ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಸಾವಯವ ಕೃಷಿ, ಸಾವಯವ ಗೊಬ್ಬರ, ಸಾವಯವ ಬೆಲ್ಲ ಎಂಬ ಹೆಸರುಗಳನ್ನು ಕೇಳಿದ್ದೇವೆ. ಇದೇನಿದು ‘ಸಾವಯವ ಹಾಲು’ ಎನ್ನುತ್ತಿದ್ದೀರಾ. ಇದು ಹಾಲಿನಲ್ಲಿರುವ ಪೋಷಕಾಂಶಗಳನ್ನು ಕಾಪಾಡುವ ವಿಧಾನ. ಗಾಳಿ-ಬೆಳಕು ಸೋಂಕಿಲ್ಲದೆ ಹಸುವಿನ ಕೆಚ್ಚಲಿನಿಂದ ಬಂದ ಹಾಲನ್ನು ಫಾರ್ಮ್‌ನಲ್ಲಿ ಶೀತಲೀಕರಿಸಿ ನೇರವಾಗಿ ಗ್ರಾಹಕರ ಮನೆಗೆ ತಲುಪುವುದೇ ‘ಸಾವಯವ ಹಾಲು’.

ಮಂಡ್ಯದ ಫಾರ್ಮ್ ಕನೆಕ್ಟ್ ಸಂಸ್ಥೆಯವರು ಇಂತಹದೊಂದು ಹೊಸ ರೂಪದ ಹಾಲಿಗೆ ಮೊದಲ ಬಾರಿಗೆ ನಾಂದಿ ಹಾಡಿದ್ದಾರೆ. ಫಾರ್ಮ್ ಕನೆಕ್ಟ್‌ನವರು ನಗರದ ವಿಕಸನ ಸಂಸ್ಥೆಯವರ ಜೊತೆಗೂಡಿ ಅಮೃತ ಸಮಾನವಾದ ಹಾಲನ್ನು ಪರಿಶುದ್ಧತೆಯ ಜೊತೆಗೆ ಪೋಷಕಾಂಶಗಳೊಂದಿಗೆ ಗ್ರಾಹಕರಿಗೆ ತಲುಸುವ ಧ್ಯೇಯವನ್ನು ಗುರಿಯಾಗಿಸಿಕೊಂಡಿದ್ದಾರೆ.

ರೈತರ ನೋಂದಣಿ:


ಫಾರ್ಮ್ ಕನೆಕ್ಟ್ ಕಂಪನಿಗೆ ಹಾಲು ಪೂರೈಸುವ ರೈತರು ಕನಿಷ್ಠ ೪ ರಿಂದ ೫ ಎಕರೆ ಭೂಮಿಯನ್ನು ಹೊಂದಿರಬೇಕು. ೨೦ ರಿಂದ ೨೫ ಹಸುಗಳನ್ನು ಸಾಕುವವರಾಗಿರಬೇಕು. ಹಸುಗಳನ್ನು ಒಂದೇ ಕಡೆ ಕಟ್ಟುವಂತಿಲ್ಲ. ಅವುಗಳು ವಿಶಾಲ ಜಾಗದಲ್ಲಿ ಸ್ವತಂತ್ರವಾಗಿ ಮೇಯಬೇಕು. ಇಂತಹ ರೈತರನ್ನು ಕಂಪನಿಯವರು ನೋಂದಾಯಿಸಿಕೊಂಡು ಹಸುಗಳ ಸಾಕಣೆ, ನಿರ್ವಹಣೆ ಬಗ್ಗೆ ಅವರಿಗೆ ತರಬೇತಿಯನ್ನು ನೀಡುವರು.

