ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಲೋಕಸಭಾ ಚುನಾವಣೆ ಗೊಂದಲ, ಗದ್ದಲ, ಘರ್ಷಣೆಗಳಿಗೆ ಅವಕಾಶವಾಗದಂತೆ ಶುಕ್ರವಾರ ಶಾಂತಿಯುತವಾಗಿ ನಡೆಯಿತು. ತಾಲೂಕು, ಹೋಬಳಿ ಮಟ್ಟದಲ್ಲಿ ಜನರು ಬೆಳಗ್ಗೆಯಿಂದಲೇ ಮತ ಹಕ್ಕು ಚಲಾವಣೆಗೆ ಉತ್ಸಾಹ ತೋರಿಸಿದರೆ, ಗ್ರಾಮೀಣ ಪ್ರದೇಶದ ಜನರು ಸಂಜೆಯ ಬಳಿಕ ಮತದಾನಕ್ಕೆ ಬಿರುಸು ನೀಡಿದರು.ಮತದಾನ ಬೆಳಗ್ಗೆ ೭ ಗಂಟೆಗೆ ಆರಂಭಗೊಂಡರೂ ಎರಡು ತಾಸುಗಳ ಕಾಲ ನಗರ ಪ್ರದೇಶದಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಎಂಬಂತೆ ಮತಗಟ್ಟೆಗೆ ಬಂದು ಮತಚಲಾಯಿಸುತ್ತಿದ್ದರು. ಬೆಳಗ್ಗೆ ೯ ಗಂಟೆಯ ಬಳಿಕ ಮತದಾನ ನಗರ ವ್ಯಾಪ್ತಿಯೊಳಗೆ ಬಿರುಸನ್ನು ಪಡೆದುಕೊಂಡಿತು. ಕುಟುಂಬದವರೆಲ್ಲರೂ ಮತಗಟ್ಟೆಗೆ ಬಂದು ಮತ ಚಲಾಯಿಸಿ ತೆರಳುತ್ತಿದ್ದರು. ನೆರೆ ಹೊರೆಯವರೆಲ್ಲರೂ ವೋಟರ್ ಸ್ಲಿಪ್ ಹಿಡಿದುಕೊಂಡು ಒಟ್ಟಿಗೆ ಆಗಮಿಸಿ ಮತ ಹಕ್ಕು ಚಲಾಯಿಸುತ್ತಿದ್ದರು. ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳಿಗೆ ತೆರಳಬೇಕಾದವರು, ಕೆಲಸ ನಿಮಿತ್ತ ಬೇರೆಡೆ ತೆರಳುವವರು ಕೂಡ ಬೆಳಗ್ಗೆಯೇ ಮತದಾನಕ್ಕೆ ಉತ್ಸಾಹ ತೋರಿದ್ದರು.
