ಮಂಡ್ಯ ನಗರಸಭೆ: ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಬಿಸಿಎ ವರ್ಗಕ್ಕೆ ನಿಗದಿ

| Published : Aug 06 2024, 12:31 AM IST

ಮಂಡ್ಯ ನಗರಸಭೆ: ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಬಿಸಿಎ ವರ್ಗಕ್ಕೆ ನಿಗದಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಮಂಡ್ಯ ನಗರಸಭೆ ಅಧ್ಯಕ್ಷರಗಾದಿ ಪರಿಶಿಷ್ಟ ಜಾತಿಗೆ ಮೀಸಲಾಗಬಹುದೆಂಬ ಆಶಾಭಾವನೆ ಈ ಸಮುದಾಯಕ್ಕೆ ಇತ್ತು. ಅದರ ನಿರೀಕ್ಷೆಯಲ್ಲಿ ಎಲ್ಲರೂ ಇದ್ದರು. ಮತ್ತೊಮ್ಮೆ ಪ್ರಭಾವಿಗಳಿಗೆ ಮಣಿದಿರುವ ಜಿಲ್ಲಾ ಹಾಗೂ ರಾಜ್ಯ ಮುಖಂಡರು ಸಾಮಾನ್ಯ ವರ್ಗಕ್ಕೆ ಮೀಸಲು ತರುವಲ್ಲಿ ಸಫಲರಾಗಿದ್ದಾರೆ ಎನಿಸುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ನಗರಸಭೆ ಎರಡನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರ ಮೀಸಲು ನಿಗದಿಪಡಿಸಿ ಆದೇಶ ಹೊರಡಿಸಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಬಿಸಿಎ ವರ್ಗಕ್ಕೆ ನಿಗದಿಪಡಿಸಲಾಗಿದೆ.

ಮೊದಲ ಅವಧಿಯಲ್ಲೂ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾಗಿತ್ತು. ಈಗ ಮತ್ತೆ ಅದು ಪುನರಾವರ್ತನೆಯಾಗಲಿದೆ. ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿ ಎಚ್‌.ಎಸ್‌.ಮಂಜು, ಉಪಾಧ್ಯಕ್ಷರಾಗಿ ಇಷ್ರತ್‌ ಫಾತೀಮಾ ಆಯ್ಕೆಯಾಗಿದ್ದರು.

ಇದೀಗ ಒಂದು ವರ್ಷ ನಾಲ್ಕು ತಿಂಗಳ ಬಳಿಕ ಸರ್ಕಾರ ಮೀಸಲು ನಿಗದಿಪಡಿಸಿದ್ದು, ಮತ್ತೆ ಅದೇ ಮೀಸಲು ಮರುಕಳಿಸಿರುವುದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಇತರೆ ವರ್ಗದ ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ.

ನಾಲ್ಕಾರು ದಶಕಗಳಿಂದ ಪರಿಶಿಷ್ಟ ಜಾತಿಗೆ ಅಧ್ಯಕ್ಷ ಸ್ಥಾನ ಮೀಸಲಾಗಿಲ್ಲ. ಇದುವರೆಗೂ ಒಂದಿಬ್ಬರನ್ನು ಹೊರತುಪಡಿಸಿದರೆ ಈ ಸಮುದಾಯದಲ್ಲಿ ಮತ್ಯಾರಿಗೂ ಅಂತಹ ಅವಕಾಶಗಳು ದಕ್ಕಿಲ್ಲ. ಈ ಬಾರಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಮಂಡ್ಯ ನಗರಸಭೆ ಅಧ್ಯಕ್ಷರಗಾದಿ ಪರಿಶಿಷ್ಟ ಜಾತಿಗೆ ಮೀಸಲಾಗಬಹುದೆಂಬ ಆಶಾಭಾವನೆ ಈ ಸಮುದಾಯಕ್ಕೆ ಇತ್ತು. ಅದರ ನಿರೀಕ್ಷೆಯಲ್ಲಿ ಎಲ್ಲರೂ ಇದ್ದರು. ಮತ್ತೊಮ್ಮೆ ಪ್ರಭಾವಿಗಳಿಗೆ ಮಣಿದಿರುವ ಜಿಲ್ಲಾ ಹಾಗೂ ರಾಜ್ಯ ಮುಖಂಡರು ಸಾಮಾನ್ಯ ವರ್ಗಕ್ಕೆ ಮೀಸಲು ತರುವಲ್ಲಿ ಸಫಲರಾಗಿದ್ದಾರೆ ಎನಿಸುತ್ತಿದೆ ಎಂದು ಪರಿಶಿಷ್ಟ ಜಾತಿಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.6 ಪುರಸಭೆ, 1 ಪಟ್ಟಣ ಪಂಚಾಯ್ತಿ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿ

ಮಂಡ್ಯ:ಜಿಲ್ಲೆಯ 6 ಪುರಸಭೆ ಹಾಗೂ 1 ಪಟ್ಟಣ ಪಂಚಾಯ್ತಿಗಳ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ.

ಜಿಲ್ಲೆಯ ಮೂರು ಪುರಸಭೆ ಅಧ್ಯಕ್ಷ ಸ್ಥಾನಗಳು, ಎರಡು ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ಮಹಿಳೆ ಹಾಗೂ ನಾಲ್ಕು ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ಹಾಗೂ ಎರಡು ಸಾಮಾನ್ಯ ಮಹಿಳೆಗೆ ಮೀಸಲಾಗಿವೆ. ಉಳಿದಂತೆ ಒಂದು ಎಸ್ಸಿ, ಎಸ್ಟಿ ಮಹಿಳೆಗೆ ಮೀಸಲು ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಮದ್ದೂರು ಪುರಸಭೆ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಮಳವಳ್ಳಿ ಪುರಸಭೆ ಅಧ್ಯಕ್ಷ ಸ್ಥಾನ ಎಸ್ಸಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಪಾಂಡವಪುರ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಕೆ.ಆರ್.ಪೇಟೆ ಪುರಸಭೆ ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಶ್ರೀರಂಗಪಟ್ಟಣ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ನಾಗಮಂಗಲ ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಬೆಳ್ಳೂರು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಬಿಸಿಎ ವರ್ಗಕ್ಕೆ ಮೀಸಲು ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.