನೇಮಕ ಮಾಡಿ ಚುರುಕು ನೀಡಲಾಗುವುದು ಎಂದ ಕುಮಾರ್ ಕೊಪ್ಪ, ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಅಹಿಂದ ವರ್ಗಕ್ಕೆ ನೀಡಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಸೆ.೨೬ರಂದು ಮಧ್ಯಾಹ್ನ ೩ ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಲಿದೆ ಎಂದು ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕುಮಾರ್ ಕೊಪ್ಪ ಹೇಳಿದರು.ಸಮಾರಂಭಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಆಹ್ವಾನ ನೀಡಲಾಗಿದೆ. ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಜಿಲ್ಲೆಯ ಕಾಂಗ್ರೆಸ್ ಶಾಸಕರು, ವಿಧಾನ ಪರಿಷತ್ ಶಾಸಕರು, ಮಾಜಿ ಶಾಸಕರು, ನಿಗಮ-ಮಂಡಳಿಗಳ ಅಧ್ಯಕ್ಷರು, ಪಕ್ಷ ವಿವಿಧ ವಿಭಾಗದ ಎಲ್ಲ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯ ಸಮಸ್ತ ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಲು ಬದ್ಧನಿದ್ದು ವಿಶೇಷವಾಗಿ ಯುವಜನರನ್ನು ಕಾಂಗ್ರೆಸ್ ಪಕ್ಷದ ಮುಂಚೂಣಿಗೆ ತರುವ ನಿಟ್ಟಿನಲ್ಲಿ ಒಂದು ಹೊಸ ಕ್ರಿಯಾಯೋಜನೆ ಸಿದ್ಧಪಡಿಸಿರುವುದಾಗಿ ಹೇಳಿದರು.ಪಕ್ಷದ ಜಿಲ್ಲಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುತ್ತಿರುವ ನೆನ್ನೆದುರು ಹಲವು ಕಠಿಣ ಸವಾಲುಗಳಿವೆ. ಪಕ್ಷ ಸಂಘಟನೆ ಜೊತೆಗೆ ಸರ್ಕಾರ ಮತ್ತು ಜನತೆಯ ಮಧ್ಯೆ ಸಂಪರ್ಕ ಸೇತುವೆಯಾಗಿ ಎಲ್ಲಾ ಯೋಜನೆಗಳು, ಸೌಲಭ್ಯಗಳನ್ನು ಅರ್ಹ ಫಲಾನುಭವಿಗೆ ತಲುಪಿಸುವ ಜವಾಬ್ದಾರಿ ನನ್ನ ಮೇಲಿದೆ. ಮುಂಬರುವ ಗ್ರಾಮ, ತಾಲೂಕು, ಜಿಪಂ, ಸಹಕಾರ ಸಂಘಗಳ ಚುನಾವಣೆ, ನಗರಸಭೆ-ಪುರಸಭೆ ಚುನಾವಣೆಗಳು ಹಾಗೂ ಇನ್ನು ಒಂದೂವರೆ ವರ್ಷದಲ್ಲಿ ಎದುರಾಗಲಿರುವ ಶಾಸನಸಭಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಪಣ ತೊಡಲು ಟೊಂಕಕಟ್ಟಿ ನಿಂತಿದ್ದೇನೆ ಎಂದು ದೃಢವಾಗಿ ಹೇಳಿದರು.
