ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್ ಅವರು ಕೈಗೊಳ್ಳುತ್ತಿರುವ ಏಕಪಕ್ಷೀಯ ನಿರ್ಧಾರಗಳಿಂದ ಕಾರ್ಖಾನೆ ನಷ್ಟದ ಹಾದಿಯಲ್ಲಿ ಮುಂದುವರೆದಿದ್ದು, ತಕ್ಷಣವೇ ಇಬ್ಬರನ್ನು ವಜಾಗೊಳಿಸುವಂತೆ ಶಿವಕುಮಾರ್ ಅಗ್ರಹ.
ಮುಖ್ಯಾಂಶ
- ಸರ್ವಾಧಿಕಾರಿತನ ಏಕ ಪಕ್ಷಿಯ ಧೋರಣೆ- ಕಾರ್ಖಾನೆ ನಷ್ಟದ ಹಾದಿಯಲ್ಲಿ ಮುಂದುವರಿಕೆ- ಬಾಯ್ಲರ್ ಹೌಸ್ ಟೆಂಡರ್ ತಡೆ ಹಿಡಿಯುವಂತೆ ಮುಖ್ಯಮಂತ್ರಿಗೆ ಒತ್ತಾಯ
- ಪ್ರಮುಖ ತಾಂತ್ರಿಕ ಹುದ್ದೆಗಳಲ್ಲಿ ಹೊರಗುತ್ತಿಗೆ- ಕಂಪನಿಯ ಆರ್ಥಿಕ ಪ್ರಗತಿಗೆ ಮಾರಕ ನಿರ್ಧಾರ
- ಈ ಘಟಕದ ಪ್ರಾಯೋಗಿಕ ಪರೀಕ್ಷೆ ಇದುವರೆಗೂ ನಡೆದಿಲ್ಲ- ಅನುಪಯುಕ್ತ ವಸ್ತುಗಳ ಮಾರಾಟದಲ್ಲಿ ಅಕ್ರಮ
- ಸಮಗ್ರ ತನಿಖೆ ನಡೆಸುವಂತೆ ಒತ್ತಾಯಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್ ಅವರು ಕೈಗೊಳ್ಳುತ್ತಿರುವ ಏಕಪಕ್ಷೀಯ ನಿರ್ಧಾರಗಳಿಂದ ಕಾರ್ಖಾನೆ ನಷ್ಟದ ಹಾದಿಯಲ್ಲಿ ಮುಂದುವರೆದಿದ್ದು, ತಕ್ಷಣವೇ ಇಬ್ಬರನ್ನು ವಜಾಗೊಳಿಸುವಂತೆ ನಗರಸಭೆ ಮಾಜಿ ಸದಸ್ಯ ಶಿವಕುಮಾರ್ ಅಗ್ರಹಿಸಿದರು.ಕಾರ್ಖಾನೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರನ್ನು ಹೊರತು ಪಡಿಸಿದಂತೆ ಉಳಿದವರೆಲ್ಲರೂ ಹೊರಗುತ್ತಿಗೆ ಅಧಿಕಾರಿಗಳು, ಸಿಬ್ಬಂದಿಯೇ ಆಗಿದ್ದಾರೆ. ಆರ್ಥಿಕ ಸಹಾಯಕ, ಎಸ್ಟೇಟ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಕೇನ್ ಸೂಪರಿಂಟೆಂಡೆಂಟ್ ಸೇರಿದಂತೆ ಪ್ರಮುಖ ತಾಂತ್ರಿಕ ಹುದ್ದೆಗಳಲ್ಲಿ ಹೊರಗುತ್ತಿಗೆ ಮತ್ತು ನಿವೃತ್ತ ನೌಕರರೇ ಕಾರ್ಯನಿರ್ವಹಿಸುತ್ತಿದ್ದಾರೆ. ಇವರುಗಳಿಗೆಲ್ಲ ಇಷ್ಟ ಬಂದಂತೆ ವೇತನವನ್ನು ಹೆಚ್ಚಳ ಮಾಡಿ ನೀಡಲಾಗುತ್ತಿದೆ. ಇದು ಕಂಪನಿಯ ಆರ್ಥಿಕ ಪ್ರಗತಿಗೆ ಮಾರಕವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆ 3.50 ಲಕ್ಷ ಟನ್ ಕಬ್ಬನ್ನು ಒಪ್ಪಿಗೆ ಮಾಡಿಕೊಂಡಿದೆ. ಇದುವರೆಗೆ 90 ದಿನಗಳ ಕಾಲ ಕಬ್ಬು ನುರಿಸುವ ಕಾರ್ಯಾಚರಣೆ ಕಾರ್ಖಾನೆಯಲ್ಲಿ ನಡೆದಿದೆ. ನಿತ್ಯ 3500 ಕಬ್ಬು ನುರಿಸಿದ್ದರೆ ಈ ವೇಳೆಗೆ 3,15,000 ಟನ್ ಕಬ್ಬನ್ನು ಅರೆಯಬೇಕಿತ್ತು. ಆದರೆ, ಈವರೆಗೆ 1,72,485 ಟನ್ ಕಬ್ಬನ್ನು ಮಾತ್ರ ಅರೆದಿರುವುದು ಕಾರ್ಖಾನೆ ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.ಪ್ರಸ್ತುತ ಮೈಷುಗರ್ ಕಾರ್ಖಾನೆಯಲ್ಲಿ ಬಾಯ್ಲಿಂಗ್ ಹೌಸ್ ಅಳವಡಿಕೆಗೆ ಕರೆದಿರುವ ಟೆಂಡರ್ ಅನ್ನು ತಡೆ ಹಿಡಿಯುವಂತೆ ಒತ್ತಾಯಿಸಿರುವ ಶಿವಕುಮಾರ್ ಅವರು, 2017-18ನೇ ಸಾಲಿನಲ್ಲಿ 57 ಕೋಟಿ ರು. ವೆಚ್ಚದಲ್ಲಿ 5,000 ಟಿಸಿಡಿ ಸಾಮರ್ಥ್ಯದ ಕಬ್ಬು ಅರೆಯುವ ಘಟಕವನ್ನು ಸ್ಥಾಪಿಸಲಾಗಿದೆ. ಈ ಘಟಕದ ಪ್ರಾಯೋಗಿಕ ಪರೀಕ್ಷೆ ಇದುವರೆಗೂ ನಡೆದಿಲ್ಲ. ಹೀಗಿರುವಾಗ ಪ್ರಸ್ತುತ ಮತ್ತೊಮ್ಮೆ ಬಾಯ್ಲಿರ್ ಹೌಸ್ ಯಂತ್ರೋಪಕರಣಗಳ ಅಳವಡಿಕೆಗೆ ಇ-ಟೆಂಡರ್ ಕರೆದಿರುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದರು.
