ಕಂದಾಯ ಇಲಾಖೆ ನೌಕರರಿಗೆ ಕಾಲಮಿತಿ ವೇತನ, ಬಡ್ತಿ ಪ್ರಕ್ರಿಯೆ, ಪ್ರೊಬೇಷನರಿ ಘೋಷಣೆ ವಿಳಂಬ ಆಗದಂತೆ ತುರ್ತಾಗಿ ಮಾಡಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ತುರ್ತು ಸಂದರ್ಭದಲ್ಲಿ ಅಧಿಕಾರಿಗಳು ನೌಕರರಿಗೆ ಸಾಂದರ್ಭಿಕ ರಜೆ ಮಂಜೂರು ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕಂದಾಯ ಇಲಾಖೆಯಲ್ಲಿನ ಇ-ಪೌತಿ ಖಾತಾ ಆಂದೋಲನದಲ್ಲಿ ಮಂಡ್ಯ ಜಿಲ್ಲೆಯು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿರುವುದರಿಂದ ಆಗಿದ್ದು ಇಲಾಖೆಯ ನೌಕರರ ಕಾರ್ಯಕ್ಷಮತೆ ಬಗ್ಗೆ ಜಿಲ್ಲಾಧಿಕಾರಿ ಡಾ.ಕುಮಾರ ಶ್ಲಾಘಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಇಲಾಖೆಯ ಕುಂದು-ಕೊರತೆಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇ-ಪೌತಿ ಖಾತೆ, ಸಕಾಲ ಅರ್ಜಿಗಳು, ಬೆಳೆ ಸಮೀಕ್ಷೆ ಹಾಗೂ ಎಲ್ಲಾ ವಿಷಯಗಳಲ್ಲಿ ಗುರಿ ನಿಗದಿಪಡಿಸುತ್ತಿರುವುದು ಸಾರ್ವಜನಿಕ ಹಿತದೃಷ್ಟಿಯಿಂದ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ತ್ವರಿತವಾಗಿ ಕೆಲಸ ಮಾಡಿಕೊಟ್ಟಂತಾಗುತ್ತಿದೆ. ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪೌತಿ ಖಾತೆ ಆಂದೋಲನದ ಕೆಲಸವನ್ನು ಕಾನೂನುಬದ್ಧವಾಗಿ ಸರ್ಕಾರ ನಿಗದಿಪಡಿಸಿರುವ ನಿಯಮಗಳನುಸಾರ ಮಾಡುವಂತೆ ತಿಳಿಸಿದರು.

ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೇರ ನೇಮಕಾತಿ ಸರ್ಕಾರದ ಮಟ್ಟದಲ್ಲಿ ಇದೆ. ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವನೆ ಕಳುಹಿಸಲಾಗಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆ ಆಗಲಿದೆ ಎಂದರು.

ಕಂದಾಯ ಇಲಾಖೆ ನೌಕರರಿಗೆ ಕಾಲಮಿತಿ ವೇತನ, ಬಡ್ತಿ ಪ್ರಕ್ರಿಯೆ, ಪ್ರೊಬೇಷನರಿ ಘೋಷಣೆ ವಿಳಂಬ ಆಗದಂತೆ ತುರ್ತಾಗಿ ಮಾಡಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ತುರ್ತು ಸಂದರ್ಭದಲ್ಲಿ ಅಧಿಕಾರಿಗಳು ನೌಕರರಿಗೆ ಸಾಂದರ್ಭಿಕ ರಜೆ ಮಂಜೂರು ಮಾಡಬೇಕು. ವೇತನ ಪಾವತಿ ಪ್ರತಿ ತಿಂಗಳು ತಡ ಆಗದಂತೆ ಮಾಡಲು ಬಟವಾಡೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಕಂದಾಯ ಇಲಾಖೆಯಲ್ಲಿ ನೌಕರರ ಮೇಲೆ ಇಲಾಖಾ ವಿಚಾರಣೆಗಳನ್ನು ಬಾಕಿ ಇದ್ದು ನಿಗದಿತ ಅವಧಿಯೊಳಗೆ ತುರ್ತಾಗಿ ವಿಚಾರಣೆಯನ್ನು ಪೂರ್ಣಗೊಳಿಸಬೇಕು. ಗ್ರಾಮ ಸಹಾಯಕರು ಸೇವಾ ಅವಧಿಯಲ್ಲಿ ಮೃತಪಟ್ಟಲ್ಲಿ ಅವರ ಕುಟುಂಬಸ್ಧರಿಗೆ ಅನುಕಂಪದ ನೇಮಕಾತಿಯನ್ನು ವಿಳಂಬವಾಗದಂತೆ ಅವರ ಕುಟುಂಬಕ್ಕೆ ಅನುಕೂಲವಾಗುವಂತೆ ತುರ್ತಾಗಿ ನೇಮಕಾತಿ ಮಾಡಿಕೊಳ್ಳುವಂತೆ ಅಗತ್ಯ ಕ್ರಮ ವಹಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಮಾತನಾಡಿ, ಸಾರ್ವಜನಿಕರ ಕೆಲಸ ಮಾಡಲು ಅಧಿಕಾರಿಗಳು ವಿಳಂಬ ಆಗದಂತೆ ತುರ್ತಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ನಿಗದಿತ ಅವಧಿಯೊಳಗೆ ಸಾರ್ವಜನಿಕರ ಕೆಲಸ ಮಾಡಬೇಕು ಎಂದರು.

ಸಭೆಯಲ್ಲಿ ಮಂಡ್ಯ ಉಪ ವಿಭಾಗಾಧಿಕಾರಿ ಶಿವಮೂರ್ತಿ ಎಂ, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ಜಿಲ್ಲಾ ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷರಾದ ತಮ್ಮಣ್ಣ ಗೌಡ, ಜಿಲ್ಲಾ ಗ್ರಾಮಾಡಳಿತಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್ ಹಾಗೂ ಎಲ್ಲಾ ತಾಲೂಕಿನ ತಹಶೀಲ್ದಾರ್ ಹಾಜರಿದ್ದರು.