ಮಂಡ್ಯ ಜಿಲ್ಲೆಯ ಕೃಷಿಯಲ್ಲಿ ವೈವಿಧ್ಯತೆ ಅಗತ್ಯ: ಜಿಪಂ ಸಿಇಒ ಕೆ.ಆರ್.ನಂದಿನಿ

| Published : Jul 24 2025, 12:53 AM IST

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿರುವ ಮಣ್ಣಿನ ಗುಣಮಟ್ಟ, ಹವಾಮಾನಕ್ಕೆ ಹೊಂದಾಣಿಕೆಯಾಗುವಂತಹ ಬೆಳೆಗಳನ್ನು ಬೆಳೆಯುವುದಕ್ಕೆ ರೈತರು ಆಲೋಚಿಸಬೇಕು. ಬೆಣ್ಣೆ ಹಣ್ಣು, ಡ್ರ್ಯಾಗನ್ ಫ್ರೂಟ್ ಸೇರಿದಂತೆ ಹಲವು ಹಣ್ಣಿನ ಬೆಳೆ, ತರಕಾರಿ ಬೆಳೆಗಳನ್ನು ರೂಢಿಸಿಕೊಂಡು ಸಮಗ್ರ ಕೃಷಿಯಲ್ಲಿ ತೊಡಗಿದಾಗ ಹೆಚ್ಚು ಲಾಭವನ್ನು ಗಳಿಸಬಹುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷಿ ಪ್ರಧಾನ ಜಿಲ್ಲೆಯಾದ ಮಂಡ್ಯದಲ್ಲಿ ಭತ್ತ, ಕಬ್ಬು, ತೆಂಗು ಬೆಳೆಯನ್ನು ಹೊರತುಪಡಿಸಿ ಬೇರೆ ಬೆಳೆಗಳತ್ತ ಗಮನಹರಿಸುತ್ತಿಲ್ಲ. ಕೃಷಿ ಪದ್ಧತಿಯಲ್ಲಿ ಬದಲಾವಣೆ ತಂದುಕೊಂಡು ಬೆಳೆಗಳಲ್ಲಿ ವೈವಿಧ್ಯತೆಯನ್ನು ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಹೇಳಿದರು.

ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಮಾತನಾಡಿ, ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಕುರಿತು ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿರುವ ಮಣ್ಣಿನ ಗುಣಮಟ್ಟ, ಹವಾಮಾನಕ್ಕೆ ಹೊಂದಾಣಿಕೆಯಾಗುವಂತಹ ಬೆಳೆಗಳನ್ನು ಬೆಳೆಯುವುದಕ್ಕೆ ರೈತರು ಆಲೋಚಿಸಬೇಕು. ಬೆಣ್ಣೆ ಹಣ್ಣು, ಡ್ರ್ಯಾಗನ್ ಫ್ರೂಟ್ ಸೇರಿದಂತೆ ಹಲವು ಹಣ್ಣಿನ ಬೆಳೆ, ತರಕಾರಿ ಬೆಳೆಗಳನ್ನು ರೂಢಿಸಿಕೊಂಡು ಸಮಗ್ರ ಕೃಷಿಯಲ್ಲಿ ತೊಡಗಿದಾಗ ಹೆಚ್ಚು ಲಾಭವನ್ನು ಗಳಿಸಬಹುದು. ಆರ್ಥಿಕ ಬಲವರ್ಧನೆಯಿಂದ ರೈತರ ಬದುಕು ಹಸನಾಗಲಿದೆ ಎಂದರು.

ಕೃಷಿ ಪ್ರಧಾನ ಜಿಲ್ಲೆಯಾಗಿದ್ದರೂ ಕೃಷಿಯಿಂದ ಬರುತ್ತಿರುವ ಆದಾಯ, ಉತ್ಪಾದಕತೆ ಕುಸಿದಿದೆ. ಈಗಲಾದರೂ ರೈತರು ಎಚ್ಚೆತ್ತುಕೊಳ್ಳಬೇಕು. ಜೊತೆಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆ, ನಬಾರ್ಡ್ ಅಧಿಕಾರಿಗಳು ಕೂಡ ಇಲಾಖಾ ವ್ಯಾಪ್ತಿಯ ಚೌಕಟ್ಟಿಗೆ ಒಳಪಟ್ಟು ಕಾರ್ಯನಿರ್ವಹಿಸುವ ಬದಲು ರೈತರ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರಿಗೆ ಎಲ್ಲ ರೀತಿಯ ಸಲಹೆ ಸಹಕಾರವನ್ನು ನೀಡಬೇಕು ಎಂದರು.

ಜಿಲ್ಲೆಯಲ್ಲಿ ಎಣ್ಣೆ ಕಾಳು ಬೆಳೆಗಳ ಉತ್ಪಾದನೆ ಕ್ಷೀಣವಾಗಿದೆ. ಕಡಲೆ ಬೀಜವನ್ನೂ ಹೊರಗಡೆಯಿಂದ ತರುವಂತಹ ಪರಿಸ್ಥಿತಿ ಇದೆ. ನಾವಿನ್ಯತೆ, ಪ್ರಾಯೋಗಿಕತೆಗೆ ಒಗ್ಗಿಕೊಳ್ಳದಿದ್ದರೆ ಪ್ರಗತಿ ಸಾಧಿಸಲಾಗುವುದಿಲ್ಲ. ಸಂಸ್ಕರಣೆಗೊಂಡ ವಿಶಿಷ್ಟ ಉತ್ಪನ್ನಗಳಿಗೆ ಎಲ್ಲೆಡೆ ಬೇಡಿಕೆ ಇದೆ. ಅವುಗಳನ್ನು ತಯಾರಿಸುವ ಕೌಶಲ್ಯವನ್ನು ರೈತರು, ಮಹಿಳೆಯರು ರೂಢಿಸಿಕೊಳ್ಳುವ ಅಗತ್ಯವಿದೆ. ಹೊಸತನಕ್ಕೆ ತೆರೆದುಕೊಳ್ಳದೆ ಕೃಷಿಯನ್ನು ಲಾಭದಾಯಕವಾಗಿ ಪರಿವರ್ತಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಆಲೋಚನಾ ಲಹರಿ ಬೆಳವಣಿಗೆ ಕಾಣಬೇಕಿದೆ ಎಂದರು.

ಉದ್ಯೋಗವನ್ನರಸಿ ವಲಸೆ ಹೋಗುವುದನ್ನು ಬಿಟ್ಟು ಯುವಕರು ಕೃಷಿಯಲ್ಲಿ ಏನಾದರೂ ಸಾಧಿಸಲು ಮುಂದಾಗಬೇಕು. ಚಿಕ್ಕದಾಗಿ ಉದ್ದಿಮೆಯನ್ನು ಸ್ಥಾಪನೆ ಮಾಡಿ ದೊಡ್ಡ ಮಟ್ಟಕ್ಕೆ ಬೆಳೆಸಲು ಶ್ರಮವಹಿಸಬೇಕು. ಆಗ ಉದ್ಯೋಗಕ್ಕಾಗಿ ಪರಿತಪಿಸಬೇಕಾದ ಅವಶ್ಯಕತೆಯೇ ಸೃಷ್ಟಿಯಾಗುವುದಿಲ್ಲ. ನೀವು ತಯಾರಿಸುವ ಉತ್ಪನ್ನಗಳಿಗೆ ನೀವೇ ಬೆಲೆ ನಿಗದಿಪಡಿಸುವಷ್ಟು ಸಾಮರ್ಥ್ಯ ಬೆಳೆಸಿಕೊಳ್ಳುವಂತೆ ತಿಳಿಸಿದರು.