ವಿಪಕ್ಷಗಳನ್ನು ಟೀಕೆ ಮಾಡುವುದೇ ನನ್ನ ಗುರಿಯಲ್ಲ. ಪಕ್ಷ ಸಂಘಟನೆಗೆ ನನ್ನ ಮೊದಲ ಆದ್ಯತೆ. ಕಾಂಗ್ರೆಸ್ ಸಮಿತಿಯ ಎಲ್ಲಾ ವಿಭಾಗಗಳಿಗೂ ಪದಾಧಿಕಾರಿಗಳನ್ನು ನೇಮಕ ಮಾಡಿ ಚುರುಕು ನೀಡಲಾಗುವುದು ಎಂದ ಕುಮಾರ್ ಕೊಪ್ಪ, ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಅಹಿಂದ ವರ್ಗಕ್ಕೆ ನೀಡಿದೆ. ಏನೇ ಭಿನ್ನಾಭಿಪ್ರಾಯಗಳಿದ್ದರೂ ಎಲ್ಲವನ್ನೂ ಬದಿಗಿಟ್ಟು ಪಕ್ಷವನ್ನು ಬಲಗೊಳಿಸಲು ಕೈಜೋಡಿಸಬೇಕು. ಎಡಗೈ-ಬಲಗೈ ಎಂಬ ಯಾವುದೇ ಬೇಧವಿಲ್ಲದೆ ದಲಿತ ಸಮುದಾಯದ ಜೊತೆಗೆ ಇತರೆ ವರ್ಗದ ಮುಖಂಡರು-ಕಾರ್ಯಕರ್ತರನ್ನು ಜೊತೆಗೂಡಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ. ನಾನು ಕ್ರಿಯಾಶೀಲ ಮತ್ತು ದೀರ್ಘಾವಧಿ ಅಧ್ಯಕ್ಷನಾಗಿರುವುದಕ್ಕೆ ಸಂಕಲ್ಪ ಮಾಡಿದ್ದೇನೆ ಎಂದರು.ಗ್ಯಾರಂಟಿ ಯೋಜನೆಗಳಿಗೆ ಎಸ್‌ಎಸ್‌ಪಿ ಮತ್ತು ಟಿಎಸ್‌ಪಿ ಹಣ ಬಳಸಿರುವ ಕುರಿತು ಕೇಳಿದ ಪ್ರಶ್ನೆಗೆ, ಇದರ ಬಗ್ಗೆ ಪಕ್ಷದ ವೇದಿಕೆಗಳಲ್ಲಿ ನಾಯಕರ ಗಮನಕ್ಕೆ ತರುತ್ತೇನೆ. ದಲಿತರ ಅಭಿವೃದ್ಧಿಗೆ ಮೀಸಲಾದ ಹಣವನ್ನು ಬಳಸುವುದರಿಂದ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕುರಿತು ಸಲಹೆ ನೀಡಿ ಸರಿಪಡಿಸುವುದಾಗಿ ಭರವಸೆ ನೀಡಿದರು.
ವೀಕ್ಷಕರು ಅಭಿಪ್ರಾಯ ಸಂಗ್ರಹಕ್ಕೆ ಬಂದ ಸಮಯದಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಿ.ಎಂ.ದ್ಯಾವಪ್ಪ ಹಾಗೂ ಎಂ.ಎಸ್.ಚಿದಂಬರ್ ಹೆಸರನ್ನು ಸೂಚಿಸಿದ್ದೆ. ಆದರೆ, ವರಿಷ್ಠರು ನನ್ನನ್ನು ಆಯ್ಕೆ ಮಾಡಿ ಅಧಿಕಾರ ಕೊಟ್ಟಿದ್ದಾರೆ. ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬರದ ರೀತಿಯಲ್ಲಿ ಪಕ್ಷದ ಕಾರ್ಯಚಟುವಟಿಕೆಗಳನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ವಿಶ್ವಾಸದಿಂದ ನುಡಿದರು.ಗೋಷ್ಠಿಯಲ್ಲಿ ತಿಬ್ಬನಹಳ್ಳಿ ರಮೇಶ್, ಸಿ.ಎಂ.ದ್ಯಾವಪ್ಪ, ಆರ್.ಮೋಹನ್‌ಕುಮಾರ್, ವೈ.ಎಂ.ನಿಂಗೇಗೌಡ, ಸಿ.ಎಂ.ಕ್ರಾಂತಿಸಿಂಹ, ಬಿ.ಎಸ್.ಮಂಜು, ವೆಂಕಟೇಶ್ ಇತರರಿದ್ದರು.