ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ಮಂಡ್ಯ ಜಿಪಂ ಸಿಇಒ ಸಲಹೆ

| Published : Jun 07 2024, 12:31 AM IST

ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ಮಂಡ್ಯ ಜಿಪಂ ಸಿಇಒ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ತಮ್ಮ ಸಣ್ಣ ವಯಸ್ಸಿನಿಂದಲೇ ಅವರ ಅಭಿವ್ಯಕ್ತಿಯನ್ನು ಹೊರ ಹಾಕುವ ವಿವಿಧ ಪ್ರಾಕಾರಗಳನ್ನು ಪರಿಚಯ ಮಾಡಿಕೊಟ್ಟರೆ ಮುಂದಿನ ದಿನಗಳಲ್ಲಿ ಅವರು ಹೆಚ್ಚಿನ ಪ್ರಾಪಂಚಿಕ ಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತದೆ. ಅಂತಹ ಒಂದು ಪ್ರಯತ್ನ ಈ ಕಾರ್ಯಕ್ರಮದಲ್ಲಿ ಅಡಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜ್ಞಾನ, ಅರಿವು, ಸುಖ-ದುಃಖಗಳನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಾಗಿಸುವ ಅತ್ಯಂತ ಪ್ರಮುಖ ಮಾರ್ಗ ಎಂದರೆ ಸಾಹಿತ್ಯ. ಮಕ್ಕಳಿಗೆ ಸಾಹಿತ್ಯದ ರುಚಿ ತೋರಿಸಿ ಬೆಳೆಸುವ ಕೆಲಸವಾಗಬೇಕು ಎಂದು ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಹೇಳಿದರು.

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ನಡೆದ ಮಕ್ಕಳ ಸಾಹಿತ್ಯ ಸಂಭ್ರಮ, ಸಾಹಿತ್ಯ ಕ್ರೋಢೀಕರಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲೂ ಸಾಹಿತ್ಯವನ್ನು ಬೆಳೆಸುವ ಕೆಲಸ ಆಗಬೇಕು ಎಂದರು.

ಮಕ್ಕಳು ತಮ್ಮ ಸಣ್ಣ ವಯಸ್ಸಿನಿಂದಲೇ ಅವರ ಅಭಿವ್ಯಕ್ತಿಯನ್ನು ಹೊರ ಹಾಕುವ ವಿವಿಧ ಪ್ರಾಕಾರಗಳನ್ನು ಪರಿಚಯ ಮಾಡಿಕೊಟ್ಟರೆ ಮುಂದಿನ ದಿನಗಳಲ್ಲಿ ಅವರು ಹೆಚ್ಚಿನ ಪ್ರಾಪಂಚಿಕ ಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತದೆ. ಅಂತಹ ಒಂದು ಪ್ರಯತ್ನ ಈ ಕಾರ್ಯಕ್ರಮದಲ್ಲಿ ಅಡಗಿದೆ ಎಂದರು.

ಇಂದಿನ ಕಾರ್ಯಾಗಾರದಲ್ಲಿ ಮಕ್ಕಳು ಬರೆದ ಕಥೆ, ಕವನ, ನಾಟಕಗಳನ್ನು ಕ್ರೋಢೀಕರಣ ಮಾಡಿ ಅತ್ಯುತ್ತಮವಾದವುಗಳನ್ನು ರಾಜ್ಯ ಮಟ್ಟಕ್ಕೆ ಕಳುಹಿಸುವ ಕಾರ್ಯ ನಡೆಯುತ್ತಿದೆ. ನಮ್ಮ ಜಿಲ್ಲೆಯ ಮಕ್ಕಳು ಬರೆದ ಸಾಹಿತ್ಯ ರಾಜ್ಯ ಮಟ್ಟದಲ್ಲಿ ಹೆಚ್ಚಾಗಿ ಆಯ್ಕೆಯಾಗಲೆಂದು ಹಾರೈಸಿದರು.

ರಾಜ್ಯ ಸಂಚಾಲಕ ಟಿ.ಎ.ಪ್ರಶಾಂತ್‌ ಬಾಬು ಮಾತನಾಡಿ, ಮಂಡ್ಯ ಜಿಲ್ಲೆಯ ಐದು ತಾಲೂಕುಗಳಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮ ಹಬ್ಬವನ್ನು ನಡೆಸಲಾಗಿದೆ. ಕಾರ್ಯಕ್ರಮದಲ್ಲಿ ೫೦೦ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಸುಮಾರು ೨೦೦೦ ಕ್ಕೂ ಹೆಚ್ಚು ಪುಟಗಳ ನವೀನ ಸಾಹಿತ್ಯವನ್ನು ಸೃಜನೆ ಮಾಡಿದ್ದಾರೆ ಎಂದರು.

ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷ ಪ್ರೊ.ಎಸ್.ರೇವಣ್ಣ ಮಾತನಾಡಿ, ಮಕ್ಕಳ ಸಾಹಿತ್ಯ ಸಂಭ್ರಮ ಮಕ್ಕಳಿಂದಲೇ ಲೇಖನಗಳನ್ನು ಬರೆಸುವ ಅತ್ಯಂತ ನವೀನ ಚಟುವಟಿಕೆಯಾಗಿದ್ದು, ಮಕ್ಕಳಲ್ಲಿ ಅಭಿವ್ಯಕ್ತಿ ಸಾಮರ್ಥ್ಯವನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ, ಶ್ರೀರಂಗಪಟ್ಟಣ, ಮದ್ದೂರು, ಮಂಡ್ಯ ಮತ್ತು ಪಾಂಡವಪುರ ತಾಲೂಕುಗಳಲ್ಲಿನ ಆಯ್ದ ೧೫ ಪಂಚಾಯಿತಿಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಮುಖ್ಯ ಯೋಜನಾಧಿಕಾರಿ ಎಸ್. ಧನುಷ್, ಜಿಲ್ಲಾ ಪಂಚಾಯ್ತಿಯ ಯೋಜನಾ ಅಂದಾಜು ಮೌಲ್ಯ ಮಾಪನಾಕಾರಿ ಎಂ. ಶಿವಮ್ಮ, ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ನಂಜರಾಜು ಹಾಗೂ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ೩೦ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.