ಬಿಸಿಲ ಝಳ ಹೆಚ್ಚಾಗುವುದನ್ನು ಅರಿತಿದ್ದ ಕೆಲವು ಮಹಿಳೆಯರು ಕೂಡ ಬಿಸಿಲೇರುವ ಮುನ್ನವೇ ಮತ ಚಲಾವಣೆಗೆ ಮುಂದಾಗಿದ್ದರು. ಇದೇ ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕು ಪಡೆದಿದ್ದವರು ತಂದೆ-ತಾಯಿಯೊಂದಿಗೆ ಮತಗಟ್ಟೆಗೆ ಬಂದು ಮತದಾನ ಮಾಡುವುದರೊಂದಿಗೆ ಹೊಸ ಅನುಭವವನ್ನು ಪಡೆದುಕೊಂಡರು. ವೃದ್ಧರು, ಅಂಗವಿಕಲರು ಕೂಡ ಮಕ್ಕಳು, ಸ್ನೇಹಿತರ ನೆರವಿನೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಜಿಲ್ಲೆಯ ಹಲವಾರು ಶತಾಯುಷಿಗಳನ್ನು ಮತಗಟ್ಟೆಗೆ ಕರೆತಂದು ಮತ ಹಾಕಿಸುವ ಮೂಲಕ ಮತದಾನದಿಂದ ವಂಚಿತರಾಗದಂತೆ ಮಕ್ಕಳು-ಮೊಮ್ಮಕ್ಕಳು, ಸಂಬಂಧಿಕರು ನೋಡಿಕೊಂಡರು.ಹೋಬಳಿ ಮತ್ತು ತಾಲೂಕು ಕೇಂದ್ರಗಳ ಹಲವು ಮತಗಟ್ಟೆಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತಚೀಟಿಯೊಂದಿಗೆ ಮತದಾನಕ್ಕೆ ಕಾದು ನಿಂತಿದ್ದರೆ, ಮತ್ತೆ ಕೆಲವು ಮತಗಟ್ಟೆಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರು ಸಾಲುಗಟ್ಟಿ ನಿಂತಿದ್ದರು. ಅನೇಕ ಮತಗಟ್ಟೆಗಳ ಬಳಿ ರಾಜಕೀಯ ಪಕ್ಷದವರು ನಿಂತು ಮತಗಟ್ಟೆಗಳ ಬಳಿ ಬರುವ ಜನರನ್ನು ತಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಕೋರುತ್ತಿದ್ದರು. ಇನ್ನೂ ಕೆಲವು ಮತಗಟ್ಟೆಗಳ ಸಮೀಪ ಬೆರಳೆಣಿಕೆಯಷ್ಟು ಮಂದಿ ನಿಂತು ಮತದಾರರ ಬಳಿ ಮನವಿ ಮಾಡುತ್ತಿದ್ದ ದೃಶ್ಯಗಳು ಕಂಡುಬಂದವು.
ಮಧ್ಯಾಹ್ನದ ಬಿಸಿಲ ತಾಪ ಜೋರಾಗಿದ್ದರಿಂದ ಗ್ರಾಮಾಂತರ ಪ್ರದೇಶದ ಹೆಚ್ಚು ಮಂದಿ ಮತಗಟ್ಟೆಗಳ ಬಳಿ ಮತದಾನಕ್ಕೆ ತೆರಳಲಿಲ್ಲ. ಸುಡು ಬಿಸಿಲಿಗೆ ವಿವಿಧ ರಾಜಕೀಯ ಪಕ್ಷಗಳ ಮತಚೀಟಿ ಬರೆದುಕೊಡುವವರೂ ಹೈರಾಣಾಗಿದ್ದರು. ನೆರಳನ್ನಾಶ್ರಯಿಸಿಕೊಂಡು ಅವರೆಲ್ಲರೂ ದೂರವೇ ತೆರಳಿದ್ದರು. ಸಂಜೆಯ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಮತದಾನ ಪ್ರಕ್ರಿಯೆಯಲ್ಲಿ ತೊಡಗಿದ್ದರು.ಕಳೆದ ೨೫ ವರ್ಷಗಳಿಂದಲೂ ಮಂಡ್ಯ ಲೋಕಸಭೆ ಕಣದಲ್ಲಿ ಸಿನಿಮಾ ನಟ-ನಟಿಯರು ಇರುತ್ತಿದ್ದರಿಂದ ಚುನಾವಣೆ ಜನರಲ್ಲಿ ತೀವ್ರ ಕುತೂಹಲವನ್ನು ಹುಟ್ಟುಹಾಕುತ್ತಿತ್ತು. ಅವರ ಗೆಲುವು-ಸೋಲನ್ನು ಜನರು ಅಷ್ಟೇ ನಿರೀಕ್ಷೆ ಮತ್ತು ಕುತೂಹಲದಿಂದ ಎದುರುನೋಡುತ್ತಿದ್ದರು. ೧೯೯೮ರಿಂದ ೨೦೦೯ರವರೆಗೆ ನಾಲ್ಕು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಂಬರೀಶ್ ಸ್ಪರ್ಧಿಸಿದ್ದರು. ಇದರಲ್ಲಿ ಮೂರು ಗೆಲುವು, ಒಂದು ಸೋಲನ್ನು ಕಂಡರು.. ೨೦೧೪ ಲೋಕಸಭೆ ಉಪ ಚುನಾವಣೆಯಲ್ಲಿ ನಟಿ ರಮ್ಯಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದು, ೨೦೧೫ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿದ್ದರು. ೨೦೧೯ರಲ್ಲಿ ನಟಿ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜನಮಾನಸದಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿದ್ದರು.
