ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಅಂತಿಮವಾಗಿದೆ. ವರಿಷ್ಠರು ಘೋಷಣೆ ಮಾಡಬೇಕು ಅಷ್ಟೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್ .ಚಲುವರಾಯಸ್ವಾಮಿ ತಿಳಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿ ಯಾರು ಎಂದು ನನಗೆ ಘೋಷಣೆ ಮಾಡುವ ಅಧಿಕಾರ ಇಲ್ಲ. ಇದನ್ನು ವರಿಷ್ಠರು ಮಾಡುತ್ತಾರೆ. ಜಿಲ್ಲೆಯ ಶಾಸಕರು, ಸಚಿವರು ಅಭ್ಯರ್ಥಿಯನ್ನು ಭೇಟಿ ಮಾಡಿ ಪರಿಚಯ ಮಾಡಿಕೊಳ್ಳುವುದು ಸಾಮಾನ್ಯ ಎಂದು ಪರೋಕ್ಷವಾಗಿ (ವೆಂಕಟರಮಣೇಗೌಡ) ಸ್ಟಾರ್ ಚಂದ್ರು ಅಭ್ಯರ್ಥಿ ಎಂಬುದನ್ನು ಒಪ್ಪಿಕೊಂಡರು. ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗೆಲುವಿಗೆ ಗಂಭೀರ ಚರ್ಚೆ ನಡೆದಿದೆ. ಒಕ್ಕಲಿಗರಿಗೆ ಹೆಚ್ಚಿನ ಆದ್ಯತೆಯನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಅದಕ್ಕೆ ನಮ್ಮ ಪಕ್ಷಕ್ಕೆ ಒಕ್ಕಲಿಗರು ಹೆಚ್ಚು ಸಹಾಯ ಮಾಡಬೇಕು. ಈ ಬಗ್ಗೆ ಸಭೆಯಲ್ಲಿ ಎಲ್ಲಾ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು, ಮುಖಂಡರು ಚರ್ಚೆ ನಡೆಸಿದ್ದೇವೆ ಎಂದರು.ಸಂಸದರು ಬುದ್ಧಿವಂತರು: ಸಂಸದೆ ಸುಮಲತಾ ಬಹಳ ಬುದ್ಧಿವಂತರು. ಅವರು ಏನೇ ಹೇಳಿಕೆ ಕೊಡಲಿ ಅದಕ್ಕೆ ನನಗೆ ಬೇಜಾರಿಲ್ಲ. ಅವರಿಗೆ ಒಳ್ಳೆಯದಾಗಲಿ. ಯಾರು ಸಂಸದರು ಆಗಬೇಕು ಎಂಬುದನ್ನು 8 ವಿಧಾನಸಭಾ ಕ್ಷೇತ್ರದ ಜನ ತೀರ್ಮಾನ ಮಾಡುತ್ತಾರೆ ಎಂದು ತಿರುಗೇಟು ನೀಡಿದರು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 16 ರಿಂದ 17 ಲಕ್ಷ ಮತದಾರರು ಇದ್ದಾರೆ. ಅವರು ಪಾರ್ಲಿಮೆಂಟ್ ಗೆ ಯಾರು ಸ್ಟ್ರಾಂಗ್ ಅಭ್ಯರ್ಥಿ ಎಂಬುದನ್ನು