ಹಸುಗಳಿಗೆ ಹಸಿ ಮೇವು, ಒಣಮೇವು, ಮರಮೇವು, ರಸ ಮೇವು, ಕಡ್ಲೆ ಹಿಂಡಿ, ಜೋಳದ ನುಚ್ಚು ಸೇರಿದಂತೆ ೮ ರಿಂದ ೧೦ ಮಾದರಿಯ ಮೇವನ್ನು ಯಾವ ಪ್ರಮಾಣದಲ್ಲಿ ಹೇಗೆ ನೀಡಬೇಕು ಎಂಬುದನ್ನು ತಿಳಿಸಿಕೊಡುವರು. ಅದೇ ಮಾದರಿಯಲ್ಲಿ ನಿತ್ಯವೂ ಹಸುಗಳಿಗೆ ನೀಡುವ ಮೂಲಕ ಪೌಷ್ಟಿಕಾಂಶಯುಕ್ತ ಹಾಲು ಉತ್ಪಾದನೆಗೆ ಮಹತ್ವ ನೀಡಲಾಗುತ್ತದೆ.

ಗಾಳಿ-ಬೆಳಕಿನ ಸೋಂಕಿಲ್ಲ:

ಹಾಲನ್ನು ಕರೆಯುವ ವಿಧಾನದಲ್ಲೂ ಹೆಚ್ಚಿನ ಜಾಗೃತಿ ವಹಿಸಲಾಗುತ್ತದೆ. ಹಸುವಿನ ಕೆಚ್ಚಲಿನಿಂದ ಹಾಲು ಗಾಳಿ-ಬೆಳಕಿನ ಸೋಂಕಿಲ್ಲದೆ ಹಾಲು ಕರೆಯುವ ಯಂತ್ರದ ಮೂಲಕ ೪ ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ೫೦೦ ಲೀಟರ್ ಸಾಮರ್ಥ್ಯದ ಬಲ್ಕ್ ಮಿಲ್ಕ್ ಕೂಲರ್‌ಗೆ ನೇರವಾಗಿ ಸೇರುತ್ತದೆ. ಸಂಜೆ ಅದನ್ನು ಅಷ್ಟೇ ಜಾಗರೂಕತೆಯಿಂದ ಡೇರಿಗೆ ತಂದು ಹಾಲನ್ನು ಪರೀಕ್ಷೆಗೊಳಪಡಿಸಿ ಕಚ್ಚಾ ಹಾಲು ಮತ್ತು ಪಾಶ್ಚೀಕರಿಸಿದ ಹಾಲನ್ನು ಪ್ಯಾಕ್ ಮಾಡಿ ಗ್ರಾಹಕರ ಮನೆಗೆ ತಲುಪಿಸಲಾಗುತ್ತದೆ.

ಹಸುವಿನ ಕೆಚ್ಚಲಿನಿಂದ ಬರುವ ಹಾಲು ಗಾಳಿ-ಬೆಳಕಿಗೆ ಸೇರಿದರೆ ಬ್ಯಾಕ್ಟೀರಿಯಾಗಳು ಅದನ್ನು ಆವರಿಸುತ್ತವೆ. ಅದರ ಶುದ್ಧತೆಯೂ ಹಾಳಾಗುತ್ತದೆ. ಅದು ಡೇರಿ ಸೇರಿ ಸಂಸ್ಕರಣೆಯಾಗಿ, ಪ್ಯಾಕ್ ಆಗಿ ಬರುವುದರಲ್ಲಿ ಅದರಲ್ಲಿರುವ ಪೋಷಕಾಂಶಗಳೂ ನಶಿಸಿರುತ್ತವೆ. ಹಾಗಾಗಿ ಆ ಹಾಲು ಗುಣಮಟ್ಟದಿಂದ ಕೂಡಿದ ಹಾಲಾಗಿರುವುದಿಲ್ಲ. ಶುದ್ಧತೆಯ ಜೊತೆಗೆ ಪೋಷಕಾಂಶಗಳು ಹಾಲಿನಲ್ಲಿ ಉಳಿದಾಗ ಮಾತ್ರ ಪರಿಶುದ್ಧ ಹಾಲು ದೊರೆಯುತ್ತದೆ ಎನ್ನುವುದು ಫಾರ್ಮ್ ಕನೆಕ್ಟ್ ಕಂಪನಿಯವರು ಹೇಳುವ ಮಾತಾಗಿದೆ.

