ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
೨೦೨೫-೨೬ನೇ ಸಾಲಿನ ನಗರಸಭೆ ಆಯವ್ಯಯದಲ್ಲಿ ೧೨೬.೦೭ ಕೋಟಿ ರು. ಆದಾಯ ನಿರೀಕ್ಷಿಸಲಾಗಿದ್ದು, ೧೨೩.೧೯ ಕೋಟಿ ರು. ಖರ್ಚು ತೋರಿಸುವ ಮೂಲಕ ೨.೮೮ ಕೋಟಿ ರು. ಉಳಿತಾಯ ಬಜೆಟ್ ಮಂಡಿಸಲಾಯಿತು.ಬುಧವಾರ ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಬಜೆಟ್ ಮಂಡಿಸಿದ ಅಧ್ಯಕ್ಷ ಎಂ.ವಿ.ಪ್ರಕಾಶ್, ೨೦೨೫-೨೬ನೇ ಸಾಲಿಗೆ ಆರಂಭಿಕ ಶಿಲ್ಕು ೨೧.೬೧ ಲಕ್ಷ ರು. ನಗರಸಭೆಯ ಸ್ವಂತ ಸಂಪನ್ಮೂಲಗಳಿಂದ ೨೫.೧೭ ಕೋಟಿ ರು., ಸರ್ಕಾರಕ್ಕೆ ಪಾವತಿಸಬೇಕಾದ ಕರಗಳ ಬಾಬ್ತು ೯.೦೧ ಕೋಟಿ ರು. ಕೇಂದ್ರ ಮತ್ತು ರಾಜ್ಯಸರ್ಕಾರಗಳಿಂದ ನಿರೀಕ್ಷಿತ ಅನುದಾನ ೭೦.೨೭ ಕೋಟಿ ರು. ಸೇರಿ ಒಟ್ಟು ೧೨೬.೦೭ ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ ಎಂದರು.
ನೌಕರರ ವೇತನ, ನಿರ್ವಹಣಾ ವೆಚ್ಚಗಳು, ಬಂಡವಾಳ ಕಾಮಗಾರಿಗಳು, ಕಲ್ಯಾಣ ಕಾರ್ಯಕ್ರಮಗಳು, ಸರ್ಕಾರಕ್ಕೆ ಪಾವತಿಸಬೇಕಾದ ಕರಗಳು, ಶಾಸನಬದ್ಧ ತೆರಿಗೆಗಳೂ ಸೇರಿದಂತೆ ೧೨೩.೧೯ ಕೋಟಿ ರು. ಖರ್ಚಾಗಲಿದೆ. ಇದರೊಂದಿಗೆ ೨.೮೮ ಕೋಟಿ ರು. ಉಳಿತಾಯವಾಗಲಿದೆ ಎಂದು ವಿವರಿಸಿದರು.ನಗರದ ಅಭಿವೃದ್ಧಿಗೆ ಪ್ರಮುಖ ಯೋಜನೆಗಳು:
ಉದ್ಯಾನವನಗಳ ಅಭಿವೃದ್ಧಿ ಅಮೃತ್ ೨.೦ ಯೋಜನೆಯಡಿ ನಗರಸಭಾ ಕಚೇರಿ ಮುಂಭಾಗದ ಮಹಾತ್ಮಗಾಂಧಿ ಉದ್ಯಾನವನ, ಬಿವಿಕೆ ಬಡಾವಣೆಯ ಉದ್ಯಾನವನವನ್ನು ೭೫ ಲಕ್ಷ ರು., ಹಾಳಹಳ್ಳಿ ಉದ್ಯಾನವನವನ್ನು ೨೫ ಲಕ್ಷ ರು., ರೈಲ್ವೆ ನಿಲ್ದಾಆಣ ಮುಂಭಾಗದ ಉದ್ಯಾನವನ, ನಗರ ವ್ಯಾಪ್ತಿಯಯಲ್ಲಿರುವ ಉದ್ಯಾನವನಗಳ ಅಭಿವೃದ್ಧಿಗೆ ೨ ಕೋಟಿ ರು. ಹಣ ಮೀಸಲಿಡಲಾಗಿದಿಎ. ನಗರದ ರಸ್ತೆಯ ಎರಡೂ ಬದಿಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಲು ೨೫ ಲಕ್ಷ ರು.ಗಳನ್ನು ನಿಗದಿಪಡಿಸಲಾಗಿದೆ ಎಂದರು.ಸುಸಜ್ಜಿತ ಕೌನ್ಸಿಲ್ ಸಭಾಂಗಣ:
ರಾಜ್ಯ ಹಣಕಾಸು ಆಯೋಗದ ಅನುದಾನದಡಿ ನಗರಸಭೆಯ ಅಮೃತ ಭವನ ಕಟ್ಟಡದಲ್ಲಿ ಸುಸಜ್ಜಿತ ಕೌನ್ಸಿಲ್ ಸಭಾಂಗಣವನ್ನು ೩ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಾಲಿನಲ್ಲೇ ಕೌನ್ಸಿಲ್ ಸಭಾಂಗಣ ನಿರ್ಮಾಣ ಯೋಜನೆ ಪೂರ್ಣಗೊಳಿಸಲು ಕ್ರಮ ವಹಿಸುವ ಭರವಸೆ ನೀಡಿದರು.ತಂಗುದಾಣ, ಬಸ್-ಬೇ ಅಭಿವೃದ್ಧಿ:
ನಗರಸಭೆ ವ್ಯಾಪ್ತಿಯಲ್ಲಿನ ಬಸ್ ತಂಗುದಾಣಗಳು ಮತ್ತು ಮುಖ್ಯ ರಸ್ತೆಯಲ್ಲಿರುವ ಬಸ್-ಬೇಗಳನ್ನು ಅಭಿವೃದ್ಧಿಗೊಳಿಸಲು ಆಯವ್ಯಯದಲ್ಲಿ ಉದ್ದೇಶಿಸಲಾಗಿದೆ. ಇದಕ್ಕೆ ಅಗತ್ಯವಿಇರುವ ಅನುದಾನವನ್ನು ಸರ್ಕಾರದ ಅನುದಾನ ಮತ್ತು ನಗರಸಭಾ ನಿಧಿಯಿಂದ ಭರಿಸಲಾಗುವುದು.ಸಾರ್ವಜನಿಕಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಯ್ದ ಸ್ಥಳಗಳಲ್ಲಿ ಮಾದರಿ ಆಟೋ ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.ರಸ್ತೆ ವಿಭಜಕ ನಿರ್ಮಾಣ:
ವಾಹನಗಳ ಸುಗಮ ಸಂಚಾರ, ನಗರ ಸೌಂದರ್ಯೀಕರಣಗೊಳಿಸುವ ದೃಷ್ಟಿಯಿಂದ ಬೆಂಗಳೂರು-ಮೈಸೂರು ರಸ್ತೆ ವಿಭಜಕವನ್ನು ಹಂತ ಹಂತವಾಗಿ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಈ ಸಾಲಿನಲ್ಲೇ ಇದಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.ಗುತ್ತಲು ಕೆರೆ ಅಭಿವೃದ್ಧಿ, ಮೀನು ಮಾರುಕಟ್ಟೆ:
ಸಾರ್ವಜನಿಕರಿಗೆ ಹಾಗೂ ಮೀನು ಮಾರಾಟಗಾರರಿಗಾಗಿ ಮೀನುಗಾರಿಕೆ ಇಲಾಖೆ ಸಹಯೋಗದೊಂದಿಗೆ ನಗರ ವ್ಯಾಪ್ತಿಯೊಳಗೆ ೧ ಕೋಟಿ ರು. ವೆಚ್ಚದಲ್ಲಿ ಮೀನುಮಾರುಕಟ್ಟೆ ನಿರ್ಮಿಸಲಾಗುವುದು. ಅಮೃತ್ ಯೋಜನೆಯಡಿ ಯತ್ತಗದಹಳ್ಳಿ ರಸ್ತೆಯಲ್ಲಿರುವ ಗುತ್ತಲು ಕೆರೆಯನ್ನು ೪ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ. ಮಂಜೂರಾತಿಗಾಗಿ ಡಿಪಿಆರ್ ತಯಾರಿಸಲು ಕ್ರಮ ವಹಿಸಿರುವುದಾಗಿ ಹೇಳಿದರು.ಕ್ರಾಸ್ ಬ್ಯಾರಿಯರ್:
ನಗರದ ಎಸ್.ಡಿ.ಜಯರಾಂ ವೃತ್ತದಿಂದ ಶ್ರೀ ಕಾಳಿಕಾಂಬ ದೇವಸ್ಥಾನದವರೆಗೆ ೩೫ ಲಕ್‌ಷ ರು. ವೆಚ್ಚದಲ್ಲಿ ಕ್ರಾಸ್ ಬ್ಯಾರಿಯರ್ ಅಳವಡಿಸಲು ಉದ್ದೇಶಿಸಿದೆ. ನಗರಸಭಾ ವ್ಯಾಪ್ತಿಯ ಪತ್ರಕರ್ತರಿಗೆ ವೈದ್ಯಕೀಯ ಚಿಕಿತ್ಸಾ ವೆಚ್ಚದ ಸಹಾಯಧನಕ್ಕೆ ೫ ಲಕ್ಷ ರು., ಕಲಾವಿದರಿಗೆ ೩ ಲಕ್ಷ ರು. ಕಾಯ್ದಿರಿಸಲಾಗಿದೆ.ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುವ ಖಾಯಂ ಅಧಿಕಾರಿ ಮತ್ತು ಸಿಬ್ಬಂದಿಗೆ ವಸತಿಗೃಹ ನಿರ್ಮಾಣ, ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ಹೊಸ ಮನೆಗಳ ನಿರ್ಮಾಣ, ನಗರಸಭೆಯ ಅಭಿಲೇಖಾಲಯ ಶಾಖೆಯ ದಾಖಲೆಗಳ ಸುರಕ್ಷತೆಗಾಗಿ ಮತ್‌ತು ದಾಖಲೆಗಳ ಗಣಕಕೀಕರಣಕ್ಕೆ ಕ್ರಮ ವಹಿಸಿದ್ದು ಪೂರ್ಣ ಪ್ರಮಾಣದ ಅಭಿಲೇಖಾಲಯವಾಗಿ ಪರಿವರ್ತಿಸಲಾಗುವುದು. ನಗರದ ಪ್ರಮುಖ ರಸ್ತೆಗಳನ್ನು ನಿತ್ಯ ಸ್ವಚ್ಛಗೊಳಿಸಲು ಸ್ಟ್ರೀಟ್ ಸ್ವೀಪಿಂಗ್ ಯಂತ್ರವುಳ್ಳ ವಾಹನವನ್ನು ಖರೀದಿಸಲು ಉದ್ದೇಶಿಸಿರುವುದಾಗಿ ಹೇಳಿದರು.
ಸಭೆಯಲ್ಲಿ ಶಾಸಕ ಪಿ.ರವಿಕುಮಾರ್, ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ಆಯುಕ್ತೆ ಪಂಪಾಶ್ರೀ ಇದ್ದರು.