ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಗರಸಭೆ ವ್ಯಾಪ್ತಿಯಲ್ಲಿ ಕಂಡು ಬರುವ ಸಾರ್ವಜನಿಕ ದೂರುಗಳಿಗೆ ಸ್ಪಂದಿಸಲು ಅನುಕೂಲವಾಗುವಂತೆ ಹಾಗೂ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ನಗರಸಭೆಯಿಂದ ಸಹಾಯವಾಣಿಯೊಂದನ್ನು ತೆರೆಯಲಾಗಿದೆ.ಒಳಚರಂಡಿ, ಬೀದಿ ದೀಪಗಳ ದುರಸ್ತಿ, ಇ-ಆಸ್ತಿ ವಿಳಂಬ, ಬೀದಿನಾಯಿಗಳ ಹಾವಳಿ, ಕಸದ ಸಮಸ್ಯೆ ಸೇರಿದಂತೆ ಇತರೆ ದೂರುಗಳಿದ್ದಲ್ಲಿ ಅವುಗಳನ್ನು ಸಾರ್ವಜನಿಕರು ೯೩೫೩೪೬೯೪೨೨ ನಂಬರ್‌ಗೆ ಕರೆ ಮಾಡಿ ದಾಖಲಿಸಬಹುದು. ಆ ಸಮಸ್ಯೆಗಳನ್ನು ನಗರಸಭೆ ಅಧಿಕಾರಿಗಳು ಪರಿಗಣಿಸಿ ಆದ್ಯತೆಯ ಮೇರೆಗೆ ಪರಿಗಣಿಸಿ ಶೀಘ್ರ ಪರಿಹಾರ ಸೂಚಿಸುವರು.
ನಿತ್ಯ ಸಾರ್ವಜನಿಕರು ಸಮಸ್ಯೆಗಳನ್ನು ಹೊತ್ತು ನಗರಸಭೆಗೆ ತರುತ್ತಿದ್ದಾರೆ. ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕೆಂಬುದು ಜನರಿಗೆ ಅರಿವಿರುವುದಿಲ್ಲ. ಸುಮ್ಮನೆ ಅಲೆದಾಡುತ್ತಿರುತ್ತಾರೆ. ಅವರಿವರನ್ನು ಕೇಳುತ್ತಿರುತ್ತಾರೆ. ಜನರ ಈ ಅಲೆದಾಟವನ್ನು ತಪ್ಪಿಸುವ ಸಲುವಾಗಿ ಸಹಾಯವಾಣಿ ತೆರೆಯಲಾಗಿದೆ ಎಂದು ನಗರಸಭೆ ಆಯುಕ್ತೆ ಯು.ಪಿ.ಪಂಪಾಶ್ರೀ ತಿಳಿಸಿದ್ದಾರೆ.ಬೀದಿನಾಯಿಗಳ ಹಾವಳಿ, ಇ-ಆಸ್ತಿ ವಿಳಂಬ, ಒಳ ಚರಂಡಿ, ಖಾತೆಗಳ ವಿಳಂಬ, ಬೀದಿ ದೀಪಗಳ ದುರಸ್ತಿ, ಕಸದ ಸಮಸ್ಯೆ ಸೇರಿದಂತೆ ನಿತ್ಯ ಹಲವಾರು ದೂರುಗಳು ಬರುತ್ತಿವೆ. ಅವೆಲ್ಲವನ್ನೂ ಏಕಕಾಲಕ್ಕೆ ಪರಿಹರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಯಾರಿಗೆ ಸಮಸ್ಯೆಗಳು ತಲುಪಬೇಕೋ ಅವರಿಗೆ ಸಮಸ್ಯೆಗಳನ್ನು ಸರಿಯಾದ ಸಮಯದಲ್ಲಿ ತಲುಪಿಸಲಾಗುತ್ತಿಲ್ಲ. ಸಹಾಯವಾಣಿಯಲ್ಲಿ ಎಲ್ಲಾ ರೀತಿಯ ದೂರುಗಳು ದಾಖಲಾಗುವುದರಿಂದ ಅವುಗಳನ್ನು ನಿತ್ಯ ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳು, ನೌಕರರು, ಸಿಬ್ಬಂದಿಗೆ ಹಂಚಿಕೆ ಮಾಡಲಾಗುವುದು. ಇದರಿಂದ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವುದಕ್ಕೆ ಅವಕಾಶ ಸಿಗಲಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಸ್ವಚ್ಛತೆಗೆ ಎಷ್ಟೇ ಆದ್ಯತೆ ನೀಡಿದ್ದರೂ ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದು ಮುಂದುವರೆದಿದೆ. ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದ್ದರೂ ನಾಯಿಗಳ ಹಾವಳಿಯೂ ಹೆಚ್ಚಿದೆ. ಇ-ಆಸ್ತಿಗಳಿಗೆ ನೀಡುವ ನಮೂನೆ-೩ ವಿಳಂಬವಾಗುತ್ತಿರುವುದು ಸೇರಿದಂತೆ ಹಲವಾರು ದೂರುಗಳು ಜನರಿಂದ ಕೇಳಿಬರುತ್ತಿವೆ. ನಗರಸಭೆಯಲ್ಲಿರುವ ನೌಕರರನ್ನು ಬಳಸಿಕೊಂಡೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸಬೇಕಿದೆ. ಅದಕ್ಕಾಗಿ ಆದ್ಯತೆಯ ಮೇರೆಗೆ ಸಮಸ್ಯೆಗಳನ್ನು ಪರಿಗಣಿಸಿ ಪರಿಹಾರಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶವನ್ನು ಹೊಂದಲಾಗಿದೆ.ಈ ಸಹಾಯವಾಣಿಯಲ್ಲಿ ದೂರು ದಾಖಲಾದ ಬಳಿಕ ಅವುಗಳ ಬಗ್ಗೆ ತ್ವರಿತವಾಗಿ ಗಮನಹರಿಸಲಾಗುವುದು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಲಾಗುವುದಿಲ್ಲ. ದೂರುಗಳ ಕುರಿತು ನಿರ್ಲಕ್ಷ್ಯ ವಹಿಸುವುದು ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳು-ನೌಕರರ ವಿರುದ್ಧ ಕ್ರಮ ಜರುಗಿಸಲಾಗುವುದು.-ಡಾ.ಕೆ.ಕುಮಾರ, ಆಡಳಿತಾಧಿಕಾರಿ, ನಗರಸಭೆ, ಮಂಡ್ಯಸಾರ್ವಜನಿಕರಿಂದ ಬರುವ ದೂರುಗಳಿಗೆ ಶೀಘ್ರ ಸ್ಪಂದನೆ ದೊರಕಿಸಬೇಕೆಂಬ ಉದ್ದೇಶದಿಂದ ಸಹಾಯವಾಣಿಯನ್ನು ತೆರೆಯಲಾಗಿದೆ. ಹಿಂದೆ ಬೀದಿನಾಯಿ ಹಾವಳಿ ಸಂಬಂಧಿತ ಸಮಸ್ಯೆಗಳಿಗೆ ಸೀಮಿತವಾಗಿದ್ದ ಸಹಾಯವಾಣಿಯನ್ನು ಎಲ್ಲಾ ಸಮಸ್ಯೆಗಳಿಗೆ ವಿಸ್ತರಿಸಲಾಗಿದೆ. ಇಲ್ಲಿ ದಾಖಲಾಗುವ ದೂರುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಸಮಸ್ಯೆಗಳಿಗೆ ಪರಿಹಾರ ದೊರಕಿಸಲಾಗುವುದು.
- ಯು.ಪಿ.ಪಂಪಾಶ್ರೀ, ಆಯುಕ್ತರು, ನಗರಸಭೆ;Resize=(128,128))
;Resize=(128,128))
;Resize=(128,128))
;Resize=(128,128))