ಸಾರಾಂಶ
ಕುಣಿಗಲ್ : ತೆಂಗಿನ ಸಸಿ ನೆಡುವ ಗುಂಡಿ ತೆಗೆಯುವ ಕೂಲಿ ಮಾಡಿ ನಾಲ್ಕು ಸಾವಿರ ಸಂಪಾದಿಸಿ ಗುರಿ ಸಾಧಿಸಿದ್ದು ಅಂದು ತಾಯಿ ತೋರಿದ ಅಭಿಮಾನ ಬಡತನದ ನೋವು ನನ್ನನ್ನು ಮಂಡ್ಯ ಜಿಲ್ಲಾ ಅಪರ ಜಿಲ್ಲಾಧಿಕಾರಿ ಆಗುವಂತೆ ಪ್ರೇರೇಪಣೆ ಮಾಡಿದೆ ಎಂದು ಡಾ. ಎಚ್. ಎಲ್. ನಾಗರಾಜು ಭಾವುಕರಾದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ರೋವರ್ ಮತ್ತು ರೆಂಜರ್ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳ ಚಟುವಟಿಕೆ ಸಮಾರಂಭ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು, ತಾಲೂಕಿನ ಕೊತ್ತಕೆರೆ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಜನಿಸಿ ಪ್ರತಿ ದಿನ ಹೊಲಗದ್ದೆಯಲ್ಲಿ ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಪಡೆಯಲು ಬೇರೆಯವರ ಮನೆಯ ತೆಂಗಿನ ತೋಟದಲ್ಲಿ ಗುಂಡಿ ತೆಗೆಯುವ ಕೆಲಸ ಮಾಡಿ ಮೂರು ರೂಪಾಯಿ ಸಂಬಳ ಸಂಪಾದಿಸುತ್ತಿದ್ದೆ. ಶಿಕ್ಷಣಕ್ಕೆ ಬೇಕಾದ ಅಗತ್ಯತೆಗಳನ್ನು ಈ ಕೂಲಿಯಿಂದಲೇ ಪೂರೈಸಿಕೊಂಡು ನಾನು ಬದುಕುತ್ತಿದ್ದೆ. ಇಂತಹ ಸಂದರ್ಭದಲ್ಲಿ ಆಯಾಸದಿಂದ ಪ್ರಜ್ಞಹೀನನಾಗಿದ್ದಾಗ ತಾಯಿ ಮಗ ಸತ್ತನೆಂದು ಕಣ್ಣೀರು ಹಾಕಿದ ಘಟನೆಯನ್ನು ನೆನಪಿಸಿಕೊಂಡು ವೇದಿಕೆ ಮೇಲೆ ಕಣ್ಣೀರು ಹಾಕಿದರು.
ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿ, ಜೀವನದಲ್ಲಿ ಕಾಲೇಜು ಜೀವನ ಉತ್ತಮ ಸುಖಕರ ಆಗಬಾರದು. ಶ್ರಮ ಶ್ರದ್ಧೆ ನಿಷ್ಠೆ ಸಾಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮುಂದಿನ ನಿಮ್ಮ ಬದುಕು ಸುಖಕರ ಆಗುತ್ತದೆ ಎಂದರು. ಕಾಲೇಜು ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾಕ್ಟರ್ ಗೋವಿಂದರಾಯ ಮಾತನಾಡಿ, ಕಾಲೇಜಿನಲ್ಲಿ ಕಲಿಯುವ ವಿದ್ಯಾಭ್ಯಾಸ ನಿಮ್ಮ ಶಿಕ್ಷಣದ ಗುಣಮಟ್ಟ ಮತ್ತು ಅಂಕವನ್ನು ಬದಲಿಸುತ್ತದೆ. ಜೊತೆ ಜೊತೆಯಲ್ಲಿ ತಂದೆ ತಾಯಿ ಗುರು ಹಿರಿಯರು ಸಮಾಜ ಸ್ನೇಹಿತರು ಇವರುಗಳಿಂದ ಕಳೆಯುವ ಶಿಕ್ಷಣ ನಿಮ್ಮ ಸಂಸ್ಕಾರ, ಉತ್ತಮ ಬಾಂಧವ್ಯವನ್ನು ಬೆಳೆಸುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಪ್ರೊ ಮಾಯಾ ಸಾರಂಗಪಾಣಿ, ಪ್ರೊ ರಾಮಾ ನಂಜಪ್ಪ, ಡಾ. ಶಿವಕುಮಾರ್, ಡಾ. ರವೀಶ್ ಜಿಎಸ್, ಪ್ರೊ ಹನುಮಂತಪ್ಪ, ಪ್ರೊ ನಾರಾಯಣದಾಸ್, ಪ್ರೊ ಶ್ರೀನಿವಾಸ ಪ್ರಭು, ಪ್ರೊ ನಾಗಮ್ಮ, ಪ್ರೋ ಸುರೇಶ್, ಪ್ರೊ ರುಕ್ಮಿಣಿ ಸೇರಿದಂತೆ ಕಾಲೇಜು ಸಿಬ್ಬಂದಿಗಳು ವಿದ್ಯಾರ್ಥಿಗಳು ಇದ್ದರು.