ಮಂಡ್ಯ ನಗರಸಭೆ: ವಾರಕ್ಕೊಂದು ವಾರ್ಡ್ ಇ-ಖಾತಾ ಅಭಿಯಾನ

| Published : Aug 05 2025, 11:45 PM IST

ಸಾರಾಂಶ

ಮಂಡ್ಯ ನಗರಸಭಾ ವ್ಯಾಪ್ತಿಯಲ್ಲಿರುವ ಕಟ್ಟಡಗಳು ಮತ್ತು ನಿವೇಶನ ಹೊಂದಿರುವ ಆಸ್ತಿಯ ಮಾಲೀಕರು ಅವಶ್ಯ ದಾಖಲಾತಿಗಳೊಂದಿಗೆ ಇ-ಸ್ವತ್ತು ಪಡೆಯಲು ನಗರದ ಎಲ್ಲಾ ವಾರ್ಡ್‌ಗಳಲ್ಲೂ ವಾರಕ್ಕೊಂದು ವಾರ್ಡ್ ಇ-ಖಾತಾ ಅಭಿಯಾನ ಆರಂಭಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರಸಭಾ ವ್ಯಾಪ್ತಿಯಲ್ಲಿರುವ ಕಟ್ಟಡಗಳು ಮತ್ತು ನಿವೇಶನ ಹೊಂದಿರುವ ಆಸ್ತಿಯ ಮಾಲೀಕರು ಅವಶ್ಯ ದಾಖಲಾತಿಗಳೊಂದಿಗೆ ಇ-ಸ್ವತ್ತು ಪಡೆಯಲು ನಗರದ ಎಲ್ಲಾ ವಾರ್ಡ್‌ಗಳಲ್ಲೂ ವಾರಕ್ಕೊಂದು ವಾರ್ಡ್ ಇ-ಖಾತಾ ಅಭಿಯಾನ ಆರಂಭಿಸಿದೆ.

ಮಂಗಳವಾರದಿಂದ ಮೂರು ತಂಡಗಳನ್ನು ರಚಿಸಿಕೊಂಡು ನಗರದ ತಾವರೆಗೆರೆ, ಕುವೆಂಪುನಗರ, ಜೈನರ ಬೀದಿಯಲ್ಲಿ ಅಭಿಯಾನ ಆರಂಭಿಸಿದೆ. ಈ ತಂಡದಲ್ಲಿ ಕಂದಾಯ ನಿರೀಕ್ಷಕ, ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರಿದ್ದು, ಇವರು ಸ್ಥಳದಲ್ಲೇ ಆಸ್ತಿ ಮಾಲೀಕರಿಂದ ಅವಶ್ಯ ದಾಖಲೆಗಳನ್ನು ಪಡೆದು ಅವರಿಂದ ಆಸ್ತಿ ತೆರಿಗೆಯನ್ನು ೨೦೨೫-೨೬ನೇ ಸಾಲಿನವರೆಗೆ ಪಾವತಿಸಿಕೊಂಡು ಅಧಿಕೃತ ಸ್ವತ್ತುಗಳಿಗೆ ರಿಜಿಸ್ಟರ್-ಎ ಯಂತೆ ನಮೂನೆ-೩ ಮತ್ತು ಅನಧಿಕೃತ ಸ್ವತ್ತುಗಳಿಗೆ ರಿಜಿಸ್ಟರ್-ಬಿ ಯ ನಮೂನೆ-೩ನ್ನು ಸ್ಥಳದಲ್ಲೇ ವಿತರಿಸಲು ಕ್ರಮ ವಹಿಸಲಾಗಿದೆ.

ಪೌರಾಡಳಿತ ನಿರ್ದೇಶನಾಲಯದನ್ವಯ ನಗರಸಭೆ ವ್ಯಾಪ್ತಿಯ ೩೫ ವಾರ್ಡ್‌ಗಳಲ್ಲಿರುವ ಎಲ್ಲಾ ರೀತಿಯ ಕಟ್ಟಡ ಮತ್ತು ನಿವೇಶನಗಳಿಗೆ ಆಸ್ತಿ ತೆರಿಗೆ ನಿರ್ಧರಣೆಗೊಳಿಸಿ ಆಸ್ತಿ ತೆರಿಗೆಯನ್ನು ಪಾವತಿಕೊಳ್ಳಲು ಸೂಚಿಸಿರುವುದರಿಂದ ವಾರ್ಡ್‌ಗೊಂದು ಇ-ಖಾತಾ ಅಭಿಯಾನ ಆರಂಭಿಸಿದೆ.

ಈ ಅಭಿಯಾನದ ವೇಳೆ ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಹಾಗೂ ಅನಧಿಕೃತ ಸ್ವತ್ತುಗಳಿಗೆ ಬಿ-ಖಾತೆ ಮಾಡಿಸದವರನ್ನು ಮನೆ ಮನೆಗೆ ತೆರಳಿ ಗುರುತಿಸಿ ಆಸ್ತಿ ತೆರಿಗೆ ಪಾವತಿಗೆ ಕ್ರಮ ವಹಿಸಲಾಗುವುದು. ಆಸ್ತಿಗಳನ್ನು ಗಣಕೀಕರಣಗೊಳಿಸಿಕೊಳ್ಳುವವರು ಅಭಿಯಾನ ನಡೆಯುವ ಸ್ಥಳಕ್ಕೆ ಆಗಮಿಸಿ ಅಗತ್ಯ ದಾಖಲೆಗಳೊಂದಿಗೆ ನಮೂನೆ-೩ ಮತ್ತು ರಿಜಿಸ್ಟರ್ ಬಿನಲ್ಲಿ ನಮೂನೆ-೩ ದಾಖಲಿಸಿ ಪಡೆದುಕೊಳ್ಳಬಹುದು ಎಂದು ಪೌರಾಯುಕ್ತೆ ಯು.ಪಿ.ಪಂಪಾಶ್ರೀ ಮತ್ತು ಕಂದಾಯ ಅಧಿಕಾರಿ ರಾಜಶೇಖರ್ ಮನವಿ ಮಾಡಿದ್ದಾರೆ.

ನಿಗದಿತ ಅವಧಿಯೊಳಗೆ ಆಸ್ತಿಗಳ ಗಣಕೀಕರಣ ಮಾಡಿಸಿಕೊಂಡು ನಮೂನೆ ೩ ಮತ್ತು ನಮೂನೆ-೩ಎಗಳನ್ನು ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಸಂಬಂಧಿಸಿದ ಆಸ್ತಿ ಮಾಲೀಕರಿಗೆ ನಿಯಮಾನುಸಾರ ಪರಿಶೀಲಿಸಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.