ಸಾರಾಂಶ
ಮಂಡ್ಯದಲ್ಲಿ ಅಯೋಜನೆಗೊಂಡಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನ ಅಭೂತಪೂರ್ವ ಯಶಸ್ಸು ಕಂಡಿದೆ. ಇದಕ್ಕೆ ಕಾರಣಕರ್ತರಾದ ಮಂಡ್ಯದ ಜನತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ಕೃತಜ್ಞತೆ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಂಡ್ಯದಲ್ಲಿ ಅಯೋಜನೆಗೊಂಡಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನ ಅಭೂತಪೂರ್ವ ಯಶಸ್ಸು ಕಂಡಿದೆ. ಇದಕ್ಕೆ ಕಾರಣಕರ್ತರಾದ ಮಂಡ್ಯದ ಜನತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ಕೃತಜ್ಞತೆ ಸಲ್ಲಿಸಿದ್ದಾರೆ.ಸೋದರತೆ, ಸಮನ್ವಯತೆ, ಸಜ್ಜನಿಕೆ, ಸಹಭಾವಕ್ಕೆ ಹೆಸರಾದ ಮಂಡ್ಯ ಜನತೆ ಇಡೀ ಸಮ್ಮೇಳನವನ್ನು ತಮ್ಮ ಮನೆಯ ಹಬ್ಬದಂತೆ ಭಾವಿಸಿ ಅಭೂತಪೂರ್ವ ಯಶಸ್ಸಿಗೆ ಕಾರಣರಾಗಿದ್ದಾರೆ. ಸಮ್ಮೇಳನಕ್ಕೆ ಸಾಗರೋಪಾದಿಯಲ್ಲಿ ನಾಡಿನೆಲ್ಲೆಡೆಯಿಂದ ಜನಸಾಗರವೇ ಹರಿದು ಬಂದಂತೆ, ಹೊರನಾಡಿನಿಂದ ಮತ್ತು ವಿದೇಶಗಳಿಂದ ಕೂಡ ಕನ್ನಡಿಗರು ಈ ನುಡಿ ಹಬ್ಬದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಮಾಗಿದ ವ್ಯಕ್ತಿತ್ವದ ಜನಪದ ಭೀಷ್ಮ ಗೊ.ರು.ಚನ್ನಬಸಪ್ಪ ಅವರು ತಮ್ಮ ಹೆಗ್ಗಳಿಕೆಗೆ ತಕ್ಕಂತೆ ನಾಡು-ನುಡಿಯ ಕುರಿತು ಶಿಖರಪ್ರಾಯವಾದ ಮಾತುಗಳನ್ನು ಆಡುವುದರ ಜತೆಗೆ, ಇಡೀ ಸಮ್ಮೇಳನದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿ ಅದರ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಆಯೋಜಿತವಾದಾಗಿನಿಂದಲೂ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಮಾರ್ಗದರ್ಶನ ನೀಡುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ರಾಜ್ಯ ಸರಕಾರವು ಸಂಪೂರ್ಣ ಬೆಂಬಲ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯ ಸ್ವಾಮಿ ಕೂಡ ಸಂಪೂರ್ಣ ಸಹಕಾರ ನೀಡಿದ್ದಾರೆ. ಸಮ್ಮೇಳನದ ಅಭೂತಪೂರ್ವ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಗೋಷ್ಠಿಗಳಲ್ಲಿ 239 ಮಂದಿ ಬರಹಗಾರರು ಭಾಗಿ
ಮಂಡ್ಯ ಸಮ್ಮೇಳನದಲ್ಲಿ ಅಯೋಜಿತವಾಗಿದ್ದ 31 ಗೋಷ್ಠಿಗಳಲ್ಲಿ 156 ಜನ ವಿದ್ವಾಂಸರು, 4 ಕವಿಗೋಷ್ಠಿಗಳಲ್ಲಿ ಒಟ್ಟು 83 ಮಂದಿ ಕವಿಗಳೂ ಸೇರಿದಂತೆ ಒಟ್ಟು 239 ಮಂದಿ ಚಿಂತಕ-ಬರಹಗಾರರು ಭಾಗವಹಿಸಿ ಕನ್ನಡ ಸಾಂಸ್ಕೃತಿಕ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಲು ಕಾರಣರಾಗಿದ್ದಾರೆ. ಇದಲ್ಲದೆ, ನಾಡಿನ ಅನೇಕ ಹಿರಿಯ ಬರಹಗಾರರು, ಚಿಂತಕರು ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡಾಸಕ್ತರಂತೂ ತಮ್ಮ ಮನೆಯ ಹಬ್ಬದ ರೀತಿಯಲ್ಲಿ ಸಂಭ್ರಮಿಸಿದ್ದಾರೆ ಎಂದು ಡಾ.ಮಹೇಶ ಜೋಶಿ ಸ್ಮರಿಸಿದ್ದಾರೆ.