ಬೆಂಗಳೂರು, ಹೈದರಾಬಾದ್‌ನಲ್ಲಿ ಮಾರುಕಟ್ಟೆ

ಮಂಡ್ಯದಲ್ಲಿ ತಯಾರಾಗುವ ಹಾಲನ್ನು ಬೆಂಗಳೂರು ಮತ್ತು ಹೈದರಾಬಾದ್‌ಗೆ ಸರಬರಾಜು ಮಾಡಲಾಗುತ್ತಿದೆ. ನಿತ್ಯ ಬೆಂಗಳೂರಿನಲ್ಲಿ ೧೦೦೦ ಜನರಿಗೆ ಸಾವಯವ ಹಾಲನ್ನು ಪೂರೈಸಲಾಗುತ್ತಿದೆ. ಕಚ್ಚಾ ಹಾಲು ಒಂದು ಲೀಟರ್‌ಗೆ ೭೮ ರು., ಪಾಶ್ಚೀಕರಿಸಿದ ಹಾಲು ಲೀಟರ್‌ಗೆ ೮೦ ರು.ನಂತೆ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ ಮೊಸರು, ಪನ್ನೀರ್, ತುಪ್ಪ, ಬೆಣ್ಣೆಯನ್ನೂ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಅರ್ಧ ಕೆಜಿ ಬೆಣ್ಣೆಗೆ ೫೬೦ ರು., ತುಪ್ಪ ಅರ್ಧ ಕೆಜಿ ೭೯೯ ರು., ಪನ್ನೀರ್ ೨೦೦ ಗ್ರಾಂಗೆ ೧೫೦ ರು., ಮೊಸರು ೫೦ ರಿಂದ ೧೦೦ ರು.ವರೆಗೆ ಮಾರಾಟ ಮಾಡಲಾಗುತ್ತಿದೆ.

ಪ್ರತಿದಿನ ಪೂರೈಕೆಯಾಗುವ ೩೦೦೦ ಲೀಟರ್ ಹಾಲಿನಲ್ಲಿ ೧೦೦೦ ಲೀಟರ್ ಹಾಲು ತಯಾರಿಕೆಗೆ, ೩೦೦ ಲೀಟರ್ ಮೊಸರು, ಉಳಿದದ್ದು ಪನ್ನೀರ್, ಬೆಣ್ಣೆ, ತುಪ್ಪ ತಯಾರಿಕೆಗೆ ಬಳಸಲಾಗುತ್ತಿದೆ.

ರೈತರಿಗೆ ಲೀಟರ್‌ಗೆ ೪೩ ರು. ನಿಂದ ೪೫ ರು.

ಫಾರ್ಮ್ ಕನೆಕ್ಟ್ ಕಂಪನಿಗೆ ಹಾಲು ಪೂರೈಸುವ ರೈತರಿಗೆ ಪ್ರತಿ ಲೀಟರ್‌ಗೆ ೪೩ ರಿಂದ ೪೫ ರು. ನೀಡಲಾಗುತ್ತಿದೆ. ರೈತರಿಗೆ ಪ್ರತಿ ತಿಂಗಳು ಏನಿಲ್ಲವೆಂದರೂ ೨ ಲಕ್ಷ ರು. ಆದಾಯ ಬರುವಂತೆ ಮಾಡುವುದು ಕಂಪನಿಯ ಧ್ಯೇಯವಾಗಿದೆ. ಹಾಲಿನ ಹಣವನ್ನು ವಿಳಂಬ ಮಾಡದೆ ಆಯಾ ತಿಂಗಳೇ ರೈತರಿಗೆ ನೀಡಲಾಗುತ್ತಿದೆ. ಇದರಿಂದ ಉತ್ತೇಜನಗೊಂಡು ಹೆಚ್ಚಿನ ರೈತರು ಹಾಲು ಪೂರೈಸುವುದಕ್ಕೆ ಮುಂದಾಗುತ್ತಿದ್ದಾರೆ. ಪರಿಶುದ್ಧತೆ ಮತ್ತು ಗುಣಮಟ್ಟದಿಂದ ಕೂಡಿರುವುದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆಯೂ ಹೆಚ್ಚಾಗುತ್ತಿರುವುದಾಗಿ ಫಾರ್ಮ್ ಕನೆಕ್ಟ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹಾಲಿನ ಕೃಷಿಯನ್ನು ಒಂದು ಸಮಗ್ರ, ಸಾವಯವ ಮತ್ತು ಸುಸ್ಥಿರ ಪರಿಸರ ವ್ಯವಸ್ಥೆಯನ್ನಾಗಿ ಪರಿವರ್ತಿಸುವ ಮೂಲಕ ಭೂತಾಯಿಯನ್ನು ಪುನರುಜ್ಜೀವನಗೊಳಿಸುವುದು, ಇದರಿಂದ ರೈತರ ಜೀವನವನ್ನು ಸಮೃದ್ಧಗೊಳಿಸುವುದು, ಮಣ್ಣಿನ ಆರೋಗ್ಯವನ್ನು ಮರಳಿ ಸ್ಥಾಪಿಸುವುದು ಮತ್ತು ಭವಿಷ್ಯದ ಪೀಳಿಗೆಯನ್ನು ಪೋಷಿಸುವುದು.

