ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ಜಲ ಸಂರಕ್ಷಣೆ ಕಾರ್ಯಕ್ರಮಗಳನ್ನು ಪರಿಣಾಮಕಾರಿ ಹಾಗೂ ಉತ್ತಮವಾಗಿ ಅನುಷ್ಠಾನಗೊಳಿಸಿದ ಕಾರಣ ಮಂಡ್ಯ ಜಿಲ್ಲಾ ಪಂಚಾಯ್ತಿಗೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ರಾಷ್ಟ್ರೀಯ ಜಲ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರು ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಆರ್. ನಂದಿನಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಜಲಮೂಲಗಳ ಸಂರಕ್ಷಣೆ, ಅಂತರ್ಜಲ ವೃದ್ಧಿ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪ್ರಮಾಣದ ನೀರು ಒದಗಿಸುವ ಹಾಗೂ ನೀರಿನ ಸಮಸ್ಯೆ ನಿವಾರಿಸಲು ಕೈಗೊಂಡ ಜಲಶಕ್ತಿ ಅಭಿಯಾನದ ಚಟುವಟಿಕೆಗಳನ್ನು ಯಶಸ್ವಿಯಾಗಿ ಹಾಗೂ ಪರಿಣಾಮಕಾರಿ ಅನುಷ್ಟಾನಗೊಳಿಸಿದ್ದಕ್ಕಾಗಿ ಮಂಡ್ಯ ಜಿಲ್ಲೆಗೆ ಪ್ರಶಸ್ತಿಯ ಜೊತೆಗೆ ೨೫ ಲಕ್ಷ ರು. ನಗದು ಬಹುಮಾನ ನೀಡಲಾಗಿದೆ.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಇತರೆ ಯೋಜನೆಗಳಡಿ ಜಿಲ್ಲೆಯು ೨೦೨೪ರ ಏಪ್ರಿಲ್ ೧ ರಿಂದ ೨೦೨೫ ರ ಮಾರ್ಚ್ ೩೧ ರವರೆಗೆ ೭,೧೯೨ ಜಲಸಂರಕ್ಷಣೆ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಜಲಸಂಚಯ ಫೋರ್ಟಲ್‌ನಲ್ಲಿ ದಾಖಲಿಸಲಾಗಿತ್ತು. ಇವುಗಳಲ್ಲಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳಾದ ಬದು ನಿರ್ಮಾಣ, ಬೋರ್‌ವೆಲ್ ರೀ-ಚಾರ್ಜ್ ಪಿಟ್, ಸೋಕ್ ಪಿಟ್, ಸಮಗ್ರ ಕೆರೆ ಅಭಿವೃದ್ಧಿ, ಕಟ್ಟೆಗಳ ಅಭಿವೃದ್ಧಿ, ಕಲ್ಯಾಣಿಗಳ ಜೀರ್ಣೋದ್ಧಾರ, ಮಳೆ ನೀರು ಕೊಯ್ಲು, ತೆರೆದ ಬಾವಿ, ನಾಲಾ ಹೊಳೆತ್ತುವುದು, ಚೆಕ್ ಡ್ಯಾಂ ಕಾಮಗಾರಿಗಳನ್ನು ಅನುಷ್ಟಾನ ಮಾಡಲಾಗಿದೆ.
ಅಭಿಯಾನದ ಉದ್ದೇಶ ನೀರಿಗಾಗಿ ಒಂದಾಗಿ, ಪ್ರತಿ ಹನಿ ನೀರನ್ನು ಸಂರಕ್ಷಿಸಿ ಎಂಬ ಧ್ಯೇಯದೊಂದಿಗೆ ಜಲಸಂಚಯ ಜನಭಾಗಿದಾರಿ ೧.೦ ಅಭಿಯಾನವು ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು, ಮಳೆ ನೀರನ್ನು ಸಂಗ್ರಹಿಸುವುದು, ಜಲ ಸಂರಕ್ಷಣೆ ಸಂಸ್ಕೃತಿಯನ್ನು ಬೆಳೆಸುವುದು, ನೀರಿನ ಕೊರತೆ ನಿವಾರಣೆ, ಹರಿಯುವ ನೀರನ್ನು ತಡೆಯುವುದು, ತಡೆದ ನೀರನ್ನು ಇಂಗಿಸುವುದು, ಜಲ ಸಂಪನ್ಮೂಲಗಳ ಸಂರಕ್ಷಣೆ, ಮರುಸ್ಥಾಪನೆ, ಮರುಬಳಕೆಗೆ ಉತ್ತೇಜಿಸುವುದು, ಅಮೃತ ಸರೋವರಗಳ ರಚನೆ ಮತ್ತು ನವೀಕರಣದ ಮೂಲಕ ನೀರಿನ ಸಂಗ್ರಹಣೆ ಹೆಚ್ಚಿಸಲಾಗಿದೆ.ಮೈಸೂರು ವಿಭಾಗದ ೮ ಜಿಲ್ಲೆಗಳ ಪೈಕಿ ಪ್ರಥಮ ಸ್ಥಾನ. ಜಲ ಸಂಚಾಯಿ ಜನ ಭಾಗಿದಾರಿ ಅಭಿಯಾನದಡಿ ರಾಜ್ಯಗಳನ್ನು ೫ ವಲಯಗಳಾಗಿ ವಿಂಗಡಿಸಲಾಗಿತ್ತು. ೩ನೇ ವಲಯದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿವೆ. ಈ ಪೈಕಿ ಕರ್ನಾಟಕ ರಾಜ್ಯದ ೭ ಜಿಲ್ಲೆಗಳಿಗೆ ರಾಷ್ಟ್ರೀಯ ಪ್ರಶಸ್ತಿ ಘೋಷಿಸಲಾಗಿತ್ತು. ಮೈಸೂರು ವಿಭಾಗದ ಜಿಲ್ಲೆಗಳ ಪೈಕಿ ಮಂಡ್ಯ ಜಿಲ್ಲೆಯು ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೇಂದ್ರ ಜಲ ಶಕ್ತಿ ಇಲಾಖೆಯ ರಾಜ್ಯ ಸಚಿವ ವಿ. ಸೋಮಣ್ಣ ಹಾಗೂ ರಾಜ್ ಭೂಷಣ್ ಚೌಧರಿ ರವರು ಪಾಲ್ಗೊಂಡಿದ್ದರು. ಜಲಶಕ್ತಿ ಅಭಿಯಾನದ ಅನುಷ್ಠಾನದಲ್ಲಿ ಜಿಲ್ಲೆಗೆ ಪ್ರಶಸ್ತಿ ದೊರಕಿರುವುದು ಸಂತಸದ ವಿಷಯ. ಈ ಯಶಸ್ಸಿಗೆ ಕಾರಣರಾದ ಎಲ್ಲಾ ಅಧಿಕಾರಿ-ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಲ್ಲಿ ಈ ಪ್ರಶಸ್ತಿ ಮಹತ್ತರ ಪಾತ್ರ ವಹಿಸಲಿದೆ.-ಕೆ.ಆರ್.ನಂದಿನಿ, ಸಿಇಒ, ಜಿಪಂ
;Resize=(128,128))
;Resize=(128,128))
;Resize=(128,128))
;Resize=(128,128))