ಮಂಡ್ಯ ನಗರದ ಜೆಪಿ ಸ್ಮಾರಕ ವಿದ್ಯಾಸಂಸ್ಥೆ ವತಿಯಿಂದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ೧೨೫ನೇ ಜನ್ಮ ಜಯಂತಿ ಕಾರ್ಯಕ್ರಮವನ್ನು ಅ.೧೦, ೧೧ರಂದು ಕಲಾಮಂದಿರ ಪಕ್ಕದಲ್ಲಿರುವ ಎಚ್.ಹೊಂಬೇಗೌಡ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಜೆಪಿ ಸ್ಮಾರಕ ವಿದ್ಯಾಸಂಸ್ಥೆ ವತಿಯಿಂದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ೧೨೫ನೇ ಜನ್ಮ ಜಯಂತಿ ಕಾರ್ಯಕ್ರಮವನ್ನು ಅ.೧೦, ೧೧ರಂದು ಕಲಾಮಂದಿರ ಪಕ್ಕದಲ್ಲಿರುವ ಎಚ್.ಹೊಂಬೇಗೌಡ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೌಡ್ಲೆ ಚೆನ್ನಪ್ಪ ತಿಳಿಸಿದರು.

೧೯೭೫ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಆಗ ಜಯಪ್ರಕಾಶ್ ನಾರಾಯಣ್ ಅವರು ‘ಸಂಪೂರ್ಣ ಕ್ರಾಂತಿ’ ಕರೆ ನೀಡಿದ್ದರು. ಅದೊಂದು ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿತ್ತು. ನಾಗರೀಕ ಸ್ವಾತಂತ್ರ್ಯ ಅಮಾನತುಗೊಳಿಸಿದಾಗ, ರಾಜಕೀಯ ವಿರೋಗಳನ್ನು ಬಂಸಿದಾಗ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಿದಾಗ ಸಿಡಿದು ನಿಂತ ಜೆಪಿ ಚಳುವಳಿ ದೇಶದ ಇತಿಹಾಸದಲ್ಲಿ ಮಹತ್ವದ್ದಾಗಿದೆ. ಆ ಸನ್ನಿವೇಶದಲ್ಲಿ ಮಂಡ್ಯಕ್ಕೆ ಆಗಮಿಸಿದ್ದ ಅವರು, ಇದೇ ಕ್ಯಾಂಪಸ್ ಆವರಣದಲ್ಲಿ ನಿಂತು ಭಾಷಣ ಮಾಡಿದ್ದರು ಎಂದು ಸ್ಮರಿಸಿದರು.

ಅ.೧೦ರಂದು ಮಧ್ಯಾಹ್ನ ೩ ಗಂಟೆಗೆ ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜೆಪಿಯವರ ಜನ್ಮ ಜಯಂತಿ ಸಮಿತಿ ಅಧ್ಯಕ್ಷರಾದ ರಘು ಠಾಕೂರ್ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಪಿ.ರವಿಕುಮಾರ್‌ ಹಾಗೂ ವಿಧಾನಪರಿಷತ್‌ ಸದಸ್ಯ ಕೆ.ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ.

ಅ.೧೧ರಂದು ಬೆಳಿಗ್ಗೆ ೧೧ ಗಂಟೆಗೆ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿ.ಪ. ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ವಿಧಾನಪರಿಷತ್ ಮಾಜಿ ಸದಸ್ಯ ವಿ.ಎಸ್.ಉಗ್ರಪ್ಪ, ಮಾಜಿ ಸಚಿವ ಎಸ್.ಸುರೇಶ್‌ಕುಮಾರ್, ಸೊಗಡು ಶಿವಣ್ಣ, ಸಿ.ಪಿ.ಉಮೇಶ್, ಬಿ.ಎಸ್.ಶಿವಣ್ಣ ಮತ್ತಿತರರು ಪಾಲ್ಗೊಳ್ಳಲಿದ್ದಾರೆಂದು ಕೌಡ್ಲೆ ಚನ್ನಪ್ಪ ಮಾಹಿತಿ ನೀಡಿದರು.

ಜೆಪಿ ಸ್ಮಾರಕ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಯಮದೂರು ಸಿದ್ದರಾಜು ಉಪಸ್ಥಿತರಿದ್ದರು.

ಅ.೧೬ ರಿಂದ ೨೧ರವರೆಗೆ ಕಾವೇರಿ ಆರತಿ

ಕನ್ನಡಪ್ರಭ ವಾರ್ತೆ ಮಂಡ್ಯಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ಕೆಆರ್‌ಎಸ್ ಬೃಂದಾವನ ಉದ್ಯಾನದಲ್ಲಿ ಆಯೋಜಿಸಲಾಗಿರುವ ‘ಕಾವೇರಿ ಆರತಿ’ ಕಾರ್ಯಕ್ರಮದ ದಿನಾಂಕವನ್ನು ಅನಿವಾರ್ಯ ಕಾರಣಗಳಿಂದ ಬದಲಾವಣೆ ಮಾಡಲಾಗಿದೆ ಎಂದು ಜಲಸಂಪನ್ಮೂಲ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮೊದಲು ಅ.೧೧ರಿಂದ ೧೬ರವರೆಗೆ ನಿಗದಿಯಾಗಿದ್ದ ಕಾವೇರಿ ಆರತಿ ಕಾರ್ಯಕ್ರಮವನ್ನು ಅ.೧೬ರಿಂದ ೨೧ರವರೆಗೆ ಆಯೋಜಿಸಲಾಗಿದೆ. ಧಾರ್ಮಿಕ ಪೂಜಾ ಕೈಂಕರ್ಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳಾ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು, ಪ್ರವಾಸಿಗರು ಹಾಗೂ ಭಕ್ತಾದಿಗಳು ಬದಲಾದ ದಿನಾಂಕವನ್ನು ಗಮನಿಸಿ, ಅ.೧೬ರಿಂದ ೨೧ರವರೆಗೆ ನಡೆಯಲಿರುವ ಕಾವೇರಿ ಆರತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೋರಿದ್ದಾರೆ.