- ಮೂರ್ತಿ ಮುನಿಯಪ್ಪ, ಸಂಸ್ಥಾಪಕರು, ವ್ಯವಸ್ಥಾಪಕ ನಿರ್ದೇಶಕರು, ಫಾರ್ಮ್ ಕನೆಕ್ಟ್

ಹಾಲು ಪೂರೈಸುವ ರೈತರಿಗೆ ೪ ರಿಂದ ೫ ಎಕರೆ ಜಮೀನಿರಬೇಕು. ೨೦ ರಿಂದ ೨೫ ಹಸುಗಳನ್ನು ಸಾಕುತ್ತಿರಬೇಕು. ಅಂತಹವರನ್ನು ನೋಂದಣಿ ಮಾಡಿಕೊಂಡು ಅವರಿಗೆ ಹಸುವಿಗೆ ನೀಡುವ ಮೇವು, ಸಾಕಣೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಹಾಲು ಮತ್ತು ಉತ್ಪನ್ನಗಳ ಗುಣಮಟ್ಟಕ್ಕೆ ಆದ್ಯತೆ ನೀಡುವುದು ನಮ್ಮ ಗುರಿ.

- ಎನ್.ನಿತ್ಯಾನಂದ, ಮುಖ್ಯಸ್ಥರು, ಫಾರ್ಮ್ ಡೆವಲಪ್‌ಮೆಂಟ್ ಅಂಡ್ ಪ್ರೊಕ್ಯೂರ್‌ಮೆಂಟ್ ಆಫೀಸರ್

ಹಾಲು ಗಾಳಿ-ಬೆಳಕಿಗೆ ಬಂದ ಕೂಡಲೇ ಬ್ಯಾಕ್ಟೀರಿಯಾಗಳು ಅತಿಕ್ರಮಿಸುತ್ತವೆ. ಇದರಿಂದ ಹಾಲಿನ ಶುದ್ಧತೆ ಹಾಳಾಗುತ್ತದೆ. ಪೋಷಕಾಂಶಗಳು ನಶಿಸಿಹೋಗುತ್ತವೆ. ನಿರುಪಯುಕ್ತ ಹಾಲನ್ನು ನಾವು ಸೇವಿಸಿದಂತಾಗುತ್ತದೆ. ಅಮೃತ ಸಮಾನವಾದ ಹಾಲನ್ನು ಅಷ್ಟೇ ಜಾಗರೂಕತೆಯಿಂದ ಕಾಪಾಡಿದಾಗ ಪರಿಶುದ್ಧ, ಪೋಷಕಾಂಶಯುಕ್ತ ಹಾಲು ಸಿಗುತ್ತದೆ.

- ಮಹೇಶ್‌ಚಂದ್ರಗುರು, ಸಂಸ್ಥಾಪಕರು, ವಿಕಸನ ಸಂಸ್ಥೆ