ನೃತ್ಯ ಅಭ್ಯಾಸಕ್ಕೆ ಬರುವ ಹಲವಾರು ಮಕ್ಕಳು ಅದ್ಭುತವಾಗಿ ಪ್ರತಿಭೆಯನ್ನು ಪ್ರದರ್ಶಿಸುವ ಹೊತ್ತಿನಲ್ಲೇ ನೃತ್ಯದಿಂದ ದೂರವಾಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಕೆಲವು ವರ್ಷಗಳ ಕಾಲ ಅದ್ಭುತ ಅಭಿನಯದೊಂದಿಗೆ ಗಮನ ಸೆಳೆಯುವ ಮಕ್ಕಳು ಇದ್ದಕ್ಕಿದ್ದಂತೆ ನೃತ್ಯದಿಂದ ದೂರವಾದಾಗ ಪೋಷಕರು ಕ್ಷುಲ್ಲಕ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಗುರುದೇವ ಅಕಾಡೆಮಿ ಫೈನಲ್ಸ್ ವತಿಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ ಕಲಾ ಮಂದಿರದಲ್ಲಿ ನಡೆದ ಗುರು ದೇವೋತ್ಸವ ಕಾರ್ಯಕ್ರಮ ಭಾನುವಾರ ಗುರುದೇವ ಪಲ್ಲವ ನೃತ್ಯೋತ್ಸವದೊಂದಿಗೆ ಅಂತಿಮ ತೆರೆ ಕಂಡಿತು.ಗುರುದೇವ ಅಕಾಡೆಮಿ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿಭಿನ್ನ ನೃತ್ಯರೂಪಕಗಳು ಪ್ರೇಕ್ಷಕರ ಮನಸೂರೆಗೊಂಡವು. ಭರತನಾಟ್ಯದ ಹಾವ ಭಾವ, ಸಂಗೀತ, ಹಾಡು, ತಾಳ ಮೇಳಕ್ಕೆ ತಕ್ಕಂತೆ ಕಲಾವಿದರ ಭಾವಾಭಿನಯ ನೋಡುಗರನ್ನು ಆಕರ್ಷಿಸಿದರೆ, ರಂಗುರಂಗಿನ ಬೆಳಕಿನ ವೈಭವ ಮೆರುಗು ನೀಡಿತು.
ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಕುಶಾಲನಗರದ ಅಕಾಡೆಮಿಯ ವಿದ್ಯಾರ್ಥಿಗಳು ಗುರುದೇವ ಪಲ್ಲವ ಹೆಸರಿನಲ್ಲಿ ಶಾಸ್ತ್ರೀಯ ನೃತ್ಯೋತ್ಸವ ಪ್ರದರ್ಶನ ನೀಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಗುರುದೇವ ಅಕಾಡೆಮಿಯ ನಿರ್ದೇಶಕಿ ಡಾ. ಚೇತನಾ ರಾಧಾಕೃಷ್ಣ ನೇತೃತ್ವದಲ್ಲಿ ವಿದ್ಯಾರ್ಥಿಗಳು ಭರತನಾಟ್ಯದ ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ ಅಭಿನಯವನ್ನು ಲೀಲಾಜಾಲವಾಗಿ ಪ್ರದರ್ಶಿಸಿದರು. ತಮ್ಮ ಅಭಿನಯ ಚಾತುರ್ಯ, ಮುದ್ರೆಗಳು ಹಾಗೂ ವಿವಿಧ ಭಂಗಿಗಳ ಪ್ರತಿಭೆಯನ್ನು ಮೋಹಕವಾಗಿ ಪ್ರದರ್ಶಿಸುವ ಮೂಲಕ ಗುರುಗಳ ಮೆಚ್ಚುಗೆಗೂ ಪಾತ್ರರಾದರು.ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ್ದ ನೃತ್ಯ ಅಭಿನಯವನ್ನು ಕಂಡು ಗುರುಗಳಾದ ಡಾ. ಚೇತನಾ ರಾಧಾಕೃಷ್ಣ ಅವರು ಪ್ರಶಂಸೆ ನೀಡುವ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರವನ್ನು ವಿತರಿಸಿದರು.
ಭರತನಾಟ್ಯದ ಭಾವಾಭಿನಯಕ್ಕೆ ತಕ್ಕಂತೆ ಬೆಳಕಿನ ವಿನ್ಯಾಸ ಮಾಡಿದ್ದ ಎಂ.ವಿ.ರಾಜನ್ ಎಲ್ಲರ ಪ್ರಶಂಸೆಗೆ ಪಾತ್ರರಾದರು.ಕಾರ್ಯಕ್ರಮದಲ್ಲಿ ಮೈಸೂರಿನ ಭರತನಾಟ್ಯ ಕಲಾವಿದರು ವರ್ಣೋತ್ಸವ ನೃತ್ಯ ಪ್ರದರ್ಶನ ನೀಡಿ ರಂಜಿಸಿದರು. ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯ ಅಧ್ಯಕ್ಷ ಪ್ರತಿಭಾಂಜಲಿ ಡೇವಿಡ್ ಅವರಿಗೆ ಗುರುದೇವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ ಬಿ ಜಯಪ್ರಕಾಶಗೌಡ, ವಿಶ್ರಾಂತ ಪ್ರಾಧ್ಯಾಪಕ ಎಸ್ ಬಿ ಶಂಕರಗೌಡ , ಗುರುದೇವ ಅಕಾಡೆಮಿ ನಿರ್ದೇಶಕಿ , ಡಾ.ಚೇತನಾ ರಾಧಾಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ರಾಧಾಕೃಷ್ಣ ಉಪಸ್ಥಿತರಿದ್ದರು.ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ: ಡಾ ಚೇತನಾ
ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ ಹಾಗೂ ಸುತ್ತಮುತ್ತಲ ಗ್ರಾಮಾಂತರ ಪ್ರದೇಶಗಳಿಂದ ನೃತ್ಯಬ್ಯಾಸಕ್ಕೆ ಬರುವ ಮಕ್ಕಳಲ್ಲಿ ಉತ್ತಮ ಪ್ರತಿಭೆಯಿದೆ. ಆ ಮಕ್ಕಳಲ್ಲಿ ಶ್ರದ್ಧೆ ಇದೆ. ನೃತ್ಯ ಕಲಿಯಬೇಕೆಂಬ ಆಸಕ್ತಿಯೂ ಇದೆ. ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ನಗರದ ಕಲಾಮಂದಿರದಲ್ಲಿ ನಡೆದ ಗುರುದೇವೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೃತ್ಯ ಅಭ್ಯಾಸಕ್ಕೆ ಬರುವ ಹಲವಾರು ಮಕ್ಕಳು ಅದ್ಭುತವಾಗಿ ಪ್ರತಿಭೆಯನ್ನು ಪ್ರದರ್ಶಿಸುವ ಹೊತ್ತಿನಲ್ಲೇ ನೃತ್ಯದಿಂದ ದೂರವಾಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಕೆಲವು ವರ್ಷಗಳ ಕಾಲ ಅದ್ಭುತ ಅಭಿನಯದೊಂದಿಗೆ ಗಮನ ಸೆಳೆಯುವ ಮಕ್ಕಳು ಇದ್ದಕ್ಕಿದ್ದಂತೆ ನೃತ್ಯದಿಂದ ದೂರವಾದಾಗ ಪೋಷಕರು ಕ್ಷುಲ್ಲಕ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕಾದ್ದು ಪೋಷಕರ ಕರ್ತವ್ಯ. ಕಲೆಯನ್ನು ಕಡೆಗಣಿಸದೆ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.