ಸಾರಾಂಶ
ಮಂಡ್ಯ : ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆ ನಾಮಪತ್ರ ಹಿಂಪಡೆಯುವ ಕೊನೆ ದಿನವಾದ ಸೋಮವಾರ 5 ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದಿದ್ದು, ಅಂತಿಮವಾಗಿ 14 ಮಂದಿ ಕಣದಲ್ಲಿ ಉಳಿದಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾದ ಚಿಕ್ಕನಂಜಾಚಾರಿ, ಕೆ. ಶಿವಾನಂದ, ಲೋಲ, ಯೋಗೇಶ್ ಮತ್ತು ಶಿವನಂಜಪ್ಪ ನಾಮಪತ್ರ ಹಿಂಪಡೆದಿದರು. ಒಟ್ಟು 27 ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದು, 8 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿತ್ತು.ಕಣದಲ್ಲಿರುವ ಅಭ್ಯರ್ಥಿಗಳು:
ಎಚ್.ಡಿ. ಕುಮಾರಸ್ವಾಮಿ - ಜನತಾ ದಳ (ಜಾತ್ಯತೀತ), ವೆಂಕಟರಮಣೇಗೌಡ - ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಶಿವಶಂಕರ್.ಎಸ್ - ಬಹುಜನ ಸಮಾಜ ಪಾರ್ಟಿ, ಚಂದ್ರಶೇಖರ ಕೆ. ಆರ್ - ಕರ್ನಾಟಕ ರಾಷ್ಟ್ರ ಸಮಿತಿ, ಬೂದಯ್ಯ - ಕರುನಾಡು ಪಾರ್ಟಿ, ಹೆಚ್. ಡಿ. ರೇವಣ್ಣ - ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿ, ಲೋಕೇಶ ಎಸ್ - ಉತ್ತಮ ಪ್ರಜಾಕೀಯ ಪಕ್ಷ, ಎಸ್. ಅರವಿಂದ್ - ಪಕ್ಷೇತರ, ಚನ್ನಮಾಯಿಗೌಡ - ಪಕ್ಷೇತರ, ಚಂದನ್ ಗೌಡ. ಕೆ - ಪಕ್ಷೇತರ, ಎನ್. ಬಸವರಾಜು - ಪಕ್ಷೇತರ, ಬೀರೇಶ್. ಸಿ. ಟಿ - ಪಕ್ಷೇತರ, ರಾಮಯ್ಯ. ಡಿ - ಪಕ್ಷೇತರ ಹಾಗೂ ರಂಜಿತ. ಎನ್ - ಪಕ್ಷೇತರ, ಒಟ್ಟು 14 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಏ.12 ರಂದು ಹಣ ಬಿಡುಗಡೆ ಸಮಿತಿ ಸಭೆ
ಮಂಡ್ಯ: ಕರ್ನಾಟಕ ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಕ್ಷಿಪ್ರ ಸಂಚಾರಿ ದಳ ( FST ) ಮತ್ತು ಸ್ಥಾಯಿ ಕಣ್ಗಾವಲು ತಂಡದವರು (SST ), ಪೊಲೀಸ್ ತಂಡದವರು ತಪಾಸಣೆ ನಡೆಸಿ ವಶಪಡಿಸಿಕೊಂಡಿರುವ ಹಣವನ್ನು ಆಯಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ/ ತಾಲೂಕು ಉಪ ಖಜಾನೆಯ ವಶದಲ್ಲಿರಿಸಲಾಗಿದೆ.
ಈ ಹಣವು ರಾಜಕೀಯ ಉದ್ದೇಶಕ್ಕಾಗಿ ಬಳಕೆಯಾಗದೇ ಇರುವ ಬಗ್ಗೆ ಸಂಬಂಧಿಸಿದವರಿಂದ ದಾಖಲಾತಿಗಳನ್ನು ಪಡೆದು ಪರಿಶೀಲಿಸಿ ಖಾತ್ರಿಪಡಿಸಿಕೊಂಡ ನಂತರ ಸಂಬಂಧಿಸಿದ ವ್ಯಕ್ತಿಗಳಿಗೆ ಹಣವನ್ನು ಬಿಡುಗಡೆಗೊಳಿಸಲು ಜಿಪಂ ಸಿಇಒ ಮತ್ತು ಹಣ ಬಿಡುಗಡೆ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಹಣ ಬಿಡುಗಡೆ ಸಮಿತಿಯ ಸಭೆಯನ್ನು ಏ.12 ರಂದು ಸಂಜೆ 4 ಗಂಟೆಗೆ ಜಿಲ್ಲಾ ಪಂಚಾಯತ್ ನಲ್ಲಿ ಆಯೋಜಿಸಲಾಗಿದೆ.
ಚುನಾವಣಾ ಸಾಮಾನ್ಯ ವೀಕ್ಷಕರಿಂದ ಪರಿಶೀಲನೆ
ಮದ್ದೂರು: ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಸಾಮಾನ್ಯ ವೀಕ್ಷಕರಾಗಿ ನೇಮಕವಾಗಿರುವ ನೀರಜ್ ಕುಮಾರ್ ತಾಲೂಕಿನ ಸ್ಟ್ರಾಂಗ್ ರೂಂ ಹಾಗೂ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳಿಂದ ಸ್ಟ್ರಾಂಗ್ ರೂಂ ಭದ್ರತೆಗೆ ಮಾಡಿರುವ ವ್ಯವಸ್ಥೆಗಳು ಹಾಗೂ ಮತಗಟ್ಟೆಗಳಲ್ಲಿ ಚುನಾವಣಾ ಆಯೋಗ ನೀಡಿರುವ ನಿರ್ದೇಶನದಂತೆ ಸಿದ್ಧ ಮಾಡಿರುವ ಮೂಲ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಸಹಾಯಕ ಚುನಾವಣಾಧಿಕಾರಿ ಲೋಕನಾಥ್, ವೀಕ್ಷಕರ ಸಮನ್ವಯಾಧಿಕಾರಿ ರಂಗಸ್ವಾಮಿ ಉಪಸ್ಥಿತರಿದ್ದರು.