ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ನೀಡಿದ ಜನಪರ ಆಡಳಿತವೇ ಲೋಕಸಭಾ ಚುನಾವಣೆಯಲ್ಲಿ ಅವರ ಗೆಲುವು ನಿಶ್ಚಿತವಾಗಲಿದೆ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರೊಡಗೂಡಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಪರ ಚುನಾವಣೆಯಲ್ಲಿ ಶ್ರಮಿಸಿದ ಎಲ್ಲಾ ಮುಖಂಡರು, ಕಾರ್ಯಕರ್ತರು, ಮತದಾರರು ಮತ್ತು ವಿವಿಧ ರಾಜಕೀಯ ಪಕ್ಷಗಳಲ್ಲಿ ಚದುರಿ ಹೋಗಿರುವ ಕುಮಾರಣ್ಣನ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಅಲ್ಪಕಾಲಿಕ. ಇವುಗಳಿಂದ ಜಿಲ್ಲೆಯ ಮತದಾರರು ಮರುಳಾಗಿಲ್ಲ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪಕ್ಷಾತೀತ ವ್ಯಕ್ತಿ. ಎಲ್ಲ ರಾಜಕೀಯ ಪಕ್ಷಗಳಲ್ಲೂ ಕುಮಾರಣ್ಣನ ಅಭಿಮಾನಿಗಳಿದ್ದಾರೆ. ಇದರಿಂದ ಜಿಲ್ಲೆಯ ಜನರು ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸಿದ್ದಾರೆ ಎಂದರು.ನಮ್ಮ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಮಹಿಳೆಯರು ಕೌಟುಂಬಿಕ ವ್ಯವಸ್ಥೆಗೆ ವಿರುದ್ಧವಾಗಿಲ್ಲ. ಬಹುತೇಕ ಮಹಿಳೆಯರು ಗ್ಯಾರಂಟಿ ಯೋಜನೆಗಳಿಗೆ ಬೆಲೆ ಕೊಡದೆ ತಮ್ಮ ತಮ್ಮ ಕುಟುಂಬದ ಯಜಮಾನರನ್ನು ಅನುಸರಿಸಯೇ ಮತ ಚಲಾಯಿಸಿದ್ದಾರೆ ಎಂದರು.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚು ಮತದಾನ ಮಾಡಿದ್ದು, ಇದು ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕುಮಾರಣ್ಣನ ಗೆಲುವಿಗೆ ಹೆಚ್ಚು ಸಹಕಾರಿಯಾಗಿದೆ. ಕುಮಾರಣ್ಣನ ಆಡಳಿತದ ಅವಧಿಯಲ್ಲಿನ ಜನಪರ ಕಾರ್ಯಕ್ರಮಗಳ ಜೊತೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಶಕ್ತಿಯೂ ಮೈತ್ರಿ ಮೂಲಕ ನಮಗೆ ಒಲಿದಿದೆ ಎಂದರು.ಕುಮಾರಣ್ಣ ಕೇವಲ ರಾಜಕಾರಣಿಯಲ್ಲದೇ ಹೃದಯವಂತರಾಗಿ ಕಾಂಗ್ರೆಸ್ಸಿಗರ ಪ್ರತಿರೋಧದ ನಡುವೆಯೂ ರೈತರ ಸಾಲ ಮನ್ನಾ ಮಾಡಿದರು. ಸಾಲಬಾಧೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ತೆರಳಿ ಅವರ ಕುಟುಂಬಕ್ಕೆ ನೆರವು ನೀಡಿ ಸಾಂತ್ವನ ಹೇಳಿದ್ದಾರೆ. ಇದು ಅವರ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.
ಜಿಲ್ಲೆಯ ಜನ ಪ್ರಜ್ಞಾವಂತರು. ಹಣಕ್ಕೆ ಮಹತ್ವ ನೀಡುವುದಿಲ್ಲ. ಬಡ ಕುಟುಂಬಗಳ ಕಲ್ಯಾಣಕ್ಕೆ ಶ್ರಮಿಸಿದ ಕುಮಾರಣ್ಣರ ಅಭಿವೃದ್ಧಿಯ ಕಾರ್ಯ ಚಿಂತನೆಯೇ ಅವರ ಗೆಲುವಿಗೆ ಪ್ರಮುಖ ಕಾರಣವಾಗಲಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಕುಮಾರಣ್ಣನ ಅಭಿಮಾನಿಗಳು ಮತ್ತು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಅಪಾರ ಪರಿಶ್ರಮದಿಂದ ಕಾಂಗ್ರೆಸ್ ಅಭ್ಯರ್ಥಿಗಿಂತಲೂ ಕನಿಷ್ಟ 30 ಸಾವಿರಕ್ಕೂ ಹೆಚ್ಚು ಮತಗಳು ಮೈತ್ರಿ ಅಭ್ಯರ್ಥಿಗೆ ದೊರಕಲಿವೆ. ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕಿರಾಂ, ಬಿಜೆಪಿ ತಾಲೂಕು ಅಧ್ಯಕ್ಷ ಸಾರಂಗಿ ನಾಗಣ್ಣ, ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಡಾಲು ರವಿ, ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಜೆಡಿಎಸ್ ಕಾನೂನು ಘಟಕದ ತಾಲೂಕು ಅಧ್ಯಕ್ಷ ವಿ.ಎಸ್.ಧನಂಜಯ್ ಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಎಚ್.ಡಿ.ದೇವೇಗೌಡ ಅಭಿಮಾನಿ ಬಳಗದ ಅಧ್ಯಕ್ಷ ಗೌತಮ್, ಗ್ರಾಪಂ ಮಾಜಿ ಅಧ್ಯಕ್ಷ ಭಾರತೀಪುರ ಮಂಜುನಾಥ್, ಮುಖಂಡ ಕಟ್ಟೆಕ್ಯಾತನಹಳ್ಳಿ ಚಂದ್ರೆಗೌಡ ಹಲವರು ಇದ್ದರು.