ಈಗಾಗಲೇ ಮೈಷುಗರ್ ಸ್ವತ್ತಿನ ಮಾರಾಟಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದ ಅನುಮೋದನೆ ಪಡೆಯುವುದು ಅಗತ್ಯವಿದ್ದರೂ ಮೈಷುಗರ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಬಿ ಮಿಲ್ ಸೇರಿದಂತೆ ಕಾರ್ಖಾನೆ ಅನುಪಯುಕ್ತ ವಸ್ತುಗಳನ್ನು ಆಡಳಿತ ಮಂಡಳಿ ನಿರ್ಣಯ ಕೈಗೊಂಡಂತೆ ಮಾರಾಟ ಮಾಡುವ ಮೂಲಕ ಅಕ್ರಮ ಎಸೆಗಲಾಗಿದೆ. ಈ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸರ್ಕಾರದ ಕಾರ್ಯದರ್ಶಿಗಳು ಪತ್ರ ಬರೆದಿದ್ದರೂ ಅದಕ್ಕೆ ಉತ್ತರ ನೀಡದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.ಬಿ ಮಿಲ್ ಸೇರಿದಂತೆ ಕಾರ್ಖಾನೆಯ ಅನುಪಯುಕ್ತ ವಸ್ತುಗಳ ಮಾರಾಟದಲ್ಲಿ ನಿಯಮಾನುಸಾರ ಯಾವುದೇ ಕ್ರಮ ವಹಿಸದೆ ಕಡಿಮೆ ಬೆಲೆಗೆ ಮಾರಾಟ ಮಾಡಿ ಕಾರ್ಖಾನೆಗೆ ಹಾರ್ದಿಕ ನಷ್ಟ ಉಂಟಾಗುವಂತೆ ಮಾಡಿದ್ದಾರೆ. ಇದರಲ್ಲಿ ಸಾಕಷ್ಟು ಅಕ್ರಮ ಅವ್ಯವಹಾರಗಳು ನಡೆದಿರುವ ಅನುಮಾನಗಳು ವ್ಯಕ್ತವಾಗುತ್ತಿರುವುದರಿಂದ ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದರು.
ನಿವೃತ್ತ ನೌಕರರನ್ನು ಕಾರ್ಖಾನೆಯ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದು ನಿಯಮ ಬಾಹಿರವಾಗಿದ್ದರೂ ಅದನ್ನು ಕಡೆಗಣಿಸಿ ನೇಮಕ ಮಾಡಿಕೊಳ್ಳುವುದಕ್ಕೆ ಅಧ್ಯಕ್ಷರಿಗೆ ಅಧಿಕಾರ ನೀಡಿದವರು ಯಾರು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಾರ್ಖಾನೆಗಳಿಗೆ ನಡೆದಿರುವ ಎಲ್ಲಾ ಬೆಳವಣಿಗೆಗಳು ತಿಳಿದಿದ್ದರೂ ಅಧ್ಯಕ್ಷರ ರಕ್ಷಣೆಗೆ ನಿಂತಿರುವುದೇಕೆ, ಕಾರ್ಖಾನೆಯಲ್ಲಿ ನಡೆದಿರುವ ಅಕ್ರಮ ಹವ್ಯವಹಾರಗಳ ಕುರಿತ ತನಿಖೆ ಮುಕ್ತಾಯಗೊಂಡು 90 ದಿನಗಳು ಕಳೆದರೂ ಅದನ್ನು ಬಿಡುಗಡೆ ಮಾಡದೆ ತಡೆ ಹಿಡಿದಿರುವುದೇಕೆ ಎಂದು ಪ್ರಶ್ನಿಸಿದರು.ಗೋಷ್ಠಿಯಲ್ಲಿ ಪ್ರಸನ್ನ, ಅನಿಲ್ ಕುಮಾರ್, ಹರೀಶ, ಸುನಿಲ್, ಬೊಮ್ಮೇಶ್ ಇದ್ದರು.