ತೀರ್ಮಾನಿಸುತ್ತಾರೆ. ಅವರು ಹಣೆಬರಹ ಬರೆಯುತ್ತಾರೆ. ಏಪ್ರಿಲ್ - ಮೇ ವೇಳೆಗೆ ನಿಮಗೆ ತಿಳಿಯಲಿದೆ ಎಂದು ಉತ್ತರಿಸಿದರು. ಜೆಡಿಎಸ್ - ಬಿಜೆಪಿ ಯಾರೇ ಅಭ್ಯರ್ಥಿಯಾದರೂ ನಮಗೆ ಬೇಕಿಲ್ಲ. ಮಂಡ್ಯ ಕ್ಷೇತ್ರ ಬಿಜೆಪಿ ಅಥವಾ ಜೆಡಿಎಸ್ ಗೆ ಆಗುತ್ತದೋ ಅದು ನಮಗೆ ಬೇಕಿಲ್ಲ. ಅದು ಮೈತ್ರಿ ನಾಯಕರಿಗೆ ಬಿಟ್ಟಿದ್ದು ಎಂದು ತಿಳಿಸಿದರು.ಕುಡಿಯುವ ನೀರಿಗೆ ಕಠಿಣ ಪರಿಸ್ಥಿತಿ: ಮಳೆ ಕೊರತೆ ನಡುವೆ ಕಳೆದ ಬಾರಿ ಬೆಳೆಗಳಿಗೆ ನೀರು ಕೊಟ್ಟಿದ್ದೇವೆ. ಸಂಕ್ರಾಂತಿ ವೇಳೆಯಲ್ಲಿಯೂ 4 ದಿನ ನೀರು ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹೆಚ್ಚು ಬೇಡಿಕೆ ಇದೆ. ಇದನ್ನು ಬಿಟ್ಟು ಹೆಚ್ಚು ಇದ್ದರೆ ರೈತರಿಗೆ ನೀರು ಕೊಡುತ್ತೇವೆ. ಇಂದು ಕಠಿಣ ಪರಿಸ್ಥಿತಿ ಎದುರಾಗಿದೆ. ವರದಿ ಪ್ರಕಾರ ಮಳೆಗಾಲದ ವೇಳೆಗೆ ಕುಡಿಯುವ ನೀರಿಗೆ 2 ಟಿಎಂಸಿ ನೀರು ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಸಚಿವರು ಹೇಳಿದರು. ಟ್ರಯಲ್ ಬ್ಲಾಸ್ಟ್ ಕೋರ್ಟ್ ಆದೇಶಕ್ಕೆ ಮನ್ನಣೆ ನೀಡಬೇಕು: ಕೆಆರ್ ಎಸ್ ಅಣೆಕಟ್ಟೆ 20 ಕಿ.ಮೀ ವ್ಯಾಪ್ತಿಯ ಬೇಬಿ ಬೆಟ್ಟದಲ್ಲಿ ಹೈಕೋರ್ಟ್ ಆದೇಶದಂತೆ 6 ತಿಂಗಳ ಒಳಗೆ ಟ್ರಯಲ್ ಬ್ಲಾಸ್ಟ್ ಆಗಬೇಕು. ಟ್ರಯಲ್ ಬ್ಲಾಸ್ಟ್ ನಂತರ ರೈತರು ಸೇರಿದಂತೆ ಕೆಲವರಿಗೆ ಕಲ್ಲು ಗಣಿಗಾರಿಕೆಗೆ ಒಪ್ಪಿಗೆ ನೀಡುವ ಆತಂಕವಿದೆ. ಆದರೆ, ನಾವು ನ್ಯಾಯಾಲಯದ ಆದೇಶಕ್ಕೆ ಮನ್ನಣೆ ನೀಡಬೇಕಾಗುತ್ತದೆ ಎಂದರು. ಗಣಿಗಾರಿಕೆ ಸಂಬಂಧ ಆ ಭಾಗದ ರೈತರು, ಜನಪ್ರತಿನಿಧಿಗಳ ವಿಶ್ವಾಸ ತೆಗೆದುಕೊಂಡು ಚರ್ಚೆ ನಡೆಸಿ ಸರ್ಕಾರ ಮುಂದಿನ ಕೈಗೊಳ್ಳುತ್ತದೆ. ರೈತರು ಕೇಳೋದರಲ್ಲಿ ಹಕ್ಕಿದೆ. ಈಬಗ್ಗೆ ಸೋಮವಾರ ಕರೆದು ಮಾತನಾಡುತ್ತೇವೆ ಎಂದು ತಿಳಿಸಿದರು.