ಸಿನಿಮಾ ನಟ-ನಟಿಯರ ಮೇಲಿನ ಅಭಿಮಾನದಿಂದಾಗಿ ಚುನಾವಣೆ ಜನಮಾನಸದಲ್ಲಿ ಆಸಕ್ತಿ ಮತ್ತು ಕುತೂಹಲ ಹೆಚ್ಚಿಸಿತ್ತು. ಆದರೆ, ೨೦೨೪ರ ಚುನಾವಣೆಯಲ್ಲಿ ಸಿನಿಮಾ ನಟ-ನಟಿಯರಿಲ್ಲದೆ ಜನರಲ್ಲಿ ಚುನಾವಣೆಯ ಬಗ್ಗೆ ಹೆಚ್ಚಿನ ಆಸಕ್ತಿ, ಕುತೂಹಲವಿರಲಿಲ್ಲ. ಹೀಗಾಗಿ ಮತಗಟ್ಟೆಗೆ ಹೋಗಿ ಮತ ಚಲಾಯಿಸುವುದಕ್ಕಷ್ಟೇ ಅವರ ಒಲವಿತ್ತೇ ವಿನಃ ಇಂತಹವರನ್ನು ಗೆಲ್ಲಿಸಲೇಬೇಕೆಂಬ ಹಠಕ್ಕೆ ಬಿದ್ದು ಮತದಾನ ಮಾಡಲು ಮುಂದಾದವರಂತೆ ಕಂಡುಬರಲೇ ಇಲ್ಲ.ಗ್ರಾಮೀಣ ಪ್ರದೇಶದ ಕೆಲವು ಮತಗಟ್ಟೆಗಳಲ್ಲಿ ಮಧ್ಯಾಹ್ನದ ಸುಡುಬಿಸಿಲಿನಲ್ಲೂ ಮಹಿಳೆಯರು ಸಖಿ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದುದು ಕಂಡುಬಂದಿತು. ಕೆಲ ಮತಗಟ್ಟೆಗಳ ಬಳಿ ಮತದಾನ ಮಾಡಲು ಬರುವವರಿಗೆ ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಬೆಳಗ್ಗೆ ೭ ಗಂಟೆಯಿಂದ ೯ ಗಂಟೆಯವರೆಗೆ ಶೇ.೭.೭೦ರಷ್ಟು ಮತದಾನವಾಗಿದ್ದರೆ, ೯ ಗಂಟೆಯಿಂದ ೧೧ ಗಂಟೆಯವರೆಗೆ ಶೇ.೨೧.೨೪, ೧೧ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಶೇ.೪೦.೭೪ ಹಾಗೂ ೧ ರಿಂದ ೩ ಗಂಟೆಯವರೆಗೆ ಶೇ. ೫೭.೪೩ರಷ್ಟು ಮತದಾನ ನಡೆದಿತ್ತು. ಮಧ್ಯಾಹ್ನ ೧ ರಿಂದ ೩ ಗಂಟೆಯವರೆಗೆ ಬಿಸಿಲ ತಾಪ ಹೆಚ್ಚಾಗಿದ್ದರಿಂದ ಮತದಾನದ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಕ್ಷೀಣಿಸಿತ್ತು.